ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ BK Hariprasad ನೇಮಕ

ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನನ್ನಾಗಿ ಬಿಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡುವ ಮೂಲಕ ಹೈಕಮಾಂಡ್ ಭಾರೀ ಮಹತ್ವದ ಹೆಜ್ಜೆ ಇಟ್ಟಿದೆ.

 ಬಿ.ಕೆ.ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್

  • Share this:
ನವದೆಹಲಿ, (ಜ. 26):  ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ನಿರ್ಮಾಣವಾಗುತ್ತಿದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗುತ್ತಿರುವುದರ ನಡುವೆ  ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Former Chief Minister and Opposition Leader Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President D.K.Shivakumar) ಮಧ್ಯೆ ಮುಖ್ಯಮಂತ್ರಿ ಆಗಲು ಪೈಪೋಟಿ ಕೂಡ ಶುರುವಾಗಿದೆ. ಈ ನಡುವೆ ಪಕ್ಷದ ಹಿರಿಯ ಮುಖಂಡ, ಲಿಂಗಾಯತ ಸಮುದಾಯದ ಮುಂಚೂಣಿ ನಾಯಕ, ಉತ್ತರ ಕರ್ನಾಟಕ ಮೂಲದ ಎಂ.ಬಿ. ಪಾಟೀಲ್ ಅವರನ್ನು ನಿನ್ನೆ (ಜನವರಿ 25ರಂದು) ಕೆಪಿಸಿಸಿ ಪ್ರಚಾರ ಸಮಿತಿ (Campaigning Committee) ಅಧ್ಯಕ್ಷರನ್ನಾಗಿ ನೇಮಿಸಿದ್ದ ಕಾಂಗ್ರೆಸ್ ಹೈಕಮಾಂಡ್ (Congress High Command) ಇಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಹಿರಿಯ ನಾಯಕ ಬಿಕೆ ಹರಿಪ್ರಸಾದ್ (BK Hariprasad) ಅವರನ್ನು ನೇಮಕ ಮಾಡಿದೆ.

ಯಾರ ಮುಲಾಜಿಗೂ ಮಣಿಯದ ಹರಿಪ್ರಸಾದ್
ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಬಿಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡುವ ಮೂಲಕ ಹೈಕಮಾಂಡ್ ಭಾರೀ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯ ಕಾಂಗ್ರೆಸ್ ‌ನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌ ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿರುವುದರಿಂದ ಇಬ್ಬರಿಗೂ ಮಣಿಯದೆ, ಇಬ್ಬರ ಜೊತೆಯೂ ಯಾವುದೇ ಮುಲಾಜು ಇಲ್ಲದೆ ಮಾತನಾಡುವ ಹಿರಿಯ ನಾಯಕ ಹರಿಪ್ರಸಾದ್ ಅವರಿಗೆ ಮಹತ್ವದ ಹುದ್ದೆ ನೀಡಿದೆ. ಇದಲ್ಲದೆ ಹರಿಪ್ರಸಾದ್ ಅವರನ್ನು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲು ಇನ್ನೂ ಅನೇಕ ಕಾರಣಗಳಿವೆ.

ಇದನ್ನು ಓದಿ: ಗೂಗಲ್​​ ಸಿಇಒ Sundar Pichai ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲು

ಈಡಿಗ ಮತಗಳ ಮೇಲೆ ಕಣ್ಣು
ಬಿ.ಕೆ. ಹರಿಪ್ರಸಾದ್ ಅಪ್ಪಟ ಕಾಂಗ್ರೆಸ್ಸಿಗ. ಕಾಂಗ್ರೆಸ್ ಸಿದ್ದಾಂತಗಳನ್ನು ಶೇಕಡಾ ನೂರರಷ್ಟು ಮೈಗೂಡಿಸಿಕೊಂಡಿರುವ ಮುಖಂಡ. ಆರ್ ಎಸ್ ಎಸ್ ಮತ್ತು ಬಿಜೆಪಿ ಸಿದ್ದಾಂತಗಳ ಕಡು ವಿರೋಧಿ. ಅಷ್ಟೇಯಲ್ಲ, ಆರ್ ಎಸ್ ಎಸ್ ಹಾಗೂ ಬಿಜೆಪಿಯ ಸಮಾಜವಿರೋಧಿ ನಡೆಗಳನ್ನು, ಧರ್ಮದ ಹೆಸರಿನಲ್ಲಿ ನಡೆಸುವ ರಾಜಕಾರಣವನ್ನು ಬಿ.ಕೆ.‌ ಹರಿಪ್ರಸಾದ್ ಬಹಿರಂಗವಾಗಿ ವಿರೋಧ ಮಾಡುತ್ತಾರೆ. ಈ ಸೈದ್ಧಾಂತಿಕ ಬದ್ದತೆ ಕೂಡ ಅವರಿಗೆ ಮಹತ್ವದ ಸ್ಥಾನ ನೀಡಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.‌ ಇದಲ್ಲದೆ ಕಾಗೋಡು ತಿಮ್ಮಪ್ಪ ಅವರಿಂದ ಹಿಡಿದು ರಾಜ್ಯ ಕಾಂಗ್ರೆಸ್ ಪಕ್ಷದ ಹಲವು ಈಡಿಗ ನಾಯಕರು ಈಗ ಸಕ್ರಿಯವಾಗಿಲ್ಲ.

ಇದನ್ನು ಓದಿ: ಚುನಾವಣೆ ಹೊತ್ತಿನಲ್ಲಿ M.B Patilಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ!

ಬಿ.ಕೆ.‌ ಹರಿಪ್ರಸಾದ್ ಮಾತ್ರ ಆ ಸಮುದಾಯದಿಂದ ಹೆಚ್ಚು ಪ್ರಭಾವ ಹೊಂದಿರುವವರು. ಕರುಬರ ನಂತರ ಅತಿ ದೊಡ್ಡ ಈಡಿಗ ಸಮುದಾಯವನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿ ಹರಿಪ್ರಸಾದ್ ಅವರಿಗೆ ವಿರೋಧ ಪಕ್ಷದ ನಾಯಕನ‌ ಸ್ಥಾನವನ್ನು ನೀಡಲೇಬೇಕಾಯಿತು ಎಂದು ಕೂಡ ಹೇಳಲಾಗುತ್ತಿದೆ.

ಕೆ. ಗೋವಿಂದರಾಜ್ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪ ನಾಯಕ

ಇದೇ ವೇಳೆ ಒಕ್ಕಲಿಗ ಸಮುದಾಯದ ಕೆ. ಗೋವಿಂದರಾಜ್ ಅವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪ ನಾಯಕನ್ನಾಗಿ ನೇಮಿಸಲಾಗಿದೆ. ಅಲ್ಲದೆ ಲಂಬಾಣಿ ಸಮುದಾಯದ ಪ್ರಕಾಶ್ ರಾಥೋಡ್ ಅವರಿಗೆ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಹುದ್ದೆ ನೀಡಲಾಗಿದೆ. ಬುಧವಾರ ಕಾಂಗ್ರೆಸ್ ಹೈಕಮಾಂಡ್ ಮಾಡಿರುವ ತೀರ್ಮಾನದಿಂದ ಸಿಎಂ ಇಬ್ರಾಹಿಂಗೆ ಭಾರೀ ನಿರಾಸೆ ಆಗಿದೆ. ಇಬ್ರಾಹಿಂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಮೇಲೆ ಆಸೆ ಇಟ್ಟುಕೊಂಡಿದ್ದರು. ಅದಕ್ಕಾಗಿ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುವುದಾಗಿ ಬ್ಲ್ಯಾಕ್ ಮೇಲ್ ಅನ್ನು ಕೂಡ ಮಾಡಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಇಬ್ರಾಹಿಂ ಅವರ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮಣಿಯದೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಿಸಿ ಏಕಕಾಲಕ್ಕೆ ಸಿದ್ದರಾಮಯ್ಯ, ಡಿ.ಕೆ‌ ಶಿವಕುಮಾರ್ ಹಾಗೂ ಸಿಎಂ ಇಬ್ರಾಹಿಂ ಅವರಿಗೆ ಸೂಕ್ತ ಸಂದೇಶ ರವಾನಿಸಿದೆ.
Published by:Seema R
First published: