ಕೋಲಾರ ವಿಧಾನಸಭಾ ಕ್ಷೇತ್ರದ ಮೇಲೆ ಕೊತ್ತೂರು ಮಂಜುನಾಥ್ ಕಣ್ಣು?; ಮಿಕ್ಸಿ ವಿತರಿಸುವ ಮೂಲಕ ಅಖಾಡಕ್ಕೆ

ನಗರಸಭೆ ಕಛೇರಿ ಆವರಣದಲ್ಲೇ ಮಿಕ್ಸಿ ವಿತರಣೆ ಮಾಡಲು ಮುಂದಾಗಿದ್ದಕ್ಕೆ ದಲಿತಮುಖಂಡರು ವಿರೋಧಿಸಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದರು, ಹೀಗಾಗಿ ಒಕ್ಕಲಿಗರ ಸಂಘದ ಹಾಸ್ಟಲ್ ಆವರಣದಲ್ಲಿ ಮಿಕ್ಸಿಗಳನ್ನು, ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ವಿತರಣೆ ಮಾಡಿದರು.

ಮಿಕ್ಸಿ ವಿತರಣೆ ಕಾರ್ಯಕ್ರಮ

ಮಿಕ್ಸಿ ವಿತರಣೆ ಕಾರ್ಯಕ್ರಮ

  • Share this:
ಕೋಲಾರ(ಸೆ.24): ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರ ಜಾತಿ ಪ್ರಮಾಣಪತ್ರ ಮೇಲಿನ ತಕರಾರಿಂದ, ಅವರು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಇದೀಗ ಕೊತ್ತೂರು ಮಂಜುನಾಥ್ ಅವರ ದೃಷ್ಟಿ ಸಾಮಾನ್ಯ ಕ್ಷೇತ್ರವಾಗಿರುವ ಕೋಲಾರ ವಿಧಾನಸಭಾ ಕ್ಷೇತ್ರದ ಮೇಲೆ  ನೆಟ್ಟಿದೆ. ಈ ಹಿಂದೆ ಮುಳಬಾಗಿಲು ತಾಲೂಕಿನಲ್ಲಿ ಮಾತನಾಡಿದ್ದ ಅವರು, ಮುಂದಿನ ನನ್ನ ರಾಜಕೀಯ ಭವಿಷ್ಯ ಕೋಲಾರದಲ್ಲಿ ಮುಂದುವರೆಯಲಿದೆ ಎಂದಿದ್ದರು, ಅದಕ್ಕೆ ಪುಷ್ಟಿ ನೀಡುವಂತೆ ಬುಧವಾರ ಪೌರಕಾರ್ಮಿಕರ ದಿನಾಚರಣೆ ಹಿನ್ನಲೆ, ಕೊತ್ತೂರು ಮಂಜುನಾಥ್ ಅವರ ಬೆಂಬಲಿಗರು ಕೋಲಾರ ನಗರಸಭೆಯ 318 ಪೌರಕಾರ್ಮಿಕರಿಗೂ ಮನೆ ಬಳಕೆಯ ಮಿಕ್ಸಿ ವಿತರಣೆ ಮಾಡಿದರು. ಆದರೆ ನಗರಸಭೆ ಕಛೇರಿ ಆವರಣದಲ್ಲೇ ಮಿಕ್ಸಿ ವಿತರಣೆ ಮಾಡಲು ಮುಂದಾಗಿದ್ದಕ್ಕೆ ದಲಿತಮುಖಂಡರು ವಿರೋಧಿಸಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದರು, ಹೀಗಾಗಿ ಒಕ್ಕಲಿಗರ ಸಂಘದ ಹಾಸ್ಟಲ್ ಆವರಣದಲ್ಲಿ ಮಿಕ್ಸಿಗಳನ್ನು, ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ವಿತರಣೆ ಮಾಡಿದರು.

ಆತ್ಮ ನಿರ್ಭರ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ವಿಜಯಪುರ ಜಿಲ್ಲಾಡಳಿತ ಕಾರ್ಯತಂತ್ರ

ಇದೇ ವೇಳೆ ಮಾತನಾಡಿದ ಅನಿಲ್‍ಕುಮಾರ್, ಪೌರಕಾರ್ಮಿಕರ ಬೇಡಿಕೆಯಂತೆ ಮಿಕ್ಸಿಯನ್ನ ವಿತರಣೆ ಮಾಡಲಾಗಿದೆ, ಆದರೆ ಇದಕ್ಕೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ, ಕೊತ್ತೂರು ಮಂಜುನಾಥ್ ಅವರು, ಮುಳಬಾಗಿಲು ತಾಲೂಕಿನಲ್ಲಿ ಶಾಸಕರಾಗಿದ್ದಾಗಲೂ, ಕೋಲಾರ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಗಳನ್ನ ಮಾಡಿದ್ದರು. ಇದೀಗ ಅವರು ಕೋಲಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ದೃಷ್ಟಿಯಿಂದ ಇದೆಲ್ಲ ಮಾಡುತ್ತಿಲ್ಲ ಎಂದರು.

ಇನ್ನು ನಗರಸಭೆ ಕಚೇರಿ ಆವರಣದಲ್ಲಿ ಮಿಕ್ಸಿಗಳನ್ನ ವಿತರಣೆ ಮಾಡಲು ವಿರೋಧಿಸಿದ್ದ ದಲಿತ ಮುಖಂಡ ನಾರಾಯಣಸ್ವಾಮಿ, ಒಕ್ಕಲಿಗರ ಹಾಸ್ಟಲ್ ಆವರಣದಲ್ಲಿ ಮಿಕ್ಸಿಗಳನ್ನ ವಿತರಣೆ ಮಾಡುತ್ತಿದ್ದ ಮಾಹಿತಿ ತಿಳಿದು, ರಸ್ತೆಯಲ್ಲೆ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲೆ ಕುಳಿತು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಾ ಕೊತ್ತೂರು ಮಂಜುನಾಥ್ ಅವರ ವಿರುದ್ದ ಘೋಷಣೆಗಳನ್ನ ಹಾಕಿದರು.

ಇನ್ನು ಇದೇ ವೇಳೆ ಮಧ್ಯಪ್ರವೇಶ ಮಾಡಿದ ಪೌರಕಾರ್ಮಿಕರೊಬ್ಬರು, ದಲಿತ ಮುಖಂಡ ನಾರಾಯಣಸ್ವಾಮಿ ವಿರುದ್ದವೇ ಕಿಡಿಕಾರಿದರು, ನಾವು ಬಡವರು, ದಾನಿಗಳು ಏನೇ ಕೊಟ್ಟರು ಸ್ವೀಕರಿಸುತ್ತೇವೆ. ಅವರು ದೊಡ್ಡ ಮನಸ್ಸಿಂದ ಕೊಡ್ತಿದ್ದಾರೆ, ಅದಕ್ಕು ಕಲ್ಲು ಹಾಕಬೇಡಿ ಎಂದು ಕೈ ಮುಗಿದು ನೆಲದಲ್ಲೆ ಕುಳಿತು ಕಿಡಿಕಾರಿದರು.

ಒಟ್ಟಿನಲ್ಲಿ ಕೊತ್ತೂರು ಮಂಜುನಾಥ್ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆ ಎದುರಿಸಲು ಸರ್ವ ಸನ್ನದ್ದವಾಗಿದ್ದು, ಅದರ ಮೊದಲ ಭಾಗದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಮನೆಮಾತಾಗಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
Published by:Latha CG
First published: