ವಿಶ್ವಾಸಮತಕ್ಕೆ ಕ್ಷಣಗಣನೆ; ಸದನದಲ್ಲಿ ಹಾಜರಿರುವಂತೆ ಕಾಂಗ್ರೆಸ್ ಶಾಸಕರಿಗೆ ವಿಪ್

Karnataka Floor Test: ಸಂಜೆ 5 ಗಂಟೆಗೆ ಸದನಕ್ಕೆ ಎಲ್ಲ ಶಾಸಕರು ಹಾಜರಾಗಿರಬೇಕು. ಹಾಜರಾತಿ ಕಡ್ಡಾಯವಾಗಿದ್ದು, ಯಾರೂ ಕೂಡ ವಿಧಾನಸಭೆಯನ್ನು ಬಿಟ್ಟುಹೋಗದಂತೆ ಕಾಂಗ್ರೆಸ್​ ಶಾಸಕರಿಗೆ ಸೂಚನೆ ನೀಡಲಾಗಿದೆ

Seema.R | news18
Updated:July 22, 2019, 5:23 PM IST
ವಿಶ್ವಾಸಮತಕ್ಕೆ ಕ್ಷಣಗಣನೆ; ಸದನದಲ್ಲಿ ಹಾಜರಿರುವಂತೆ ಕಾಂಗ್ರೆಸ್ ಶಾಸಕರಿಗೆ ವಿಪ್
ಹೆಚ್​.ಡಿ. ಕುಮಾರಸ್ವಾಮಿ
Seema.R | news18
Updated: July 22, 2019, 5:23 PM IST
ಬೆಂಗಳೂರು(ಜು. 22): ವಿಶ್ವಾಸಮತ ನಿರ್ಣಯ ಕುರಿತು ಈಗಾಗಲೇ ಎರಡು ದಿನ ಚರ್ಚೆ ನಡೆಸಿದ್ದು, ಇಂದು ಸಂಜೆಯೊಳಗೆ ವಿಶ್ವಾಸಮತ ಮಂಡನೆ ಮಾಡಲೇಬೇಕು ಎಂದು ಸ್ಪೀಕರ್​ ಕಟ್ಟು ನಿಟ್ಟಿನ ಆಜ್ಞೆ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದನದಿಂದ ಹೊರಗೆಲ್ಲೂ ಹೋಗದಂತೆ ಕಡ್ಡಾಯಪಡಿಸಿ ತಮ್ಮ ಪಕ್ಷದ ಎಲ್ಲ ಶಾಸಕರಿಗೆ ಕಾಂಗ್ರೆಸ್​ ಮುಖ್ಯ ಸಚೇತಕ ಗಣೇಶ್​ ಹುಕ್ಕೇರಿ ಕಟ್ಟು ನಿಟ್ಟಿನ ಸೂಚನೆ ಹೊರಡಿಸಿದ್ದಾರೆ.

ಇನ್ನು, ಅತೃಪ್ತ ಶಾಸಕರಿಗೆ ನೀಡಿರುವ ವಿಪ್​ ಅರ್ಜಿ ಸಂಬಂಧ ಕಾಂಗ್ರೆಸ್​ ನಾಯಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ನಾಳೆಗೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ  ಇನ್ನೆರಡು ದಿನ ಕಾಲಾವಕಾಶವನ್ನು ನೀಡುವಂತೆ ಸಿಎಂ ಸ್ಪೀಕರ್​ ಬಳಿ ಮನವಿ ಮಾಡಿದ್ದರು. ಆದರೆ, ಸ್ಪೀಕರ್​ ಸಿಎಂ ಮನವಿಯನ್ನು ತಿರಸ್ಕರಿಸಿದ್ದು, ಇಂದು ಸಂಜೆ ಆರು ಗಂಟೆಗೆ ವಿಶ್ವಾಸಮತ ಮಂಡನೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಈಗಾಗಲೇ ಚರ್ಚೆ ನೆಪದಲ್ಲಿ ಸದನದ ವೇಳೆ ಹಾಳುಮಾಡುತ್ತಿದ್ದೇವೆ ಎಂಬ ಮಾತು ಕೇಳಿ ಬಂದಿದೆ. ಸುಮ್ಮನೆ ಈ ಪ್ರಕ್ರಿಯೆ ಮುಂದೂಡಿದರೆ, ನನ್ನ ಮೇಲೆ ಕಪ್ಪು ಚುಕ್ಕೆ ಬರುತ್ತದೆ. ಇಂದೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿ ಎಂದು ಸ್ಪೀಕರ್​ ತಿಳಿಸಿದ ಹಿನ್ನೆಲೆ ಮೈತ್ರಿ ಸರ್ಕಾರ ವಿಶ್ವಾಸ ಮತ ಸಾಬೀತಿಗೆ ಸಜ್ಜಾಗಿದೆ.

ಈ ಹಿನ್ನೆಲೆ ತಮ್ಮ ಸದಸ್ಯರಿಗೆ ಕಾಂಗ್ರೆಸ್​ ಸೂಚನೆ ಹೊರಡಿಸಿದ್ದು,  ಸಂಜೆ 5 ಗಂಟೆಗೆ ಸದನಕ್ಕೆ ಎಲ್ಲ ಶಾಸಕರು ಹಾಜರಾಗಿರಬೇಕು. ಹಾಜರಾತಿ ಕಡ್ಡಾಯವಾಗಿದ್ದು, ಯಾರೂ ಕೂಡ ವಿಧಾನಸಭೆಯನ್ನು ಬಿಟ್ಟುಹೋಗದಂತೆ ಸೂಚನೆ ನೀಡಿದ್ದಾರೆ.

ಪಟ್ಟು ಬಿಡದ ಅತೃಪ್ತರು?

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಮೈತ್ರಿ ಪಕ್ಷದ ನಾಯಕರು ವಿಶ್ವಾಸಮತ ಸಾಬೀತಿನ ಬಳಿಕವಷ್ಟೇ ರಾಜಧಾನಿಗೆ ವಾಪಸ್ಸಾಗುತ್ತೇವೆ. ಈ ವಿಚಾರದಲ್ಲಿ ನಮ್ಮ ನಿರ್ಧಾರ ಅಚಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಿಕ್ಕ ಸಮಯದಲ್ಲಿ ಅತೃಪ್ತರ ಮನವೊಲಿಸಲು ಕಾಂಗ್ರೆಸ್​, ಜೆಡಿಎಸ್​ ನಾಯಕರು ಮಾಡಿದ ಕಸರತ್ತು ವಿಫಲವಾಗಿದ್ದು, ಸಿಎಂ ವಿದಾಯದ ಭಾಷಣಾ ಮಾಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ.

ಸಂಖ್ಯಾ ಬಲಬಲ

ವಿಧಾನಸಭೆಯ ಒಟ್ಟು ಶಾಸಕರ ಸಂಖ್ಯೆ 224 ಆಗಿದ್ದು, ಸರ್ಕಾರ ನಡೆಸಲು ಪಕ್ಷವೊಂದಕ್ಕೆ 113 ಮ್ಯಾಜಿಕ್​ ನಂಬರ್​ ಇರಬೇಕು. ಆದರೆ ಸದ್ಯದ ಸ್ಥಿತಿಯಲ್ಲಿ 20 ಶಾಸಕರು ಗೈರಾಗಿರುವ ಹಿನ್ನೆಲೆ ಈ ಮ್ಯಾಜಿಕ್​ ಸಂಖ್ಯೆ ಮೊತ್ತ 103ಕ್ಕೆ ಇಳಿದಿದೆ.

ಸದನದಲ್ಲಿ ಸದ್ಯ ಕಾಂಗ್ರೆಸ್​ 98 ಸಂಖ್ಯಾಬಲವನ್ನು ಹೊಂದಿದ್ದು, ಆಂಗ್ಲೋ ಇಂಡಿಯನ್​ ಕೂಡ ಮೈತ್ರಿ ಪಕ್ಷದವರಾಗಿರುವ ಹಿನ್ನೆಲೆ ಅವರ ಸಂಖ್ಯೆ 99 ಆಗಿರಲಿದೆ.

ಇದನ್ನು ಓದಿ: ಚರ್ಚೆಗೆ ಇನ್ನೆರಡುದಿನ ಕಾಲಾವಕಾಶ ಕೇಳಿದ ಸಿಎಂ; ಎಚ್​ಡಿಕೆ ಮನವಿ ನಿರಾಕರಿಸಿದ ಸ್ಪೀಕರ್

ಇನ್ನು ಬಿಜೆಪಿಯಲ್ಲಿ 105 ಶಾಸಕರಿದ್ದು, ಇಬ್ಬರು ಪಕ್ಷೇತರರು ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆ ಅವರ ಸರ್ಕಾರ ರಚಿಸುವ ಬಗ್ಗೆ ಕಮಲ ನಾಯಕರಲ್ಲಿ ವಿಶ್ವಾಸ ಹೆಚ್ಚಿದೆ.

ಸಿಎಂರಿಂದ ವಿದಾಯದ ಭಾಷಣ?

ಅತೃಪ್ತರನ್ನು ಕರೆತರುವ ಪ್ರಯತ್ನ ಒಂದು ಕಡೆ ವಿಫಲವಾದರೆ, ಸುಪ್ರೀಂ ತೀರ್ಪು ನಾಳೆಗೆ ಮುಂದೂಡಲಾಗಿದೆ. ಈ ನಡುವೆ ವಿಶ್ವಾಸಮತ ಸಾಬೀತು ಪಡಿಸಲೇ ಬೇಕೆಂಬ ಒತ್ತಾಯ ಕೇಳಿ ಬಂದ ಹಿನ್ನೆಲೆ ಸಿಎಂ ಕುಮಾರಸ್ವಾಮಿ ಮುಂದೆ ದಾರಿ ಕಾಣದಂತೆ ಆಗಿದೆ. ಮೈತ್ರಿ ಪಕ್ಷದ ಸಂಖ್ಯೆ ಕುಗ್ಗಿರುವ ಹಿನ್ನೆಲೆಯಲ್ಲಿ ವಿಶ್ವಾಸ ಮತ ಸಾಬೀತಿನ ಬದಲು ಸಿಎಂ ಕುಮಾರಸ್ವಾಮಿ ನೇರವಾಗಿ ವಿದಾಯದ ಭಾಷಣ ಮಾಡಿ ರಾಜಭವನಕ್ಕೆ ತೆರಳಲಿದ್ದು, ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಜಭವನದಲ್ಲಿ ರಾಜ್ಯಪಾಲರ ಭೇಟಿಗೆ  ಸಂಜೆ 6.30ಕ್ಕೆ ಸಿಎಂ ಸಮಯ ಪಡೆಯಲಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಖಚಿತ ಎನ್ನಲಾಗಿದೆ.

First published:July 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...