ಉಡುಪಿ: ರಾಜ್ಯದಲ್ಲಿ ಅನೈತಿಕ ಸರ್ಕಾರ (BJP Govt) ಅಧಿಕಾರ ನಡೆಸುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ (BK Hariprasad) ವಾಗ್ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ (Udupi) ನಡೆದ ಪ್ರಜಾ ಧ್ವನಿಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ (Nalin Kumar Kateel) ವಿದೂಷಕನ ಕೆಲಸ ಮಾಡುತ್ತಿದ್ದಾರೆ. ಮುಂದಿನ ಅಗ್ನಿಪರೀಕ್ಷೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಪ್ರಜ್ಞಾ ಠಾಕೂರ್ ಓರ್ವ ಭಯೋತ್ಪಾದಕಿ'
ಸಾಧ್ವಿ ಪ್ರಜ್ಞಾ ಠಾಕೂರ್ ಓರ್ವ ಭಯೋತ್ಪಾದಕಿ ಎಂದ ಬಿಕೆ ಹರಿಪ್ರಸಾದ್, ಶಿವಮೊಗ್ಗಕ್ಕೆ ಆಕೆ ಭೇಟಿಕೊಟ್ಟು ಮಕ್ಕಳ ದಾರಿ ತಪ್ಪಿಸಿದ್ದಾಳೆ. ತಲ್ವಾರ್ ಚಾಕು ಚೂರಿ ಆಯುಧ ಶಾರ್ಪ್ ಮಾಡಿಟ್ಟುಕೊಳ್ಳಲು ಹೇಳ್ತಾಳೆ. ನಾನು ಆಕೆಯನ್ನು ಭಯೋತ್ಪಾದಕಿ ಎಂದು ಕರೆಯುತ್ತೇನೆ. ನಮ್ಮ ಮಕ್ಕಳನ್ನು ಭಯೋತ್ಪಾದಕರನ್ನಾಗಿ ಸಿದ್ಧತೆ ಮಾಡುತ್ತೀರಾ? ಪ್ರಧಾನಿ ಮೋದಿಯವರು ಇದಕ್ಕೆ ಉತ್ತರ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: B Sriramulu: ಹರಿಪ್ರಸಾದ್ ಅವ್ರೇ ನೀವು ಯಾವ ಸೀಮೆ ನಾಯಕರು? ಶ್ರೀರಾಮುಲು ವಾಗ್ದಾಳಿ
ರಾಜ್ಯದಲ್ಲಿ ಬಿಜೆಪಿಯವರು ಎರಡು ಸಲ ಅಧಿಕಾರ ಮಾಡಿದ್ದಾರೆ. ಎರಡೂ ಸಲವೂ ಅವರಿಗೆ ಬಹುಮತ ಬರಲಿಲ್ಲ. ಪ್ರಜಾಪ್ರಭುತ್ವವನ್ನ ಬುಡಮೇಲು ಮಾಡಿ, ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದ ಹರಿಪ್ರಸಾದ್, ಈ ಬಿಜೆಪಿಯವರು ಜನರಿಗೋಸ್ಕರ ಯಾವ ಸಾಧನೆ ಮಾಡಿದ್ದಾರೆ? ಜನರ ಎದುರು ಹೋಗಲು ಇವರಿಗೆ ಮುಖ ಇಲ್ಲ. ಪ್ರಜಾಧ್ವನಿಯ ಮೂಲಕ ಜನರ ಎದುರು ಸರ್ಕಾರದ ದುರಾಡಳಿತವನ್ನ ಹೇಳುವ ಜವಾಬ್ದಾರಿ ನಮ್ಮ ಮೇಲಿದೆ. ಬೆಳಗಾವಿಯಲ್ಲಿ ಪ್ರಜಾ ಧ್ವನಿಯಾತ್ರೆಗೆ ಚಾಲನೆ ಕೊಟ್ಟಿದ್ದೇವೆ. ಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸುವ ಮೂಲಕ ನಮಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಮೂರೂವರೆ ವರ್ಷದಲ್ಲಿ ಇವರು ಏನು ಮಾಡದೇ ಇರುವುದಕ್ಕೆ ಈ ಜನಸ್ತೋಮವೇ ಸಾಕ್ಷಿ ಎಂದರು.
'ಕರಾವಳಿ ಜಿಲ್ಲೆಗಳ ಜನ ಸ್ವಾಭಿಮಾನಿಗಳು'
ಇನ್ನು ಕರಾವಳಿಯ ಜನ ಸ್ವಂತ ಶಕ್ತಿಯ ಮೇಲೆ ಕೆಲಸ ಮಾಡುವ ಜನ, ಸರ್ಕಾರದ ಬಳಿ ಆರೋಗ್ಯಕ್ಕಾಗಿ ಬೇಡುವವರಲ್ಲ. ಉದ್ಯೋಗ ಕೇಳುವವರಲ್ಲ ಎಂದ ಹರಿಪ್ರಸಾದ್, ಅವಿಭಜಿತ ಜಿಲ್ಲೆಯ ಜನರು ಸ್ವಾಭಿಮಾನಿಗಳು. ಕರಾವಳಿ ಜಿಲ್ಲೆಗಳಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಬಗ್ಗೆ ವೀರಪ್ಪ ಮೊಯ್ಲಿ ಅವರು ಸವಿಸ್ತಾರವಾಗಿ ಹೇಳಿದ್ದಾರೆ. ಅವಿಭಜಿತ ಜಿಲ್ಲೆಗಳಿಗೆ ಐದು ದೊಡ್ಡ ದೊಡ್ಡ ಬ್ಯಾಂಕ್ಗಳನ್ನ ಕೊಟ್ಟಿದೆ. ಬ್ಯಾಂಕ್ಗಳನ್ನ ಸ್ಥಾಪಿಸಲು ಸರ್ಕಾರದ ಬಳಿಯಾಗಲಿ, ಯಾರಿಂದಾಗಲಿ ಸಹಾಯ ಕೇಳಲಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ಬಿಲ್ಲವರು, ಮೋಗವೀರರು, ಬ್ಯಾರಿಗಳು, ಕೊರಗರು, ಬಂಟರು ಎಲ್ಲಾ ಸಮುದಾಯಗಳ ಜನರು ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಬೆಂಗಳೂರು ಬಿಟ್ರೆ ಕರಾವಳಿ ಜಿಲ್ಲೆಯ ಜನರೇ ಅತೀ ಹೆಚ್ಚು ತೆರಿಗೆ ಕಟ್ತಾರೆ. ಆದ್ರೆ ಬಿಜೆಪಿಯ ಅವಧಿಯಲ್ಲಿ ಅಭಿವೃದ್ಧಿ ಮಾತ್ರ ಶೂನ್ಯ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: BK Hariprasad: ಯಶವಂತಪುರದಲ್ಲಿ ಚಪ್ಪಲಿ, ಪೊರಕೆ ಸೇವೆ ಮಾಡಿದ್ದು ಯಾಕಂತ ಹೇಳಲಿ: ಬಿ.ಸಿ ಪಾಟೀಲ್ಗೆ ಹರಿಪ್ರಸಾದ್ ಟಾಂಗ್
'ಗೆಲ್ಲಿಸಿದ್ದಕ್ಕೆ ಬಿಜೆಪಿ ಕೊಡುಗೆ ಏನು?'
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನ ಗೆಲ್ಲಿಸಿದ್ದೀರಿ, ಕರಾವಳಿಯಲ್ಲಿ ಜಿಲ್ಲೆಗಳಲ್ಲಿ ಹೆಚ್ಚು ಬಿಜೆಪಿ ಶಾಸಕರನ್ನ ಗೆಲ್ಲಿಸಿ ಕಳಿಸಿದ್ದೀರಿ. ಆದ್ರೆ ಈ ಜನಪ್ರತಿನಿಧಿಗಳ ಕೊಡುಗೆ ಏನು ಎಂಬುದನ್ನ ತೋರಿಸಲಿ ಎಂದು ಸವಾಲು ಹಾಕಿದ ಬಿಕೆ ಹರಿಪ್ರಸಾದ್, ಶಾಂತಿ ಸುವ್ಯವಸ್ಥೆಯಿಂದ ಜನರ ನಡುವೆ ದ್ವೇಷ, ಜಗಳ ಹೆಚ್ಚಿರುವುದು ಮಾತ್ರ ಸಾಧನೆನಾ? ರಾಜ್ಯದಲ್ಲೇ ಅತೀ ಹೆಚ್ಚಿನ ಸಾಕ್ಷರತೆ ಹೊಂದಿರುವ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಬಿಜೆಪಿ ಕಳಂಕ ತಂದಿದೆ. ನಾವು ಬೆಂಗಳೂರಲ್ಲಿ ಇದ್ದಾಗ ಎಸ್ಸೆಸ್ಸೆಲ್ಸಿ ಪಿಯುಸಿ ಫಲಿತಾಂಶಗಳಲ್ಲಿ ಉಡುಪಿ ಮೊದಲು, ದಕ್ಷಿಣ ಕನ್ನಡ ಜಿಲ್ಲೆ ಮೊದಲು ಸ್ಥಾನದಲ್ಲಿದೆ ಎಂದು ಓದುತ್ತಾ ಇದ್ವಿ, ನಮ್ಮ ಭುಜ ತಟ್ಕೋತಿದ್ವಿ. ಆದ್ರೆ ಮೊಟ್ಟ ಮೊದಲ ಬಾರಿಗೆ ಉಡುಪಿ ಜಿಲ್ಲೆ ಹದಿನೈದು, ಹದಿನೆಂಟನೇ ಸ್ಥಾನಕ್ಕೆ ಹೋಗಿದೆ. ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರ ಮೊದಲ ಸ್ಥಾನದಲ್ಲಿದೆ. ಈ ಅವಮಾನಕ್ಕೆ ಈ ಜಿಲ್ಲೆಯ ಶಾಸಕರು, ಮಂತ್ರಿಗಳೇ ನೇರ ಕಾರಣ ಎಂದು ಕಿಡಿಕಾರಿದರು.
ಕರಾವಳಿ ಜಿಲ್ಲೆಯ ನಮ್ಮ ಮಕ್ಕಳಿಗೆ ಎಲ್ಲಾ ಸಾಮರ್ಥ್ಯ ಇದೆ. ನಮ್ಮ ಸರ್ಕಾರ ಇದ್ದಾಗ ನಮ್ಮ ನೆಚ್ಚಿನ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಿಂದ, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಪರಿಶ್ರಮದಿಂದ ಅಕ್ಷರ ದಾಸೋಹದ ಮೂಲಕ ಬಡವರ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ. ಎಲ್ಲಾ ಮಕ್ಕಳಿಗೆ ಉಚಿತವಾಗಿ ಮತ್ತು ಕಡ್ಡಾಯವಾಗಿ ಶಿಕ್ಷಣ ನೀಡಲು ಆರ್ ಟಿ ಇ ಮೂಲಕ ಶಿಕ್ಷಣ ನೀಡುವ ಕಾನೂನು ತಂದಿದ್ದೇವೆ. ಆದ್ರೆ ಬಿಜೆಪಿ ಸರ್ಕಾರದ ಸಾಧನೆ ಏನಿದೆ? ಈ ಜಿಲ್ಲೆಗೆ ವೀರಪ್ಪ ಮೊಯ್ಲಿ ಆಗಲಿ, ಸಿದ್ದರಾಮಯ್ಯ ಆಗಲಿ ಯಾರೇ ಇರಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಟ್ಟು ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ. ಕ್ರೈಸ್ತ ಮಿಷನರಿಗಳ ಮೂಲಕ, ಮಣಿಪಾಲ್ ಸಂಸ್ಥೆ ಮೂಲಕ ಅಭೂತ ಪೂರ್ವ ಕೊಡುಗೆ ಶಿಕ್ಷಣಕ್ಕೆ ನೀಡಿದ ಜಿಲ್ಲೆಗಳಿವು. ಕರಾವಳಿಗೆ ಬಿಜೆಪಿಯ ಕೊಡುಗೆ ಏನು ಎಂಬುದನ್ನ ಹೇಳಲಿ ಎಂದು ಸವಾಲೆಸೆದರು.
'ನಳಿನ್ ಕಟೀಲ್ ಒಬ್ಬ ವಿದೂಷಕ'
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧವೂ ವಾಗ್ದಾಳಿ ನಡೆಸಿ ಹರಿಪ್ರಸಾದ್, ಕರಾವಳಿಯವರೇ ಬಿಜೆಪಿಯ ಅಧ್ಯಕ್ಷರಾಗಿದ್ದಾರೆ. ವಿದೂಷಕನಂತೆ ಹೇಳಿಕೆಗಳನ್ನ ನೀಡುತ್ತಾರೆ. ಅಭಿವೃದ್ಧಿ ಬೇಡ, ರಸ್ತೆ ಬೇಡ, ಚರಂಡಿ ಬೇಡ, ಆರೋಗ್ಯ ಬೇಡ, ಶಿಕ್ಷಣ ಕೇಳ್ಬೇಡಿ ಅದರ ಬದಲಾಗಿ ಹಿಜಾಬ್ ಬಗ್ಗೆ ಮಾತಾಡಿ, ಹಲಾಲ್ ಬಗ್ಗೆ ಮಾತಾಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ಕರೆ ಕೊಡ್ತಾರೆ. ಕರಾವಳಿ ಜಿಲ್ಲೆಯನ್ನ ಏನು ಮಾಡಲು ಹೊರಟಿದ್ದಾರೆ ಬಿಜೆಪಿಯವರು. ಮಿಸ್ಟರ್ ನಳಿನ್ ಕುಮಾರ್ ಕಟೀಲ್, ಬಡವರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡಬೇಡಿ. ಹಿಂದುಳಿದ ಮಕ್ಕಳನ್ನು ಬಾವಿಗೆ ತಳ್ಳಬೇಡಿ ಎಂದು ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ