BK Hariprasad: ಬಸವರಾಜ್ ಹೊರಟ್ಟಿಯವರು BJP ಸೇರ್ಪಡೆ ಸಂವಿಧಾನಕ್ಕೆ ಮಾಡಿದ ದ್ರೋಹ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಸಂವಿಧಾನದ ಮೌಲ್ಯವನ್ನೇ ಬುಡಮೇಲು ಮಾಡಲು ಹೊರಟಿರುವ ಬಿಜೆಪಿ ಪಕ್ಷಕ್ಕೆ ಬಸವರಾಜ್ ಹೊರಟ್ಟಿಯವರು ಸೇರ್ಪಡೆಯಾಗುತ್ತಿರುವುದು ದುರಾದೃಷ್ಟಕರ. ಬಿಜೆಪಿಯ ದಂಡಂ ದಶಗುಣಂ ನಿಯಮದನ್ವಯ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

 ಬಿ.ಕೆ.ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್

  • Share this:
ಬೆಂಗಳೂರು: ಇಂದು ವಿಧಾನಸೌಧದ ಕಾಂಗ್ರೆಸ್ (Congress) ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್​​ ನಾಯಕ ಬಿ ಕೆ ಹರಿಪ್ರಸಾದ್ (BK Hariprasad) ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತಾಡಿದ್ದಾರೆ. ವಿಧಾನ ಪರಿಷತ್ ಸಭಾಪತಿ ಸ್ಥಾನ ಸಾಂವಿಧಾನಿಕ ಹುದ್ದೆ. ಬಸವರಾಜ್ ಹೊರಟ್ಟಿಯವರು (Basavaraj Horatti) ಸಭಾಪತಿ ಸ್ಥಾನದಲ್ಲಿರುವಾಗಲೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆಂದು ಘೋಷಿಸಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಸಿದ್ದಾಂತ-ತತ್ವಕ್ಕೆ ಸರಿ ಹೊಂದುವ ರಾಜಕೀಯ ಪಕ್ಷವನ್ನ ಆಯ್ಕೆ ಮಾಡಿಕೊಳ್ಳುವ ಅಧಿಕಾರವಿದೆ. ಆದರೆ ಸಾಂವಿಧಾನಿಕ ಹುದ್ದೆಯಲ್ಲಿರುವವರು ಪಕ್ಷಾತೀತರಾಗಿರಬೇಕು, ಸಂವಿಧಾನಕ್ಕೆ ಅತೀತರಾಗಿರಬೇಕು. ಬಸವರಾಜ್ ಹೊರಟ್ಟಿಯವರು ಹಿರಿಯರು, ಅನುಭವ ಇರುವವರಿಂದ ಸಂವಿಧಾನ ವಿರೋಧಿ ನಡೆಯನ್ನ ನಾವು ನಿರೀಕ್ಷೆ ಮಾಡಿರಲಿಲ್ಲ.

ಪಕ್ಷದ್ರೋಹ ಮಾತ್ರವಲ್ಲ, ಸಂವಿಧಾನಕ್ಕೂ ದ್ರೋಹ

ಇತ್ತೀಚೆಗೆ ಬಿಜೆಪಿ ಕೇಂದ್ರ ನಾಯಕ ಅಮಿತ್ ಶಾ ಅವರನ್ನ ವೈಯಕ್ತಿಕ ಭೇಟಿಯಾಗಿ ಬಿಜೆಪಿ ಸೇರ್ಪಡೆಯಾಗುವ ಮಾತುಕತೆ ನಡೆಸಿದ್ದಾರೆ. ನಂತರ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಸೇರುವ ಮಾತುಗಳನ್ನ ಸ್ಪಷ್ಟಪಡಿಸಿದ್ದಾರೆ. ಈ ತಿಂಗಳಲ್ಲಿ ದಿನಾಂಕ, ಪಂಚಾಂಗ ನೋಡಿ ಬಿಜೆಪಿ ಸೇರ್ಪಡೆಯಾಗಲಿ, ನಮಗೆ ತಕರಾರಿಲ್ಲ. ಆದ್ರೆ ಈ ದೇಶ ನಡೆಯುತ್ತಿರುವುದು ಪಂಚಾಂಗದ ಮೇಲಲ್ಲ, ಸಂವಿಧಾನದ ಮೇಲೆ. ಹೊರಟ್ಟಿಯವರು ಪಕ್ಷದ್ರೋಹ ಮಾತ್ರವಲ್ಲ, ಸಂವಿಧಾನಕ್ಕೂ ದ್ರೋಹ ಬಗೆದಿದ್ದಾರೆ. ಸಂವಿಧಾನಕ್ಕೆ ಅಪಚಾರ ಮಾಡಿರುವ ಹೊರಟ್ಟಿಯವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಂವಿಧಾನವನ್ನು ಉಲ್ಲಂಘಿಸಿದ್ದಾರೆ

ಹೊರಟ್ಟಿಯವರ ನಡೆ ಸಂವಿಧಾನದ ಹತ್ತನೇ ಶೆಡ್ಯೂಲ್ ನ ಸ್ಪಷ್ಟ ಉಲ್ಲಂಘನೆ. ಸಂವಿಧಾನದ ಹತ್ತನೆಯ ಅನುಬಂಧದಲ್ಲಿ ಸೇರಿಸಲಾಗಿರುವಂತೆ ಪಕ್ಷಾಂತರ ನಿಷೇಧ ಕಾಯ್ದೆಯ 2(1)ನೇ ಪ್ಯಾರಾದಲ್ಲಿರುವ ವಿವರದ ಅನ್ವಯ, ಶಾಸನಸಭೆಯ ಸದಸ್ಯನೊಬ್ಬ ತನ್ನ ಪಕ್ಷದ ಸದಸ್ಯತ್ವವನ್ನು ‘ಸ್ವಇಚ್ಛೆಯಿಂದ ತೊರೆದರೆ’ ಅಥವಾ ಆತ ತನ್ನ ಪಕ್ಷ ನೀಡಿದ ಸೂಚನೆಗೆ ವಿರುದ್ಧವಾಗಿ ಮತ ಚಲಾಯಿಸಿದರೆ, ಮತದಾನದಿಂದ ದೂರ ಉಳಿದರೆ ಆತನನ್ನು ಅನರ್ಹಗೊಳಿಸಬಹುದು. ಹೊರಟ್ಟಿಯವರು ಜೆಡಿಎಸ್ ಪಕ್ಷದ ಹಾಲಿ ಸದಸ್ಯರಾಗಿದ್ದು, ಬೇರೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂಬ ಹೇಳಿಕೆ ಕೊಟ್ಟಿರುವುದು ಪಕ್ಷಾಂತರ ಕಾಯ್ದೆಯ ಉಲ್ಲಂಘನೆ. ಇತ್ತೀಚೆಗೆ ರಾಜ್ಯಸಭೆಯಲ್ಲಿಯೂ ಕೂಡ ಸ್ಪೀಕರ್ ಅವರ ವಿವೇಚನಾಧಿಕಾರ ಬಳಸಿಕೊಂಡು ಹಿರಿಯ ಸದಸ್ಯರಾಗಿದ್ದ ಶರದ್ ಯಾದವ್ ಅವರನ್ನು ಸದಸ್ಯತ್ವದಿಂದ ಸ್ಪೀಕರ್ ವೆಂಕಯ್ಯ ನಾಯ್ಡು ಅವರು ತೆಗೆದು ಹಾಕಿದ್ದನ್ನ ನೋಡಿದ್ದೇನೆ. ಆಗ ರಾಜ್ಯಸಭಾ ಸದಸ್ಯನಾಗಿದ್ದ ನಾನೇ ಸಾಕ್ಷಿ.

ಇದನ್ನೂ ಓದಿ: PSI Recruitment Scam: ಸಚಿವ ಅಶ್ವತ್ಥ್ ನಾರಾಯಣ ಪರ ಸಿಎಂ ಬ್ಯಾಟಿಂಗ್, ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ

ಹೊರಟ್ಟಿ ಬಿಜೆಪಿಗೆ ಸೇರಿರುವುದು ದುರಾದೃಷ್ಟಕರ

ಸಂವಿಧಾನದ ಮೌಲ್ಯವನ್ನೇ ಬುಡಮೇಲು ಮಾಡಲು ಹೊರಟಿರುವ ಬಿಜೆಪಿ ಪಕ್ಷಕ್ಕೆ ಬಸವರಾಜ್ ಹೊರಟ್ಟಿಯವರು ಸೇರ್ಪಡೆಯಾಗುತ್ತಿರುವುದು ದುರಾದೃಷ್ಟಕರ. ಬಿಜೆಪಿಯ ದಂಡಂ ದಶಗುಣಂ ನಿಯಮದನ್ವಯ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಅವರೇ ಹೇಳಿಕೆ ನಿಡಿದಂತೆ ಸೂಕ್ತ ಸ್ಥಾನಮಾನದ ಭರವಸೆ ನೀಡಿರುವುದರಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಬಿಜೆಪಿಯವರ ಆಸೆ-ಆಮಿಷಗಳಿಗೆ ಒಳಪಟ್ಟು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸ್ಪಷ್ಟವಾದಂತೆ. ಹೊರಟ್ಟಿಯವರು ಆಪರೇಷನ್ ಕಮಲದ ಇನ್ನೊಂದು ವಿಕೆಟ್. ಸಾಂವಿಧಾನಿಕ ಪೀಠದಲ್ಲಿರುವ ವ್ಯಕ್ತಿಗಳನ್ನೂ ಆಸೆ ಆಮಿಷಗಳನ್ನೊಡ್ಡಿ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವ ಬಿಜೆಪಿ ಸಂವಿಧಾನಕ್ಕೆ ಮಾಡುತ್ತಿರುವ ಘನಘೋರ ಅಪರಾದ. ಹೊರಟ್ಟಿಯವರು ವಯಕ್ತಿಕವಾಗಿ ಕೂಡಲೇ ರಾಜೀನಾಮೆ ನೀಡಲಿದ್ದಾರೆ ಎಂಬ ವಿಸ್ವಾಸವಿದೆ.‌

ಪಿಎಸೈ ಅಕ್ರಮ ನೇಮಕಾತಿ ಹಗರಣ

ಪಿಎಸೈ ಅಕ್ರಮ ನೇಮಕಾತಿಯಲ್ಲಿ ಇಡೀ ಸರ್ಕಾರದ ಬಹುತೇಕ ಮಂತ್ರಿಗಳು ಭಾಗಿಯಾಗಿದ್ದಾರೆ. ಸಚಿವರು, ಶಾಸಕರುಗಳೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರಿಗೆ ಯಾರಿಗೂ ನೋಟೀಸ್ ನೀಡದೆ ನಮ್ಮ ಪಕ್ಷದ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ನೋಟೀಸ್ ನೀಡಿರುವುದನ್ನ ಖಂಡಿಸುತ್ತೇನೆ. ಸತ್ಯವನ್ನು ಎಲ್ಲಿ ಬೇಕಾದರೂ ಹೇಳಲು ನಾವು ಸಿದ್ದ, ಮೊದಲು ನಮ್ಮಿಂದ ತನಿಖೆ ಸಾಧ್ಯವಿಲ್ಲ ಎಂದ ರಾಜೀನಾಮೆ ಕೊಟ್ಟು ಬನ್ನಿ. ಗೃಹ ಸಚಿವ ಆರಗ ಜ್ಞಾನೇಂದ್ರ ಮೊದಲು ರಾಜೀನಾಮೆ ನೀಡಲಿ. ಸಚಿವ ಅಶ್ವತ್ಥ ನಾರಾಯಣ ಅವರ ಕುಟುಂಬಸ್ಥರು ಅಕ್ರಮ ಪಿಎಸೈ ನೇಮಕಾತಿಯಲ್ಲಿ ಇರುವುದು ಸತ್ಯ, ಇಡೀ ಮಲ್ಲೇಶ್ವರಂನಲ್ಲಿ ಗುಳಂ ನಾರಾಯಣ ಎಂದೇ ಖ್ಯಾತಿ ಆಗಿದ್ದಾರೆ. ನೈತಿಕತೆ ಇದ್ರೆ ಅಶ್ವತ್ಥ ನಾರಾಯಣ ರಾಜೀನಾಮೆ ನೀಡಬೇಕು.

ಅಕ್ರಮ, ಹಗರಣಗಳನ್ನ ಮಾಡಿಯೇ ಬಿಜೆಪಿ ಇಂದು ದೇಶದಲ್ಲಿ ಅತಿದೊಡ್ಡ ಶ್ರೀಮಂತ ಪಕ್ಷವಾಗಿರುವುದು, ಹಾವಿನಪುರದ ಆರ್ ಎಸ್ ಎಸ್ ಅತಿದೊಡ್ಡ ಶ್ರೀಮಂತ ಎನ್ ಜಿ ವೋ ಆಗಿರುವುದು.  ಸಾವಿರಾರು ಕೋಟಿ ಖರ್ಚು ಮಾಡಿ ದೆಹಲಿಯಲ್ಲಿ ಭವನಗಳನ್ನ ಕಟ್ಟಿಸಲಾಗ್ತಿದೆ. ಎಲ್ಲಿಂದ ಹಣ ಬರ್ತಿದೆ ಬಿಜೆಪಿಗೆ? ಹಗರಣಗಳನ್ನ, ಕಮಿಷನ್ ಹಣದಿಂದಲೇ ಪಕ್ಷ ನಡೆಸುತ್ತಿದ್ದಾರೆ. ಇಡೀ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.  ನಮ್ಮ ಹೋರಾಟ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಮಾಧ್ಯಮಗೋಷ್ಠಿಯಲ್ಲಿ ವಿಧಾನ ಪರಿಷತ್ ಮುಖ್ಯಸಚೇತಕರಾದ ಪ್ರಕಾಶ್ ರಾಥೋಡ್ ಕೂಡ ಇದ್ದರು.
Published by:Kavya V
First published: