ಅಭ್ಯರ್ಥಿ ಗತಿ ಇಲ್ಲದೆ ಮನಗೂಳಿ ಪುತ್ರನನ್ನು Congress ಹೈಜಾಕ್ ಮಾಡಿತು, ಕಾಕಾನ ಸಾಧನೆ ಕಸಿದುಕೊಳ್ಳಲಾಗದು: HD Kumaraswamy

ಕೊರೋನಾ ನಿರ್ವಹಣೆಯಲ್ಲಿ ಕೂಡ ಸರಕಾರ ಸರಿಯಾಗಿ ಕೆಲಸ ಮಾಡಲಿಲ್ಲ. ಪ್ರಾಣಹಾನಿ ಆದ ಕುಟುಂಬಗಳಿಗೆ ಯಾವ ನೆರವನ್ನೂ ಕೊಡಲಿಲ್ಲ. ಕಾರ್ಮಿಕ ಮತ್ತು ಶ್ರಮಿಕ ವರ್ಗದ ಜನರಿಗೆ ಕೊನೆಪಕ್ಷ ಹತ್ತು ಸಾವಿರ ರೂಪಾಯಿ ಹಣವನ್ನು ನೀಡಲಿಲ್ಲ ಎಂದು ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಎಚ್ ಡಿ ಕುಮಾರಸ್ವಾಮಿ

ಎಚ್ ಡಿ ಕುಮಾರಸ್ವಾಮಿ

 • Share this:
  ಸಿಂದಗಿ: ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ (Former PM Devegowda) ಕುಟುಂಬಕ್ಕೆ, ಜಾತ್ಯತೀತ ಜನತಾದಳ (JDS) ಮತ್ತು ಸಿಂದಗಿ ಕ್ಷೇತ್ರದ (Sindagi Constituency) ನಡುವೆ ವಾತ್ಸಲ್ಯಪೂರ್ಣವಾದ ಕರುಳುಬಳ್ಳಿಯ ಸಂಬಂಧ ಇದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಬಣ್ಣಿಸಿದರು. ಸಿಂದಗಿ ಕ್ಷೇತ್ರದ ಹೊಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಚುನಾವಣಾ ಪ್ರಚಾರ ಮಾಡುವ ವೇಳೆ ಅವರು ಮಾತನಾಡಿದರು. ಸುಮಾರು ಮೂವತ್ತು ವರ್ಷಗಳ ಕಾಲ ದಿವಂಗತ ಮನಗೂಳಿ (MC Managouli) ಕಾಕಾ ಅವರು ದೇವೇಗೌಡರ ಕುಟುಂಬದ ಸದಸ್ಯರಂತೆ ಇದ್ದರು. ಅವರನ್ನು ದೇವೇಗೌಡರು ಸ್ವಂತ ಸಹೋದರನಂತೆ ನೋಡುತ್ತಿದ್ದರು. ಏಳು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಸಲ ಗೆದ್ದ ಅವರನ್ನು ಎರಡೂ ಸಲವೂ ಪಕ್ಷ ಮಂತ್ರಿ ಮಾಡಿತ್ತು ಎಂದು ಕುಮಾರಸ್ವಾಮಿ ಅವರು ನೆನಪು ಮಾಡಿಕೊಂಡರು.

  ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಆಗಿದ್ದಾಗ ದೇವೇಗೌಡರು ಸಿಂದಗಿ ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ನೀಡಿದ್ದರು. ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದರು. ಅದಕ್ಕೆ ಕುರುಹಾಗಿ ದೇವೇಗೌಡರು ಮತ್ತು ಮನಗೂಳಿ ಅವರಿಬ್ಬರ ಪ್ರತಿಮೆಗಳನ್ನು ಜನರು ಕೃತಜ್ಞತಾಪೂರ್ವಕವಾಗಿ ಇಲ್ಲಿ ಸ್ಥಾಪನೆ ಮಾಡಿದ್ದಾರೆ. ಇಂಥ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅದೃಷ್ಟ ನನ್ನದು ಎಂದರು.

  ಮನಗೂಳಿ ಸಾಧನೆಯನ್ನು ಹೈಜಾಕ್ ಮಾಡಲಾಗದು

  ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯ ಗತಿ ಇಲ್ಲದೆ ಮನಗೂಳಿ ಕಾಕಾ ಅವರ ಪುತ್ರನನ್ನು ಹೈಜಾಕ್ ಮಾಡಿ ಅಭ್ಯರ್ಥಿ ಮಾಡಿರಬಹುದು. ಆದರೆ, ಕಾಕಾ ಅವರ ಜನಪ್ರಿಯತೆ, ಅವರು ಮಾಡಿದ ಸೇವೆ ಹಾಗೂ ಸಿಂಧಗಿ ಕ್ಷೇತ್ರಕ್ಕೆ ಜೆಡಿಎಸ್ ಕೊಟ್ಟಿರುವ ಕೊಡುಗೆಯನ್ನು ಹೈಜಾಕ್ ಮಾಡಲಾಗದು ಎಂದು ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷಕ್ಕೆ ಕುಟುಕಿದರು.

  ಮನಗೂಳಿ ಕಾಕಾ ಮಾಡಿರುವ ಸಾಧನೆಗಳನ್ನು ಕಾಂಗ್ರೆಸ್ ಅಭ್ಯರ್ಥಿ ಈಗ ಹೈಜಾಕ್ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಸಾಧನೆಗಳ ಪುಸ್ತಕ ಮಾಡಿ ಹಂಚುತ್ತಿದ್ದಾರೆ. ಆದರೆ, ಸಿಂದಗಿ ಜನತೆಗೆ ನಮ್ಮ ಪಕ್ಷದ ಮೇಲೆ ಅಪಾರ ಪ್ರೀತಿ, ನಂಬಿಕೆ ಇದೆ. ಮಾಡಿದ ಸೇವೆಯ ನೆನಪಿದೆ. ಅದನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.

  ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ

  ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ನಾಲಿಗೆಯಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎನ್ನುತ್ತಿದ್ದರೂ ಅದೇ ನಾಯಕರೂ ಕಳೆದ ಚುನಾವಣೆ ನಂತರ ಸರಕಾರ ಮಾಡಬೇಕು ಎಂದು ನಮ್ಮ ಪಕ್ಷದ ಬಾಗಿಲಲ್ಲಿ ನಿಂತಿದ್ದರು.
  ಯಾರು ನಮ್ಮ ಪಕ್ಷಕ್ಕೆ ಮತ ಹಾಕಬೇಡಿ ಎಂದು ಜನರಿಗೆ ಹೇಳಿದರೋ ಅವರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ದೇವೇಗೌಡರ ಮನೆ ಮುಂದೆ ನಿಂತರು. ಆದರೆ, ಸಿದ್ದರಾಮಯ್ಯ ಅವರ ಸುಳ್ಳು ಮಾತುಗಳಿಂದ ನಮ್ಮ ಪಕ್ಷಕ್ಕೆ ಆ ಚುನಾವಣೆಯಲ್ಲಿ ಹಾನಿ ಆಯಿತು ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

  ಅಷ್ಟಕ್ಕೇ ಸುಮ್ಮನಾಗದ ಸಿದ್ದರಾಮಯ್ಯ ಈಗ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಸೆಕ್ಯುಲರ್ ಮತಗಳನ್ನು ವಿಭಜಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದು ಸರಣಿ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು.

  ಯಾವ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬಾರದು ಎಂದು ಜನತೆಯನ್ನು ಕೋರಿದ ಹೆಚ್ ಡಿಕೆ ಅವರು, ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಅದರ ಫಲ ಬಿಜೆಪಿಗೆ ಹೋಗುತ್ತದೆ. ಈ ಕಾರಣಕ್ಕೆ ಜೆಡಿಎಸ್ ಸಿಂಧಗಿ ಜನರ ಸಹಜ ಆಯ್ಕೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.

  ಜೆಡಿಎಸ್ ಗೆಲವು ಖಚಿತ

  ಸಿಂದಗಿ ಕ್ಷೇತ್ರದಲ್ಲಿ ಹಣಾಹಣಿ ಇರುವುದು ಜೆಡಿಎಸ್ ಮತ್ತು ಬಿಜೆಪಿ ನಡುವೆ ಮಾತ್ರ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿತ್ತು. ಯಾವ ಚುನಾವಣೆಯಲ್ಲಿಯೂ ಇಲ್ಲಿ ಆ ಪಕ್ಷ ಎರಡನೇ ಸ್ಥಾನಕ್ಕೆ ಬಂದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು. ಬಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡ ವೇಳೆ ಮಾತನಾಡಿದ ಅವರು, ಸುಳ್ಳು ಮಾತುಗಳಿಂದ ಚುನಾವಣೆಯನ್ನು ಗೆಲ್ಲಲಾಗದು. ಜನರ ಕೆಲಸ ಮಾಡಿದರಷ್ಟೇ ಜಯ ಸಾಧ್ಯ ಎಂದರು.

  ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ವಿಫಲ

  ನನ್ನ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು. ಸಿಂದಗಿಯ ಮಾಡಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಜೆ ಪ್ರಚಾರ ನಡೆಸಿದ ಅವರು, ಉತ್ತರ ಕರ್ನಾಟಕ ಪ್ರದೇಶದಲ್ಲಿ ನೆರೆ ಬಂತು. ಅದನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಮನೆ ಕಳೆದುಕೊಂಡ ಕುಟುಂಬಗಳಿಗೆ ಐದು ಲಕ್ಷ ರೂ. ಪರಿಹಾರವನ್ನು ನೀಡಲಿಲ್ಲ ಎಂದು ಅವರು ಹೇಳಿದರು.

  ಕೊರೋನಾ ನಿರ್ವಹಣೆಯಲ್ಲಿ ಕೂಡ ಸರಕಾರ ಸರಿಯಾಗಿ ಕೆಲಸ ಮಾಡಲಿಲ್ಲ. ಪ್ರಾಣಹಾನಿ ಆದ ಕುಟುಂಬಗಳಿಗೆ ಯಾವ ನೆರವನ್ನೂ ಕೊಡಲಿಲ್ಲ. ಕಾರ್ಮಿಕ ಮತ್ತು ಶ್ರಮಿಕ ವರ್ಗದ ಜನರಿಗೆ ಕೊನೆಪಕ್ಷ ಹತ್ತು ಸಾವಿರ ರೂಪಾಯಿ ಹಣವನ್ನು ನೀಡಲಿಲ್ಲ ಎಂದು ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

  ಇದನ್ನು ಓದಿ: ಮುಸ್ಲಿಂ ಅಭ್ಯರ್ಥಿ ವಿವಾದ ಆರಂಭಿಸಿದ್ದೇ Siddaramaiah, ಅದಕ್ಕೆ ನಾನೇ ಅಂತ್ಯ ಹಾಡುತ್ತೇನೆ; HD Kumaraswamy

  ಈ ಸಂದರ್ಭದಲ್ಲಿ ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಜಿಯ ಶಕೀಲಾ ಅಂಗಡಿ, ಪಕ್ಷದ ಹಿರಿಯ ನಾಯಕ ಬಂಡೆಪ್ಪ ಕಾಷೆಂಪೂರ್, ರಾಜೂಗೌಡ ಪಾಟೀಲ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು, ಜನರು ನೆರೆದಿದ್ದರು.
  Published by:HR Ramesh
  First published: