Congress in-fighting- ಬಯಲಿಗೆ ಬಂದ ಕೈ ಒಳಜಗಳ; ಉತ್ತರಕನ್ನಡ ಜಿಲ್ಲೆ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಗೊಂದಲ

Uttara Kannada Congress- ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಕಾರವಾರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆ ಹಲವು ಗೊಂದಲಗಳ ಗೂಡಾಗಿ ಮಾರ್ಪಟ್ಟಿತು. ಈ ವೇಳೆ ಜಿಲ್ಲಾ ಕಾಂಗ್ರೆಸ್ ನಾಯಕರೊಳಗಿರುವ ಒಳಜಗಳ ಅನಾವರಣಗೊಂಡಿತ್ತು.

ಕಾಂಗ್ರೆಸ್ ಪಕ್ಷದ ನಾಯಕರು

ಕಾಂಗ್ರೆಸ್ ಪಕ್ಷದ ನಾಯಕರು

  • Share this:
ಕಾರವಾರ: ವಿಧಾನಪರಿಷತ್ ಚುನಾವಣೆಗೆ (MLC elections) ಇನ್ನೇನು ದಿನಗಣನೆ ಆರಂಭವಾಗಿದ್ದು ಮತದಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ರಾಜಕೀಯ ಪಕ್ಷಗಳು ಭರದ ಪ್ರಚಾರದಲ್ಲಿ ತೊಡಗಿವೆ. ಉತ್ತರಕನ್ನಡ ಜಿಲ್ಲೆಯಲ್ಲಿ (Uttara Kannada district) ಕಾಂಗ್ರೆಸ್ ಸಹ ಈ ಬಾರಿ ತನ್ನ ಅಭ್ಯರ್ಥಿಯನ್ನ ಗೆಲ್ಲಿಸಲೇಬೇಕು ಎನ್ನುವ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳ ಮತದಾರರಲ್ಲಿ ಮತಯಾಚನೆಯಲ್ಲಿ ತೊಡಗಿದೆ. ಆದ್ರೆ ಸಭೆಯ ಸಂದರ್ಭದಲ್ಲಿ ಪಕ್ಷದ ಕೆಲ ಸದಸ್ಯರು ಮುಖಂಡರುಗಳ ಸಮ್ಮುಖದಲ್ಲೇ ಅಸಮಾಧಾನ ವ್ಯಕ್ತಪಡಿಸಿ ಗದ್ದಲ ಎಬ್ಬಿಸುವಂತಹ ಪ್ರಸಂಗ ನಡೆಯುತ್ತಿದೆ.

ಪರಿಷತ್ ಚುನಾವಣೆಗೆ ದಿನ ಹತ್ತಿರವಾಗುತ್ತಿರುವಂತೆ ಚುನಾವಣಾ ಕಣ ರಂಗು ಪಡೆದುಕೊಳ್ಳುತ್ತಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ನಡುವೆಯೇ ನೇರಹಣಾಹಣಿ ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ಶತಾಯಗತಾಯ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರಲು ಪಕ್ಷಗಳು ಹರಸಾಹಸಪಡುತ್ತಿದ್ದು ಕಾಂಗ್ರೆಸ್ ಸಹ ಸದ್ದಿಲ್ಲದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇವತ್ತು ಕಾಂಗ್ರೆಸ್‌ನ ಹಿರಿಯ ಮುಖಂಡ, ಶಾಸಕ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಕಾರವಾರದಲ್ಲಿ ಪಕ್ಷದ ಸದಸ್ಯರೊಂದಿಗೆ ಪ್ರಚಾರ ಸಭೆಯನ್ನ ನಡೆಸಲಾಯಿತು. ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ಭೀಮಣ್ಣ ನಾಯ್ಕ ಸೇರಿದಂತೆ ಸ್ಥಳೀಯ ಮುಖಂಡರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಭಾಗವಹಿಸಿದ್ದರು.

ಈಗಾಗಲೇ ಜಿಲ್ಲೆಯ ಹನ್ನೊಂದು ತಾಲ್ಲೂಕುಗಳ ಪೈಕಿ ಕಾಂಗ್ರೆಸ್ ಬಹುತೇಕ ಎಲ್ಲ ತಾಲ್ಲೂಕುಗಳಲ್ಲೂ ಪ್ರಚಾರವನ್ನ ಕೈಗೊಂಡಿದ್ದು ಇಂದು ಕಾರವಾರ ಅಂಕೋಲಾ ತಾಲ್ಲೂಕಿನಲ್ಲಿ ಪ್ರಚಾರ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು. ಆರ್ ವಿ ದೇಶಪಾಂಡೆ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಪ್ರಚಾರ ಕೈಗೊಳ್ಳುವಂತೆ ಸದಸ್ಯರಿಗೆ ಸಲಹೆ ಸೂಚನೆಗಳನ್ನ ನೀಡಿದ್ದು ಮೊದಲ ಪ್ರಾಶಸ್ತ್ಯದ ಮತಗಳನ್ನ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ಆದ್ರೆ ಈ ವೇಳೆ ಪಕ್ಷದ ಕೆಲ ಚುನಾಯಿತ ಸದಸ್ಯರು ಎದ್ದು ನಿಂತು, ಪ್ರಚಾರಕಾರ್ಯ ಕೈಗೊಳ್ಳುವಲ್ಲಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರುಗಳಲ್ಲಿ ಹೊಂದಾಣಿಕೆ ಇಲ್ಲ. ಈ ಕಾರಣದಿಂದ ಅಭ್ಯರ್ಥಿಪರ ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: S.R.Vishwanath ಕೊಲೆಗೆ ಸ್ಕೆಚ್ ಪ್ರಕರಣಕ್ಕೆ ಟ್ವಿಸ್ಟ್; NEWS18 ಎದುರು ಹೊಸ ಕಥೆ ಬಿಚ್ಚಿಟ್ಟ ಗೋಪಾಲಕೃಷ್ಣ

ಈ ಕುರಿತು ಪ್ರತಿಕ್ರಿಯಿಸಿದ ದೇಶಪಾಂಡೆ, ಕೆಲವೊಂದು ವಿಚಾರದಿಂದ ಗೊಂದಲ ಉಂಟಾಗಿದ್ದು ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ತಿಳಿಸಿದ್ದಾರೆ.

ಇನ್ನು ಕಾಂಗ್ರೆಸ್ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಐವತ್ತಕ್ಕಿಂತ ಕಡಿಮೆ ಸದಸ್ಯರು ಭಾಗವಹಿಸಿದ್ದು ಬಹುತೇಕ ಪಂಚಾಯತ್‌ಗಳಿಂದ ಕೇವಲ ಮುಖಂಡರು ಮಾತ್ರ ಆಗಮಿಸಿದ್ದರು. ಸಭೆಯ ಕುರಿತು ಸೂಕ್ತ ಮಾಹಿತಿ ನೀಡಿ ಎಲ್ಲರನ್ನೂ ಆಹ್ವಾನಿಸಿದ್ದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸದಸ್ಯರು ಸಹ ಆಗಮಿಸುತ್ತಿದ್ದರು. ಪಕ್ಷದ ಕೆಲ ಹಿರಿಯ ಮುಖಂಡರ ನಡುವಿನ ಹೊಂದಾಣಿಕೆ ಕೊರತೆಯಿಂದಲೇ ಸಭೆಗೆ ಸದಸ್ಯರು ಬಾರದಂತಾಗಿದೆ ಅಂತಾ ಚುನಾಯಿತ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು ಬಳಿಕ ದೇಶಪಾಂಡೆ ಅವರನ್ನ ಸಮಾಧಾನಪಡಿಸಿದರು.

ಇನ್ನು ಪ್ರಚಾರ ಕಾರ್ಯದ ಕುರಿತು ಪ್ರತಿಕ್ರಿಯಿಸಿದ ಅಭ್ಯರ್ಥಿ ಭೀಮಣ್ಣ ನಾಯ್ಕ, ಸ್ಥಳೀಯ ಸಂಸ್ಥೆಗಳನ್ನ ಬಲಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಯಾವುದೇ ಕ್ರಮಗಳನ್ನ ಕೈಗೊಂಡಿಲ್ಲವಾಗಿದ್ದು ಹಲವೆಡೆ ಈ ಕುರಿತು ಚುನಾಯಿತ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮತದಾರರು ತನ್ನನ್ನೇ ಹೆಚ್ಚಿನ ಪ್ರಾಶಸ್ತ್ಯದ ಮತಗಳನ್ನ ನೀಡಿ ಗೆಲ್ಲಿಸಿಕೊಂಡು ಬರಲಿದ್ದಾರೆ ಅಂತಾ ತಿಳಿಸಿದರು.

ಕಳೆದೆರಡು ಅವಧಿಯಲ್ಲಿ ಜಿಲ್ಲೆಯ ಪರಿಷತ್ ಸ್ಥಾನವನ್ನ ಕಾಂಗ್ರೆಸ್ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಅಭ್ಯರ್ಥಿ ಬೇರೆಯಾಗಿದ್ದರೂ ಸಹ ತಮ್ಮದೇ ಪಕ್ಷ ಗೆಲುವು ಸಾಧಿಸುವ ವಿಶ್ವಾಸವನ್ನ ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದ್ದು ಮತದಾರರು ಯಾರ ಕೈ ಹಿಡಿಯಲಿದ್ದಾರೆ ಅನ್ನೋದನ್ನ ಕಾದುನೋಡಬೇಕು.-

ವರದಿ: ದರ್ಶನ್ ನಾಯ್ಕ್
Published by:Vijayasarthy SN
First published: