ವಿಷ ಕಕ್ಕುವ ಕಾಂಗ್ರೆಸ್​ ಪಕ್ಷವನ್ನು ನಂಬಿದವರ ಕತೆ ಗೋವಿಂದ; ಸಚಿವ ಆರ್​. ಅಶೋಕ್ ವ್ಯಂಗ್ಯ

ಕಾಂಗ್ರೆಸ್ ಒಂದು ವಿಷ ಕಕ್ಕುವ ಪಕ್ಷ. ಕಾಂಗ್ರೆಸ್​ನವರು ಜೆಡಿಎಸ್‌ಗೆ ಸ್ವಲ್ಪ ಜಾಸ್ತಿ ವಿಷ ಹಾಕಿದರು. ಕಾಂಗ್ರೆಸ್ ಪಕ್ಷವನ್ನು ನಂಬಿದವರ ಕತೆ ಗೋವಿಂದಾ ಗೋವಿಂದ ಎಂದು ಆರ್​. ಅಶೋಕ್ ವ್ಯಂಗ್ಯವಾಡಿದ್ದಾರೆ.

ಸಚಿವ ಆರ್. ಅಶೋಕ್

ಸಚಿವ ಆರ್. ಅಶೋಕ್

  • Share this:
ಬೆಂಗಳೂರು (ಡಿ. 6): ಕಾಂಗ್ರೆಸ್ ಪಕ್ಷ ಯಾವತ್ತಿದ್ದರೂ ಒಂಥರಾ ವಿಷ. ನಿಧಾನವಾಗಿ ಕುಡಿದರೂ ಸಾಯ್ತಾರೆ, ಜಾಸ್ತಿ ಆದರೂ ಸಾಯ್ತಾರೆ. ಕಾಂಗ್ರೆಸ್​ನವರು ಜೆಡಿಎಸ್‌ಗೆ ಸ್ವಲ್ಪ ಜಾಸ್ತಿ ವಿಷ ಹಾಕಿದರು. ಕಾಂಗ್ರೆಸ್ ಒಂದು ವಿಷ ಕಕ್ಕುವ ಪಕ್ಷ ಎಂದು ಆರ್​. ಅಶೋಕ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕುತಂತ್ರ ಮತ್ತು ದೇವೇಗೌಡರ ಭಾವನಾತ್ಮಕ ಮಾತಿಗೆ ನಾನು ಸಿಕ್ಕಿಬಿದ್ದೆ. ಕಾಂಗ್ರೆಸ್​ನಿಂದಲೇ ನನ್ನ ಹೆಸರು ಹಾಳಾಯಿತು ಎಂಬ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಚಿವ ಆರ್​. ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಕುಮಾರಸ್ವಾಮಿ ತಮ್ಮ ಮನದಾಳದ ಮಾತನ್ನು ಆಡಿದ್ದಾರೆ. ಕಾಂಗ್ರೆಸ್​ ಪಕ್ಷ ವಿಷ ಕಾರುವ ಪಕ್ಷ. ಯಾರು ಕುಮಾರಸ್ವಾಮಿ ಜೊತೆ ಜೊತೆಯಲ್ಲಿದ್ದರೋ ಅವರೇ ವಿಷವನ್ನು ಇಂಜೆಕ್ಟ್​ ಮಾಡಿದರು. 2006 - 2008ರಲ್ಲಿ ಬಿಜೆಪಿ ಸರ್ಕಾರ ಮಾಡಿದ್ದಾಗ ಕುಮಾರಸ್ವಾಮಿಯವರ ವರ್ಚಸ್ಸು ಹೆಚ್ಚಿತ್ತು. ಆದರೆ, ಕಾಂಗ್ರೆಸ್ ಅವರಿಗೆ ಟಾರ್ಚರ್ ಮಾಡಿತು. ಕಾಂಗ್ರೆಸ್ ಪಕ್ಷವನ್ನು ನಂಬಿದವರ ಕತೆ ಗೋವಿಂದಾ ಗೋವಿಂದ ಎಂದು ಆರ್​. ಅಶೋಕ್ ವ್ಯಂಗ್ಯವಾಡಿದ್ದಾರೆ.

ಇಡೀ ದೇಶದಲ್ಲಿ ಇನ್ನು ಕಾಂಗ್ರೆಸ್ ಇರುವುದಿಲ್ಲ. ಇನ್ನೇನಿದ್ದರೂ ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಯ ಆಳ್ವಿಕೆ. ಇನ್ನೂ 20 ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿ ಇರಲಿದೆ. ದೇಶದಲ್ಲಿ ಇನ್ನೂ ಬಾಕಿ ಉಳಿದ ಕಾಂಗ್ರೆಸ್ ಗಿಡಗಳನ್ನು ಕಿತ್ತು, ಬಿಜೆಪಿ ಗಿಡಗಳನ್ನು ನೆಡುತ್ತೇವೆ ಎಂದು ಸಚಿವ ಆರ್ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗ್ರಾಮ ಪಂಚಾಯಿತಿ ಚುನಾವಣೆ; ಕಲಬುರ್ಗಿಯ ಬೀಳವಾರ ಸದಸ್ಯರ ಸ್ಥಾನ 26.55 ಲಕ್ಷಕ್ಕೆ ಹರಾಜು!

ಬಿಜೆಪಿ ಕೊಟ್ಟ ಮಾತಿಗೆ ತಪ್ಪದ ಪಕ್ಷ. ಹಿಂದೆ ಮಾತು ಕೊಟ್ಟಂತೆ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ 20 ತಿಂಗಳು ಅಧಿಕಾರ ಕೊಟ್ಟಿದ್ದೆವು. ಅದರಂತೆ 20 ದಿನಗಳಿಗೆ ಒಂದು ದಿನವೂ ಕಡಿಮೆ ಇಲ್ಲದಂತೆ ಅವರಿಗೆ ಅಧಿಕಾರ ಕೊಟ್ಟಿದ್ದೆವು. ಈ ಮೂಲಕ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಆದರೆ ಕಾಂಗ್ರೆಸ್​ನವರು ಅವರಿಗೆ 5 ವರ್ಷ ನೀವೇ ಸಿಎಂ ಎಂದು ಕೊನೆಗೆ 1 ವರ್ಷಕ್ಕೆ ಕೆಳಗೆ ಇಳಿಸಿದರು. ಕಾಂಗ್ರೆಸ್ ಪಕ್ಷ ಎಂಬುದು ಒಂದು ವಿಷ ಕಕ್ಕುವ ಪಾರ್ಟಿ. ಸದ್ಯಕ್ಕೆ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿದ್ದಾರೆ. ಅವರೇ ಸಿಎಂ ಆಗಿಯೂ ಮುಂದುವರೆಯುತ್ತಾರೆ. ಈಗ ಯಾವುದೇ ಪಕ್ಷದಿಂದ ಒಳ ಒಪ್ಪಂದ ಆಗಲಿ, ಹೊರ ಒಪ್ಪಂದ ಆಗಲಿ ಬಿಜೆಪಿಗೆ ಬೇಕಾಗಿಲ್ಲ ಎಂದು ಆರ್​. ಅಶೋಕ್ ಹೇಳಿದ್ದಾರೆ.

ನಾಳೆಯಿಂದ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಪ್ರತಿಪಕ್ಷ ಇದ್ದರೆ ತಾನೇ ಅದನ್ನು ಎದುರಿಸಲು ನಾವು ಸಜ್ಜಾಗೋದು? ಈಗಾಗಲೇ ಕಾಂಗ್ರೆಸ್​ನ ನಂಬಬೇಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಇಬ್ಬರೂ ಕೂಡ ಜಗಳವಾಡಿದ್ದಾರೆ. ಕಾಂಗ್ರೆಸ್ ಈಗ ಒಂಟಿಯಾಗಿದೆ. ಹೀಗಾಗಿ, ಕಾಂಗ್ರೆಸ್​ ಪಕ್ಷವನ್ನು ಎದುರಿಸಲು ನಾವು ಸಜ್ಜಾಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
Published by:Sushma Chakre
First published: