ಡಿಕೆಶಿಗೆ ಮತ್ತೆ ಸಂಕಷ್ಟ; ಸೆ.17ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದ ನ್ಯಾಯಾಲಯ

ವಿಶ್ರಾಂತಿ ಮತ್ತು ನಿದ್ದೆಯ ನೆಪ ಎಂದು ಇ.ಡಿ.ವಕೀಲರು ಹೇಳುತ್ತಾರೆ. ಎಷ್ಟೊತ್ತು ಮಲಗಿರಲು ಸಾಧ್ಯ? ಅನವಶ್ಯಕ ಉತ್ತರ ಎಂದು ಹೇಳುತ್ತಾರೆ? ಎಂದು ಹೇಳುತ್ತಾರೆ. ಹಾಗಾದರೆ, ಇವರಿಗೆ ಬೇಕಾದ ಉತ್ತರ ಯಾವುದು?. ಈಗ ಕನ್ಪಂಟ್ರೇಷನ್ ಮೂಲಕ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ.  ಇಲ್ಲಿಯವರೆಗೆ ಏಕೆ ಮಾಡಲಿಲ್ಲ? ಎಂದು ಅಭಿಷೇಕ್ ಮನು ಸಿಂಘ್ವಿ ಪ್ರಶ್ನೆ ಮಾಡಿ, ವಾದ ಮಂಡನೆ ಮುಕ್ತಾಯ ಮಾಡಿದರು.

HR Ramesh | news18-kannada
Updated:September 13, 2019, 7:15 PM IST
ಡಿಕೆಶಿಗೆ ಮತ್ತೆ ಸಂಕಷ್ಟ; ಸೆ.17ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದ ನ್ಯಾಯಾಲಯ
ನ್ಯಾಯಾಲಯದ ಆದೇಶ ಪ್ರತಿ
  • Share this:
ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರಮುಖ ಆರೋಪಿಯಾಗಿರುವ ದೆಹಲಿಯ ನಿವಾಸದಲ್ಲಿ ಹಣ ಪತ್ತೆ ಪ್ರಕರಣ ಸಂಬಂಧ ದೆಹಲಿಯ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ಇ.ಡಿ. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಡಿಕೆಶಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಡಿ.ಕೆ.ಶಿವಕುಮಾರ್ ಅವರನ್ನು ಸೆ.17ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದರು.

ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಲಾಗುವುದು. ಇ.ಡಿ. ಅಧಿಕಾರಿಗಳು ಡಿಕೆಶಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿದಿನ ಎರಡು ಸಲ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಿದ ನ್ಯಾಯಾಧೀಶ, ಸೆ. 17ನೇ ತಾರೀಖು ಎಷ್ಟೊತ್ತಿಗೆ ಡಿಕೆಶಿಯನ್ನು‌ ಕರೆದುಕೊಂಡು ಬರಬೇಕೆಂದು 17ರಂದು ಬೆಳಿಗ್ಗೆ ತಿಳಿಸುತ್ತೇವೆ ಎಂದು ಹೇಳಿದರು.

ದೆಹಲಿಯ ಡಿಕೆಶಿ ನಿವಾಸದಲ್ಲಿ ಪತ್ತೆಯಾದ ಹಣ ಪ್ರಕರಣ ಸಂಬಂಧ ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗಾಗಿ ಸೆ.1ರಿಂದ 13ರವರೆಗೆ ಜಾರಿನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ,  ಆರ್ಥಿಕ ಅಪರಾಧಗಳ ನ್ಯಾಯಾಲಯದ ನ್ಯಾಯಾಧೀಶ​ ಅಜಯ್​ ಕುಮಾರ್ ಕುಹರ್ ಆದೇಶ ನೀಡಿದರು. ಡಿಕೆಶಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಮತ್ತೆ  ಡಿಕೆಶಿ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ಕೋರ್ಟ್​ ಸುತ್ತ ಡಿಕೆಶಿ ಬೆಂಬಲಿಗರು ನೆರೆದಿದ್ದರಿಂದ ಭಾರಿ ಬಂದೋಬಸ್ತ್​ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೋರ್ಟ್​ ವಿಚಾರಣೆ ವೇಳೆ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಡಿ.ಕೆ. ಸುರೇಶ್, ಮಾಜಿ ಸಂಸದ ಶಿವರಾಮೇಗೌಡ ಹಾಜರಿದ್ದರು.

ಇದನ್ನು ಓದಿ: ಐಎನ್ಎಕ್ಸ್ ಮೀಡಿಯಾ ಪ್ರಕರಣ: ಪಿ. ಚಿದಂಬರಮ್ ಅರ್ಜಿ ವಜಾ; ಸೆ. 19ರವರೆಗೂ ತಿಹಾರ್ ಜೈಲುವಾಸ ಮುಂದುವರಿಕೆ

ಇ.ಡಿ ಪರ ವಾದ ಮಂಡಿಸಿದ ವಕೀಲ ನಟರಾಜ ಅವರು​, ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಅವರು ವಿಚಾರಣೆಯಲ್ಲಿ ಅಧಿಕಾರಿಗಳಿಗೆ ಸರಿಯಾಗಿ ಸಹಕರಿಸಿಲ್ಲ. ನಿದ್ದೆ ಮತ್ತು ವಿಶ್ರಾಂತಿ ನೆಪ ಒಡ್ಡಿ ತುಂಬಾ ಸಮಯ ವ್ಯರ್ಥ ಮಾಡಿದ್ದಾರೆ. ತುಂಬಾ ಉದ್ದದ ಉತ್ತರ ನೀಡಿದ್ದಾರೆ. ಬ್ಯಾಂಕ್ ಅಕೌಂಟ್​ಗಳ ವಿವರ ಕಲೆಹಾಕಲು ಸಾಧ್ಯವಾಗಿಲ್ಲ.  ಅಪಾರವಾದ ಅಕ್ರಮ ಹಣ, ಆಸ್ತಿಯ ವಿವರಗಳು ಇ.ಡಿ.ಗೆ ಸಿಕ್ಕಿವೆ. ಮಗಳ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬದ ಇತರೆ ಸದಸ್ಯರ ಹೆಸರಲ್ಲೂ ಆಸ್ತಿ ಮಾಡಿದ್ದಾರೆ.  ದೇಶದ ಬೊಕ್ಕಸಕ್ಕೆ ದ್ರೋಹ ಎಸಗಿದ್ದಾರೆ. ಹೀಗಾಗಿ ಇನ್ನು ಹೆಚ್ಚಿನ ವಿಚಾರಣೆಯ ಅವಶ್ಯಕತೆ ಇರುವುದರಿಂದ ಅವರನ್ನು ಐದು ದಿನಗಳ ಕಾಲ ಇ.ಡಿ. ವಶಕ್ಕೆ ಒಪ್ಪಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು, ಇಷ್ಟು ದಿನಗಳ ಕಾಲ ನೀಡದ ಉತ್ತರವನ್ನು ಐದು ದಿನದಲ್ಲಿ ನೀಡುತ್ತಾರೆಯೇ ಎಂದು ವಕೀಲರನ್ನು ಪ್ರಶ್ನೆ ಮಾಡಿದರು. ಇದಕ್ಕೆ ವಕೀಲರು ಮುಖಾಮುಖಿಯಾಗಿ (ಕಾನ್​ಫಂಟ್ರೆಷನ್​) ಮೂಲಕ ಉತ್ತರ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ದೆಹಲಿ ಫ್ಲಾಟ್​ನಲ್ಲಿ ಸಿಕ್ಕಿರುವ ಹಣದ ಬಗ್ಗೆ ಸರಿಯಾದ ಮಾಹಿತಿ, ದಾಖಲೆ ಸಿಕ್ಕಿಲ್ಲ. ಸಿಕ್ಕಿರುವ ಹಣ ಅಕ್ರಮದ್ದು. ಇದರ ಬಗ್ಗೆ ಸುದೀರ್ಘ ವಿಚಾರಣೆ ಆಗಬೇಕಿದೆ ಎಂದು ಮನವಿ ಮಾಡಿದರು.

ಡಿಕೆ ಶಿವಕುಮಾರ್ ಪರವಾಗಿ ವಕೀಲ ಅಭಿಷೇಕ್​ ಮನುಸಿಂಘ್ವಿ ವಾದ ಮಂಡನೆ ಮಾಡಿದರು. ಅನಾರೋಗ್ಯದ ನಡುವೆಯೂ ಡಿಕೆಶಿ ವಿಚಾರಣೆಗೆ ಸಹಕರಿಸಿದ್ದಾರೆ. ನೆನ್ನೆ ಅವರ ಬಿಪಿ 200/140 ಇತ್ತು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಬಿಪಿ 160/120 ನಾರ್ಮಲ್​ಗೆ ಬಂದಿದೆ. ಅವರಿಗೆ ಈಗ ಚಿಕಿತ್ಸೆಯ ಅವಶ್ಯಕತೆ ಇದೆ. ಕಾನೂನಿನಲ್ಲಿ ಅವಕಾಶ ಇದೆ ಎನ್ನುವ ಕಾರಣಕ್ಕೆ ಕಾಲಾವಕಾಶ ಕೇಳುತ್ತಿದ್ದಾರೆ. ಕಾಲಾವಕಾಶ ಕೇಳುವುದರಲ್ಲಿ ಅರ್ಥವೇ ಇಲ್ಲ. 100 ರೂ. ಕದ್ದಿದ್ದರೆ 100 ರೂ. ಬಗ್ಗೆ ತನಿಖೆ ಮಾಡಿ. ಅವರ ಒಟ್ಟಾರೆ ಆಸ್ತಿಯ ಬಗ್ಗೆ ತನಿಖೆ ಏಕೆ? ಅನವಶ್ಯಕವಾಗಿ ಬೇರೆ ಬೇರೆ ಪ್ರಕರಣಗಳನ್ನು ತಳುಕು ಹಾಕಲಾಗುತ್ತಿದೆ. ಇವರು ಈ ರೀತಿ ತನಿಖೆ ಮಾಡಿದರೆ ಅದು ಮುಗಿಯದ ಕತೆಯಾಗಲಿದೆ. ದೆಹಲಿಯಲ್ಲಿ ಸಿಕ್ಕ ಹಣಕ್ಕೆ ಐಟಿ ರಿಟರ್ನ್ಸ್, ಸೇಲ್ ಡೀಡ್ಸ್ ಮತ್ತಿತರ ದಾಖಲೆಗಳು ಲಭ್ಯವಾಗಿವೆ. ಆದರೆ, ತನಿಖಾ ಸಂಸ್ಥೆ ಆ ದಾಖಲೆಗಳನ್ನು ಪರಿಗಣಿಸುತ್ತಿಲ್ಲ ಎಂದು ಆಪಾದಿಸಿದರು.
ನ್ಯಾಯಾಲಯದ ಆದೇಶ ಪ್ರತಿ


ಮುಂದುವರೆದು, ಆಂಜನೇಯ, ಸುನೀಲ್ ಕುಮಾರ್ ಶರ್ಮಾ, ಸಚಿನ್ ನಾರಾಯಣ್ ಬೇರೆಯವರು. ಡಿಕೆಶಿ ವ್ಯವಹಾರಗಳಿಗೆ ಸಂಬಂಧಿಸಿದವರಲ್ಲ. ರಾಜ್ಯ ಹೈಕೋರ್ಟ್ ಆಂಜನೇಯ ಮತ್ತು ಸುನೀಲ್ ಕುಮಾರ್ ಶರ್ಮಾಗೆ ಮಧ್ಯಂತರ ರಕ್ಷಣೆ ನೀಡಿದೆ ಎಂದರು.

ವಿಶ್ರಾಂತಿ ಮತ್ತು ನಿದ್ದೆಯ ನೆಪ ಎಂದು ಇ.ಡಿ.ವಕೀಲರು ಹೇಳುತ್ತಾರೆ. ಎಷ್ಟೊತ್ತು ಮಲಗಿರಲು ಸಾಧ್ಯ? ಅನವಶ್ಯಕ ಉತ್ತರ ಎಂದು ಹೇಳುತ್ತಾರೆ? ಎಂದು ಹೇಳುತ್ತಾರೆ. ಹಾಗಾದರೆ, ಇವರಿಗೆ ಬೇಕಾದ ಉತ್ತರ ಯಾವುದು?. ಈಗ ಕನ್ಪಂಟ್ರೇಷನ್ ಮೂಲಕ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ.  ಇಲ್ಲಿಯವರೆಗೆ ಏಕೆ ಮಾಡಲಿಲ್ಲ? ಎಂದು ಅಭಿಷೇಕ್ ಮನು ಸಿಂಘ್ವಿ ಪ್ರಶ್ನೆ ಮಾಡಿ, ವಾದ ಮಂಡನೆ ಮುಕ್ತಾಯ ಮಾಡಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಡಿ.ಕೆ.ಶಿವಕುಮಾರ್ ಅವರನ್ನು ಸೆ.17ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದರು.

 

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading