ಮಾಜಿ ಡಿಸಿಎಂ ಪರಮೇಶ್ವರ್​​​ ಮನೆ ಮೇಲೆ ಐಟಿ ದಾಳಿ: ರಾಜ್ಯ ಕಾಂಗ್ರೆಸ್​​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​​ ಖಂಡನೆ

ಈ ಹಿಂದೆಯೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆದಿತ್ತು. ಈ ಬೆನ್ನಲ್ಲೀಗ ಮತ್ತೇ ಕಾಂಗ್ರೆಸ್​ ನಾಯಕರ ಮೇಲೆ ಐಟಿ ಅಸ್ತ್ರವನ್ನು ಕೇಂದ್ರ ಬಳಸುತ್ತಿದೆ.

news18
Updated:October 10, 2019, 9:20 PM IST
  • News18
  • Last Updated: October 10, 2019, 9:20 PM IST
  • Share this:
ಬೆಂಗಳೂರು(ಅ.10): ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್​​ ಮನೆ ಮೇಲಿನ ಐಟಿ ದಾಳಿಯನ್ನು ರಾಜ್ಯ ಕಾಂಗ್ರೆಸ್​​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​​ ಖಂಡಿಸಿದ್ದಾರೆ.

"ಒಂದೆಡೆ ಕಾಂಗ್ರೆಸ್​​ ಮಾಜಿ ಸಚಿವ ಡಿ.ಕೆ ಶಿವಕುಮಾರ್​​​​​ರನ್ನು ದೆಹಲಿಯ ತಿಹಾರ್​​ ಜೈಲಿಗೆ ಹಾಕಲಾಗಿದೆ. ಇನ್ನೊಂದೆಡೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್​ ಮೇಲೆ ಐಟಿ ದಾಳಿ ಮಾಡಿಸಲಾಗಿದೆ. ಕೇಂದ್ರ ಸರ್ಕಾರವೂ ಐಟಿ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್​​ ನಾಯಕರನ್ನು ಟಾರ್ಗೇಟ್​​ ಮಾಡಲಾಗುತ್ತಿದೆ. ಇದಕ್ಕೆ ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ" ಎಂದು ರಾಜ್ಯ ಕಾಂಗ್ರೆಸ್​​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​​​​​ ಟ್ವೀಟ್​​ ಮಾಡಿದ್ದಾರೆ.ಕಾಂಗ್ರೆಸ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆನ್ನಲ್ಲೀಗ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೂ ಐಟಿ ಬಿಸಿ ತಟ್ಟಿದೆ. ಡಾ.ಪರಮೇಶ್ವರ್, ಮಾಜಿ ಸಚಿವ ಆರ್.ಎಲ್.ಜಾಲಪ್ಪ ಒಡೆತನದ ಶಿಕ್ಷಣ ಸಂಸ್ಥೆಗಳು, ನಿವಾಸ, ಕಚೇರಿ ಸೇರಿದಂತೆ ರಾಜ್ಯದ ಹಲವು ಕಡೆ ಇಂದು ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಮಾಜಿ ಡಿಸಿಎಂಗೆ ಸೇರಿದ ತುಮಕೂರಿನ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು, ನೆಲಮಂಗಲದ ವೈದ್ಯಕೀಯ ಕಾಲೇಜು, ಬೆಂಗಳೂರಿನ ಸದಾಶಿವನಗರದ ನಿವಾಸ, ಕಚೇರಿ ಹಾಗೂ ಸಹೋದರ ಒಡೆತನದ ಸಂಸ್ಥೆಗಳ ಮೇಲೂ ದಾಳಿ ನಡೆಸಲಾಗಿದೆ.ಮಾಜಿ ಸಚಿವ ಆರ್.ಎಲ್.ಜಾಲಪ್ಪ ಒಡೆತನದ ಶಿಕ್ಷಣ ಸಂಸ್ಥೆ ಮತ್ತು ಅವರ ನಿವಾಸದ ಮೇಲೂ ಐಟಿ ದಾಳಿ ಮಾಡಿದೆ. ಕೋಲಾರ ಸಮೀಪದ ದೇವರಾಜ ಅರಸು ವೈದ್ಯಕೀಯ ಕಾಲೇಜು, ಆರ್.ಎಲ್.ಜಾಲಪ್ಪ ಆಸ್ಪತ್ರೆ, ದೊಡ್ಡಬಳ್ಳಾಪುರದ ಸೋಮೇಶ್ವರ ನಗರದ ಆರ್.ಜಾಲಪ್ಪ ಪುತ್ರ ರಾಜೇಂದ್ರರ ನಿವಾಸದ ಮೇಲೆ ಕೂಡ ದಾಳಿ ಮಾಡಲಾಗಿದೆ.

ಇಂದು ಮುಂಜಾನೆಯೇ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದೆ. ಅಲ್ಲದೇ ದಾಖಲೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಐಟಿ ಅಧಿಖಾರಿಗಳು, ಇನ್ನೂ ಮೂರು ದಿನಗಳ ಕಾಲ ವಿಚಾರಣೆ ಮುಂದುವರೆಸಲಿದ್ದಾರೆ. ನಂತರ ಬೆಂಗಳೂರಿನ ಐಟಿ ಕಚೇರಿಗೆ ಪರಮೇಶ್ವರ್​ರನ್ನೇ ಕರೆಸಿಕೊಂಡು ವಿಚಾರಣೆ ನಡೆಸಲಿದ್ದಾರೆ ಎನ್ನುತ್ತಿವೆ ಮೂಲಗಳು.

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್​ನ ಪ್ರಭಾವಿ ನಾಯಕರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಲೇ ಇದ್ದಾರೆ. ಈ ಹಿಂದೆಯೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆದಿತ್ತು. ಈ ಬೆನ್ನಲ್ಲೀಗ ಮತ್ತೇ ಕಾಂಗ್ರೆಸ್​ ನಾಯಕರ ಮೇಲೆ ಐಟಿ ಅಸ್ತ್ರವನ್ನು ಕೇಂದ್ರ ಬಳಸುತ್ತಿದೆ.
-------------
First published:October 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading