ಕಳಚಿದ ಕಾಂಗ್ರೆಸ್​ನ ಮತ್ತೊಂದು ಕೊಂಡಿ - ಮಾಜಿ ಸಚಿವ ಜಿ. ರಾಮಕೃಷ್ಣ ಇನ್ನಿಲ್ಲ

ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆಯವರ ಸಮಕಾಲೀನರಾಗಿದ್ದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ 84 ವರ್ಷದ ಜಿ. ರಾಮಕೃಷ್ಣ ಅವರು ಕಲಬುರ್ಗಿಯ ಪ್ರಶಾಂತ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

news18-kannada
Updated:August 10, 2020, 11:23 AM IST
ಕಳಚಿದ ಕಾಂಗ್ರೆಸ್​ನ ಮತ್ತೊಂದು ಕೊಂಡಿ - ಮಾಜಿ ಸಚಿವ ಜಿ. ರಾಮಕೃಷ್ಣ ಇನ್ನಿಲ್ಲ
ಜಿ ರಾಮಕೃಷ್ಣ
  • Share this:
ಕಲಬುರ್ಗಿ(ಆ. 10): ಕಲ್ಯಾಣ ಕರ್ನಾಟಕದ ಮತ್ತೊಂದು ಕಾಂಗ್ರೆಸ್ ಕೊಂಡಿ ಕಳಚಿದೆ. ಮಾಜಿ ಸಿಎಂ ದಿವಂಗತ ಎನ್. ಧರ್ಮಸಿಂಗ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರುಗಳ ಸಮಕಾಲೀನರಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಜಿ. ರಾಮಕೃಷ್ಣ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಿ.ರಾಮಕೃಷ್ಣ ಕಲಬುರ್ಗಿಯ ಪ್ರಶಾಂತ ನಗರದ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. 

ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಅವರು, ನಂತರ ಮನೆಯಲ್ಲಿಯೇ ಇದ್ದರು. ಮಹಾನಗರ ಪಾಲಿಕೆ ಸದಸ್ಯರಾಗಿ ರಾಜಕೀಯ ಜೀವನಕ್ಕೆ ಪ್ರವೇಶ ಕೊಟ್ಟಿದ್ದ ರಾಮಕೃಷ್ಣ, ನಂತರ ಕಮಲಾಪುರ ಎಸ್.ಸಿ. ಮೀಸಲು ಕ್ಷೇತ್ರ, ಗ್ರಾಮೀಣ ಮೀಸಲು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಅನಾರೋಗ್ಯದ ಕಾರಣದಿಂದಾಗಿ ಕಳೆದ ವಿಧಾನಸಭೆಯಲ್ಲಿ ತಮ್ಮ ಬದಲಿಗೆ ಪುತ್ರ ವಿಜಯಕುಮಾರ್ ರನ್ನು ಅಖಾಡಕ್ಕಿಳಿಸಿದ್ದರಾದರೂ ಯಶಸ್ಸು ಕಂಡಿರಲಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ತಮ್ಮದೇ ಆದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕಲ್ಯಾಣ ಕರ್ನಾಟಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಅವರ ಅಗಲಿಕೆ ಅಭಿಮಾನಿಗಳಲ್ಲಿ ಆಘಾತ ಉಂಟು ಮಾಡಿದೆ.

ಇದನ್ನೂ ಓದಿ: ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​; ರಾಜ್ಯದ ಮಳೆಗೆ 13 ಬಲಿ

ಮಾಜಿ ಸಚಿವ ಜಿ. ರಾಮಕೃಷ್ಣ ನಿಧನಕ್ಕೆ ಡಿಸಿಎಂ ಗೋವಿಂದ ಕಾರಜೋಳ, ಸಂಸದ ಉಮೇಶ್ ಜಾಧವ್, ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಸಂತಾಪ ಸಂದೇಶ ಕಳುಹಿಸಿರುವ ಡಿಸಿಎಂ ಗೋವಿಂದ ಕಾರಜೋಳ, ಜಿ.ರಾಮಕೃಷ್ಣ ಸರಳ ವ್ಯಕ್ತಿತ್ವದವರಾಗಿದ್ದರು. ಜನಾನುರಾಗಿದ್ದ ಅವರು, ಸಚಿವರಾಗಿ, ಹಲವು ಬಾರಿ ಶಾಸಕರಾಗಿ ಸೇವೆಸಲ್ಲಿಸಿದ್ದಾರೆ. ಕಲಬುರ್ಗಿ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ನಿಧನದಿಂದ  ಈ ಪ್ರದೇಶದ ಓರ್ವ ಹಿರಿಯ  ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.ಮತ್ತೊಂದೆಡೆ ಕಾಂಗ್ರೆಸ್ ನಾಯಕರೂ ಸಾಂತಾಪ ಸೂಚಿಸಿದ್ದಾರೆ. ರಾಮಕೃಷ್ಣ ಅಗಲಿಕೆಯಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಅವರ ಅಗಲಿಕೆಯ ದುಃಖ ಭರಿಸೋ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಶಾಸಕ ಪ್ರಿಯಾಂಕ್ ಖರ್ಗೆ, ಎಂ.ವೈ.ಪಾಟೀಲ, ಖನೀಸ್ ಫಾತಿಮಾ ಬೇಗಂ, ಅಜಯಸಿಂಗ್, ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ. ಶಾಣಪ್ಪ, ಮಾಜಿ ಎಂ.ಎಲ್.ಸಿ. ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರರಿಂದಲೂ ಸಂತಾಪ ಸೂಚಿಸಿದ್ದಾರೆ.
Published by: Vijayasarthy SN
First published: August 10, 2020, 11:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading