ಕಾಂಗ್ರೆಸ್​ ರಾಜ್ಯಾಧ್ಯಕ್ಷ ಹುದ್ದೆಗೆ ಡಿಕೆಶಿ?; ಕುಗ್ಗಿರುವ ಪಕ್ಷದ ವರ್ಚಸ್ಸನ್ನು ವೃದ್ಧಿಸಲು ಟ್ರಬಲ್ ಶೂಟರ್​ಗೆ ಮಣೆ ಹಾಕಿತಾ ಹೈಕಮಾಂಡ್?

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಎಂ.ಬಿ. ಪಾಟೀಲ್ ಮತ್ತು ಡಿ.ಕೆ. ಶಿವಕುಮಾರ್​ ನಡುವೆ ನೇರ ಪೈಪೋಟಿ ಇದ್ದು ಹೈಕಮಾಂಡ್​ ಈಗಾಗಲೇ ಡಿಕೆಶಿ ಗೆ ಪಟ್ಟ ಕಟ್ಟಲು ಸಿದ್ದಗೊಂಡಿದೆ ಎನ್ನುತ್ತಿವೆ ಕಾಂಗ್ರೆಸ್​ ಮೂಲಗಳು.

ಎಂ.ಬಿ ಪಾಟೀಲ್, ಡಿ.ಕೆ. ಶಿವಕುಮಾರ್​.

ಎಂ.ಬಿ ಪಾಟೀಲ್, ಡಿ.ಕೆ. ಶಿವಕುಮಾರ್​.

  • Share this:
ರಾಜ್ಯದ ಮಟ್ಟಿಗೆ ಕಾಂಗ್ರೆಸ್​ ತೀರಾ ಹೀನಾಯ ಸ್ಥಿತಿಗೆ ತಲುಪಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲೇ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್​ ಉತ್ತಮ ನೆಲೆಯನ್ನು ಹೊಂದಿತ್ತು. ಆದರೆ, ಕಳೆದ ವಿಧಾನಸಭೆ, ಲೋಕಸಭೆ ಹಾಗೂ ಉಪ ಚುನಾವಣೆಗಳಲ್ಲಿನ ಸೋಲು ಇಡೀ ಪಕ್ಷವನ್ನು ಚಿಂತೆಗೆ ಈಡು ಮಾಡಿದೆ. ಇದೇ ಕಾರಣಕ್ಕೆ ಪಕ್ಷದ ಪ್ರಮುಖ ನಾಯಕರು ತಮ್ಮ ಸ್ಥಾನಗಳಿಗೆ ಸಾಲು ಸಾಲು ರಾಜೀನಾಮೆ ನೀಡುವ ಮೂಲಕ ಮತ್ತಷ್ಟು ಆತಂಕವನ್ನು ಸೃಷ್ಟಿಸಿದ್ದರು.

ಆದರೆ, ಹೀಗೆ ರಾಜೀನಾಮೆಗಳಿಂದ ತೆರವಾದ ಸ್ಥಾನಗಳಿಗೆ ಯಾರನ್ನು ತುಂಬುವುದು? ಅದರಲ್ಲೂ ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಯಾರಿಗೆ ನೀಡುವುದು? ಎಂಬ ವಿಚಾರ ಕಾಂಗ್ರೆಸ್​ ಹೈಕಮಾಂಡ್​ಗೆ ತೀರಾ ತಲೆ ನೋವಾಗಿ ಪರಿಣಮಿಸದರೆ, ಇದರ ಬೆನ್ನಿಗೆ ಹುಟ್ಟಿದ ಲಾಬಿ ತಂತ್ರ ಪಕ್ಷವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಈ ನಡುವೆ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಎಂ.ಬಿ. ಪಾಟೀಲ್ ಮತ್ತು ಡಿ.ಕೆ. ಶಿವಕುಮಾರ್​ ನಡುವೆ ನೇರ ಪೈಪೋಟಿ ಇದ್ದು ಹೈಕಮಾಂಡ್​ ಈಗಾಗಲೇ ಡಿಕೆಶಿ ಗೆ ಪಟ್ಟ ಕಟ್ಟಲು ಸಿದ್ದಗೊಂಡಿದೆ ಎನ್ನುತ್ತಿವೆ ಕಾಂಗ್ರೆಸ್​ ಮೂಲಗಳು.

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿಕೆಶಿ? :

2018 ರಾಜ್ಯ ವಿಧಾನಸಭೆ ಚುನಾವಣೆ 2019ರ ಲೋಕಸಭಾ ಚುನಾವಣೆ ಸೋಲಿನಿಂದ ಹೈರಾಣಾಗಿದ್ದ ಕಾಂಗ್ರೆಸ್ ಮಹತ್ವದ ಉಪ ಚುನಾವಣೆಯಲ್ಲೂ ಹೀನಾಯ ಸೋಲನುಭವಿಸಿತ್ತು. ಅನರ್ಹ ಶಾಸಕರಿಗೆ ಸೋಲುಣಿಸಬೇಕು ಎಂಬ ತಮ್ಮ ಉದ್ದೇಶದಲ್ಲಿ ಎಡವಿತ್ತು. ಪರಿಣಾಮ ಸೋಲಿನ ನೈತಿಕ ಹೊಣೆ ಹೊತ್ತು ಸಿಎಲ್​ಪಿ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು.

ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಹೈಕಮಾಂಡ್ ಯಾವುದೇ ಕಾರಣಕ್ಕೂ ಅಂಗೀಕರಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿತ್ತು. ಹೀಗಾಗಿ ಇದೊಂದು ಒತ್ತಡ ಹೇರುವ ನಾಟಕ ಎಂದು ಅನೇಕರು ಟೀಕಿಸಿದ್ದರು.

ಆದರೆ, ದಿನೇಶ್ ಗುಂಡೂರಾವ್ ವಿರುದ್ಧ ಆರಂಭದಿಂದಲೂ ಪಕ್ಷದಲ್ಲಿ ಸಾಕಷ್ಟು ಅಸಮಾಧಾನವಿತ್ತು. ರೋಷನ್ ಬೇಗ್ ಸೇರಿದಂತೆ ಅನೇಕರು ದಿನೇಶ್ ಗುಂಡೂರಾವ್ ಕಾರ್ಯ ವೈಖರಿಯನ್ನು ಬಹಿರಂಗವಾಗಿ ಟೀಕಿಸಿದ್ದರು. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡುತ್ತಿದ್ದಂತೆ ಈ ಸ್ಥಾನದ ಮೇಲೆ ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್. ರಾಜಣ್ಣ, ಕೋಲಾರ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಹಾದಿಯಾಗಿ ಅನೇಕರು ಕಣ್ಣಿಟ್ಟಿದ್ದರು.

ಆದರೆ, ಪ್ರಬಲ ಪೈಪೋಟಿ ಇದ್ದದ್ದು ಮಾತ್ರ ಲಿಂಗಾಯತ ಸಮುದಾಯದ ನಾಯಕ ಎಂ.ಬಿ. ಪಾಟೀಲ್ ಹಾಗೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರ ಮಧ್ಯೆ ಮಾತ್ರ.

ಎಂ.ಬಿ. ಪಾಟೀಲ್ ಪರ ಲಾಬಿ ಮಾಡುವ ಸಲುವಾಗಿ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿ ತಲುಪಿದ್ದರು. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಈ ಕುರಿತು ಸಾಕಷ್ಟ ಚರ್ಚೆ ನಡೆಸಿದ್ದರು. ಆದರೆ, ಡಿ.ಕೆ. ಶಿವಕುಮಾರ್ ಮಾತ್ರ ಬೆಂಗಳೂರು ಬಿಟ್ಟು ಕದಲಿರಲಿಲ್ಲ. ತನಗೆ ಅಧ್ಯಕ್ಷ ಗಾದಿ ನೀಡುವಂತೆ ಯಾರ ಮೇಲೂ ಒತ್ತಡ ಹೇರುವ ಹಾಗೂ ಲಾಬಿ ಮಾಡುವ ಕೆಲಸಕ್ಕೆ ಮುಂದಾಗಿರಲಿಲ್ಲ. ತನಗೆ ಆ ಸ್ಥಾನ ಸಿಗುತ್ತದೆ ಎಂಬ ಅಪಾರ ನಂಬಿಕೆ ಅವರಲ್ಲಿತ್ತು.

ಅವರ ನಂಬಿಕೆಗೆ ಪೂರಕವಾಗಿ ಹೈಕಮಾಂಡ್ ಇದೀಗ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮೂಲಗಳ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕುಗ್ಗಿರುವ ಕಾಂಗ್ರೆಸ್ ವರ್ಚಸ್ಸನ್ನು ಮತ್ತೆ ಮುನ್ನಲೆಗೆ ತರಲು ಪಕ್ಷವನ್ನು ತಳ ಮಟ್ಟದಿಂದ ಸಧೃಡಗೊಳಿಸಲು ಡಿಕೆಶಿ ಉತ್ತಮ ಆಯ್ಕೆ ಎಂಬುದು ಹೈಕಮಾಂಡ್ ನಿಲುವು ಎನ್ನಲಾಗುತ್ತಿದೆ. ಅಲ್ಲಿಗೆ ಒಂದು ಹಂತದಲ್ಲಿ ಸಿದ್ದರಾಮಯ್ಯನವರಿಗೆ ಸೋಲಾಗಿರುವುದು ಖಚಿತ.

ಇದನ್ನೂ ಓದಿ : ಮಂಗಳೂರು ಬಾಂಬ್ ಪತ್ತೆ, ಸ್ಪೋಟ ಒಂದು ಅಣಕು ಪ್ರದರ್ಶನ; ಇದು RSS​ ಸರ್ಕಾರವಲ್ಲ ಜನರ ಸರ್ಕಾರ; ಎಚ್ಡಿಕೆ
First published: