ಕರ್ನಾಟಕದ ರೆಸಾರ್ಟ್​​​ನಲ್ಲಿ ಮಧ್ಯಪ್ರದೇಶದ ಕೈ ಶಾಸಕರು; ಡಿಕೆಶಿಯಂತೆಯೇ ಗೇಟ್ ಕಾಯುತ್ತಿರುವ ದಿಗ್ವಿಜಯ್ ಸಿಂಗ್

Madhya Pradesh Political Crisis: ರೆಬೆಲ್ ಶಾಸಕರ ಭೇಟಿಗೆ ಅವಕಾಶ ಸಿಗದ ಕಾರಣ ರಮಡಾ ರೆಸಾರ್ಟ್ ಬಳಿ ಸೇರಿದ 500ಕ್ಕೂ ಅಧಿಕ ಕಾರ್ಯಕರ್ತರು ಡಿಕೆಶಿ ಹಾಗೂ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಕೈ ಶಾಸಕರಾದ ಭೈರತಿ ಸುರೇಶ್, ಕೃಷ್ಣ ಭೈರೇಗೌಡ, ರಿಜ್ವಾನ್ ಅರ್ಷದ್, ಎನ್. ಹ್ಯಾರಿಸ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ದಿಗ್ವಿಜಯ್ ಸಿಂಗ್

ದಿಗ್ವಿಜಯ್ ಸಿಂಗ್

  • Share this:
ಬೆಂಗಳೂರು (ಮಾ.18): ನಗರದ ಹೊರ ವಲಯದಲ್ಲಿರುವ ರಮಾಡ ರೆಸಾರ್ಟ್​ ಮುಂಜಾನೆಯೇ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾಯಿತು. ಮಧ್ಯ ಪ್ರದೇಶ ಕಾಂಗ್ರೆಸ್‌ನ ಕೆಲ ರೆಬೆಲ್​ ಶಾಸಕರು ಇಲ್ಲಿ ತಂಗಿದ್ದು, ಇವರನ್ನು ಭೇಟಿ ಮಾಡಲು ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಆಗಮಿಸಿದ್ದರು. ಆದರೆ, ಭೇಟಿಗೆ ಅವಕಾಶ ಸಿಗದ ಕಾರಣ ಕಾಂಗ್ರೆಸ್​ ತೀವ್ರ ಪ್ರತಿಭಟನೆ ನಡೆಸಿತು.  

ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಹಾಗೂ ನಾಲ್ವರು ಕಾಂಗ್ರೆಸ್​ ಶಾಸಕರು ತಡರಾತ್ರಿ ಬೆಂಗಳೂರಿಗೆ ಆಗಮಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಇವರಿಗೆ ಭರ್ಜರಿ ಸ್ವಾಗತ ನೀಡಿದರು. ನಂತರ ಮುಂದಿನ ಕಾರ್ಯವೈಖರಿ ಕುರಿತು ವಿಸ್ತ್ರತ ಚರ್ಚೆ ನಡೆಸಿದರು.

ಆಪರೇಷನ್​ ಕಮಲ ಮಾಡುವಾಗ ಬಿಜೆಪಿ ರಾಜ್ಯದ ಕೆಲ ಕಾಂಗ್ರೆಸ್​ ಶಾಸಕರನ್ನು ಮುಂಬೈ ಹೋಟೆಲ್​ನಲ್ಲಿ ಇರಿಸಿತ್ತು. ಈ ವೇಳೆ ಡಿ.ಕೆ. ಶಿವಕುಮಾರ್​ ಶಾಸಕರನ್ನು ಭೇಟಿ ಮಾಡಲು ತೆರಳಿದಾಗ ಅಲ್ಲಿನ ಪೊಲೀಸರು ಭೇಟಿಗೆ ಅವಕಾಶ ನೀಡಿರಲಿಲ್ಲ. ಈಗ ಇದೇ ಪರಿಸ್ಥಿತಿ ದಿಗ್ವಿಜಯ್​ ಸಿಂಗ್​ಗೂ ಬಂದೊದಗಿದೆ. ಶಾಸಕರನ್ನು ಭೇಟಿ ಮಾಡಲು ಅವರು ಪ್ರಯತ್ನಿಸಿದರಾದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.

ಇದನ್ನೂ ಓದಿ: ಇಂದು ದೆಹಲಿಗೆ ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆಶಿ: ಸೋನಿಯಾ ಗಾಂಧಿ ಭೇಟಿ, ಮಹತ್ವದ ಚರ್ಚೆ

ಭಾರೀ ಪ್ರತಿಭಟನೆ:

ರೆಬೆಲ್​ ಶಾಸಕರ ಭೇಟಿಗೆ ಅವಕಾಶ ಸಿಗದ ಕಾರಣ ರಮಡಾ ರೆಸಾರ್ಟ್​ ಬಳಿ ಸೇರಿದ 500ಕ್ಕೂ ಅಧಿಕ ಕಾರ್ಯಕರ್ತರು ಡಿಕೆಶಿ ಹಾಗೂ ದಿಗ್ವಿಜಯ್​ ಸಿಂಗ್​ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. “ಬಿಜೆಪಿ ಆಪರೇಷನ್ ಕಮಲ ನಡೆಸಿದೆ. ಸರ್ಕಾರ ನಡೆಸುವ ನೈತಿಕತೆ ಕಳೆದುಕೊಂಡಿದೆ’ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಕೈ ಶಾಸಕರಾದ ಭೈರತಿ ಸುರೇಶ್, ಕೃಷ್ಣ ಭೈರೇಗೌಡ, ರಿಜ್ವಾನ್ ಅರ್ಷದ್​, ಎನ್. ಹ್ಯಾರಿಸ್ ಭಾಗಿಯಾಗಿದ್ದಾರೆ.

ದೊಡ್ಡಬಳ್ಳಾಪುರ ರಸ್ತೆ ಬಂದ್:

ರಮಡಾ ರೆಸಾರ್ಟ್​ ದೊಡ್ಡಬಳ್ಳಾಪುರ ರಸ್ತೆ ಸಮೀಪವೇ ಇದೆ. ಹೀಗಾಗಿ ಭಾರೀ ಪ್ರತಿಭಟನೆಯಿಂದಾಗಿ ದೊಡ್ಡಬಳ್ಳಾಪುರ ರಸ್ತೆ ಸಂಪೂರ್ಣ ಬಂದ್​ ಆಗಿದೆ. ಸುಮಾರು ಅರ್ಧ ಕಿಲೋಮೀಟರ್​ ವಾಹನಗಳು ನಿಂತಿದ್ದು ಕಂಡು ಬಂತು. ಇದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಯಿತು.

ಪ್ರತಿಭಟನೆಗೂ ತಟ್ಟಿದ ಕೊರೋ ಭೀತಿ:

ಕೊರೋನಾ ವೈರಸ್​ ಎಲ್ಲೆಡೆ ಹರಡುತ್ತಿದ್ದು, ದೇಶದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ರಾಜ್ಯದಲ್ಲೂ ಸಾಕಷ್ಟು ಪ್ರಕರಣಗಳು ವರದಿಯಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ, ಪ್ರತಿಭಟನಾಕಾರರು ಮಾಸ್ಕ್​ ಧರಿಸಿ ಪ್ರತಿಭಟನೆಗೆ ಇಳಿದಿದ್ದು ವಿಶೇಷವಾಗಿತ್ತು.

ಪೊಲೀಸರು ಕಂಗಾಲು:

ದಿಢೀರ್ ಪ್ರತಿಭಟನೆಯಿಂದ ಪೊಲೀಸರು ಕಂಗಾಲಾಗಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರುತ್ತಾರೆ ಎಂಬುದನ್ನು ಪೊಲೀಸರು ಊಹಿಸಿರಲಿಲ್ಲ. ಈಗ ಏಕಾಏಕಿ ಇಷ್ಟು ದೊಡ್ಡ ಮಟ್ಟದಲ್ಲಿ ಧರಣಿ ನಡೆದಿರುವುದು ಪೊಲೀಸರನ್ನು ಚಿಂತೆಗೀಡು ಮಾಡಿದೆ.

ಪ್ರತಿಭಟನೆ ಹಿಂಪಡೆಯುವಂತೆ ಮನವಿ

ಪ್ರತಿಭಟನೆ ಹಿಂಪಡೆಯುವಂತೆ ಪೊಲೀಸರು ದಿಗ್ವಿಜಯ ಸಿಂಗ್ ಬಳಿ ಮನವಿ ಮಾಡಿದರು. ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ಕೊರೋನಾ ಭೀತಿ ಕೂಡ ಇದ್ದು ಈ ಸಮಯದಲ್ಲಿ ಪ್ರತಿಭಟನೆ ನಡೆಸುವುದು ಉತ್ತಮವಲ್ಲ ಎಂದು ಪೊಲೀಸರು ದಿಗ್ವಿಜಯ್​ ಸಿಂಗ್​ ಬಳಿ ಕೋರಿದರು. ಆದರೆ, ಯಾವುದೆ ಕಾರಣಕ್ಕೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.
First published: