news18-kannada Updated:January 27, 2020, 1:30 PM IST
ಶ್ರೀರಾಮುಲು- ಕವಿತಾ ರೆಡ್ಡಿ
ಬೆಂಗಳೂರು (ಜ. 27): ರಾಯಚೂರಿನಲ್ಲಿ ಭಾನುವಾರ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ್ದ ಆರೋಗ್ಯ ಸಚಿವ ಶ್ರೀರಾಮುಲು ತಪ್ಪು ತಪ್ಪಾಗಿ ಕನ್ನಡ ಮಾತನಾಡಿ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಶ್ರೀರಾಮುಲುಗೆ ತೆಲುಗು ಭಾಷೆಯ ಮೂಲಕ ಕನ್ನಡ ಕಲಿಯುವ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ರಾಯಚೂರಿನಲ್ಲಿ ನಿನ್ನೆ
ಗಣರಾಜ್ಯೋತ್ಸವದ ಭಾಷಣ ಮಾಡಿದ್ದ ಸಚಿವ ಶ್ರೀರಾಮುಲು ತಪ್ಪುತಪ್ಪಾಗಿ ಕನ್ನಡ ಮಾತನಾಡಿದ್ದರು. ಆರಂಭದಲ್ಲಿ ಜನವರಿ 26ರ ಗಣರಾಜ್ಯೋತ್ಸವ ಎಂದು ಹೇಳುವಲ್ಲೇ ಎಡವಿದ್ದ ಶ್ರೀರಾಮುಲು 'ಆಗಸ್ಟ್ 15 ಗಣರಾಜ್ಯೋತ್ಸವ' ಎಂದು ಭಾಷಣವನ್ನು ಆರಂಭಿಸಿದ್ದರು. 'ಭಾರತೀಯ ನಾಗರಿಕರಿಗೆ ಸಾಮಾಜಿಕವಾಗಿ ನಾಯಿ ಕೊಟ್ಟ ದಿನವಿದು', 'ನಮ್ಮ ದೇಶ ವಿಶ್ವಕ್ಕೆ ಮಾಧುರಿಯಾಗಿದೆ' ಎಂದು ಹೇಳಿದ್ದ ಶ್ರೀರಾಮುಲು ಅವರ ಭಾಷಣ ವೈರಲ್ ಆಗಿತ್ತು.
ಇದನ್ನೂ ಓದಿ: ಪಕ್ಷದ ನಾಯಕರು ಕೇಳಿದರೆ ಖುಷಿಯಿಂದ ರಾಜೀನಾಮೆ ನೀಡುತ್ತೇನೆ; ಡಿಸಿಎಂ ಗೋವಿಂದ ಕಾರಜೋಳ
ಕಳೆದ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ದಿನ ಕೂಡ ಕನ್ನಡ ಭಾಷೆಯಲ್ಲಿ ಮನಸಿಗೆ ಬಂದಂತೆ ಮಾತನಾಡಿ ಶ್ರೀರಾಮುಲು ತೀವ್ರ ಮುಜುಗರಕ್ಕೀಡಾಗಿದ್ದರು. ಕುಯೆಂಪು, ಮದ್ದಣ್ಣ, ಬೇರೆಂದ್ರೆ, ಲೇಕಕಗುರು ಎಂದು ಹೇಳಿದ್ದ ಶ್ರೀರಾಮುಲು ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿತ್ತು.

ಕವಿತಾ ರೆಡ್ಡಿ ಅಮೇಜಾನ್ನಲ್ಲಿ ಖರೀದಿಸಿರುವ ಪುಸ್ತಕ
ಈ ಹಿನ್ನೆಲೆಯಲ್ಲಿ
ಶ್ರೀರಾಮುಲು ಅವರಿಗೆ ಅಮೇಜಾನ್ನಲ್ಲಿ ತೆಲುಗಿನಿಂದ ಕನ್ನಡ ಕಲಿಯುವ ಪುಸ್ತಕವೊಂದನ್ನು ಆರ್ಡರ್ ಮಾಡಿರುವ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಆ ಪುಸ್ತಕವನ್ನು ಬಳ್ಳಾರಿಯ ಶ್ರೀರಾಮುಲು ಅವರ ಕಚೇರಿಯ ವಿಳಾಸಕ್ಕೆ ಕಳುಹಿಸಿದ್ದಾರೆ. ಅಮೇಜಾನ್ನಲ್ಲಿ ಕನ್ನಡ ಕಲಿಕೆಯ ಪುಸ್ತಕವನ್ನು ಖರೀದಿ ಮಾಡಿ, ಕಳುಹಿಸಿರುವ ವಿವರವನ್ನು ಕವಿತಾ ರೆಡ್ಡಿ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡು, ಸಚಿವ ಶ್ರೀರಾಮುಲುಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸಂಪ್ರದಾಯಕ್ಕೆ ಇತಿಶ್ರೀ ಹಾಡಿದ ಸಿಎಂ; ದೆಹಲಿಗೆ ತೆರಳದೆ ಸಂಪುಟ ವಿಸ್ತರಿಸಲು ಮುಂದಾದ ಬಿಎಸ್ವೈ
'ಗೌರವಾನ್ವಿತ ಶ್ರೀರಾಮುಲು ಅಣ್ಣನವರೇ, ನನಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಕಾಳಜಿಯಿದೆ. ದಯವಿಟ್ಟು ನಮ್ಮ ಭಾಷೆಯನ್ನು ಕೊಲ್ಲಬೇಡಿ.
ತೆಲುಗು ಭಾಷೆಯ ಮೂಲಕ ಕನ್ನಡವನ್ನು ಸರಳವಾಗಿ ಕಲಿಯುವ ಪುಸ್ತಕವೊಂದನ್ನು ನಿಮಗೆ ಉಡುಗೊರೆಯಾಗಿ ನೀಡುತ್ತಿದ್ದೇನೆ. ಈ ಪುಸ್ತಕದ ಮೂಲಕ ಕನ್ನಡ ಕಲಿತು, ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನದ ಭಾಷಣದ ದಿನವಾದರೂ ನೀವು ಸರಿಯಾದ ಕನ್ನಡದಲ್ಲಿ ಭಾಷಣ ಮಾಡಲಿ ಎಂಬುದು ನನ್ನ ಉದ್ದೇಶ. ನಾನು ನೀಡುತ್ತಿರುವ ಈ ಚಿಕ್ಕ ಉಡುಗೊರೆಯನ್ನು ತಾವು ಸ್ವೀಕರಿಸಬೇಕು!' ಎಂದು ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಟ್ವೀಟ್ ಮಾಡಿದ್ದಾರೆ. ಜೊತೆಯಲ್ಲಿ ಮತ್ತೊಂದು ಸಾಲನ್ನೂ ಸೇರಿಸಿರುವ ಕವಿತಾ ರೆಡ್ಡಿ 'ಕುಮಾರಣ್ಣನವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವ ಮೊದಲು ನೀವು ಕನ್ನಡ ಕಲಿಯಿರಿ!' ಎಂದು ಕುಟುಕಿದ್ದಾರೆ.
ಶ್ರೀರಾಮುಲು ಅವರ ಹೆಸರಿನಲ್ಲಿ ಬಳ್ಳಾರಿ ಅಡ್ರೆಸ್ಗೆ ತೆಲುಗು ಭಾಷೆಯಿಂದ ಕನ್ನಡ ಕಲಿಕೆಯ ಪುಸ್ತಕ ಬುಕ್ ಮಾಡಿರುವ ಕವಿತಾ ರೆಡ್ಡಿಯ ಟ್ವೀಟ್ಗೆ ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೆ.
First published:
January 27, 2020, 1:24 PM IST