ಬಿಜೆಪಿ ತಂತ್ರಕ್ಕೆ 'ಆಪರೇಷನ್ ಹಸ್ತ' ಪ್ರತಿತಂತ್ರ ಹೂಡಿದ ಕಾಂಗ್ರೆಸ್​ ಹೈಕಮಾಂಡ್?

news18
Updated:September 12, 2018, 9:13 AM IST
ಬಿಜೆಪಿ ತಂತ್ರಕ್ಕೆ 'ಆಪರೇಷನ್ ಹಸ್ತ' ಪ್ರತಿತಂತ್ರ ಹೂಡಿದ ಕಾಂಗ್ರೆಸ್​ ಹೈಕಮಾಂಡ್?
news18
Updated: September 12, 2018, 9:13 AM IST
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.12): ರಾಜ್ಯ ರಾಜಕೀಯ ಮೇಲಾಟ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್​ನ ಅಸಮಾಧಾನಿತ ನಾಯಕರನ್ನು ಸೆಳೆದುಕೊಳ್ಳಲು 'ಆಪರೇಷನ್ ಕಮಲ'ಕ್ಕೆ ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಕೂಡ ಬಿಜೆಪಿ ಅಸಮಾಧಾನಿತ ಶಾಸಕರನ್ನು ಸೆಳೆಯಲು 'ಆಪರೇಷನ್ ಹಸ್ತ'ಕ್ಕೆ ಹಸಿರು ನಿಶಾನೆ ತೋರಿದೆ ಎನ್ನಲಾಗಿದೆ.

ಜಾರಕಿಹೊಳಿ ಸಹೋದರರು ಬಿಗಿಪಟ್ಟು ಸಡಿಲಿಸಿದ್ದರೂ ಅಸಮಾಧಾನ ಪೂರ್ಣ ಶಮನವಾಗೊಂಡಿಲ್ಲ ಎಂಬುದು ಅವರ ಹೇಳಿಕೆಗಳಿಂದಲೇ ತಿಳಿಯುತ್ತದೆ. "ನಾನು ಪಕ್ಷ ಬಿಟ್ಟು ಹೋಗುವುದಿಲ್ಲ, ಆದರೆ, ಬೇರೆಯವರಿಂದ ಏನೂ ಬೇಕಾದರೂ ಆಗಬಹುದು," ಎಂದು ಸತೀಶ್ ಜಾರಕಿಹೊಳಿ ಹೇಳಿದರೆ, ತಮ್ಮ ರಮೇಶ್​ ಜಾರಕಿಹೊಳಿ, "ಕೋಪ ಇನ್ನು ಆರಿಲ್ಲ," ಎಂಬ ಹೇಳಿಕೆ ನೀಡುವ ಮೂಲಕ ತಮ್ಮ ನಡೆಯ ನಿಗೂಢತೆಯನ್ನು ಕಾಯ್ದಿರಿಸಿಕೊಂಡಿದ್ದಾರೆ.

ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಆದಿಯಾಗಿ ಹೈಕಮಾಂಡ್ ಕೂಡ ಭಾಗಿಯಾಗಿ ಜಾರಕಿಹೊಳಿ ಸಹೋದರರ ಮನವೊಲಿಸುವ ಪ್ರಯತ್ನ ಮಾಡಿದೆ. ಆದರೆ, ಮೇಲ್ನೋಟಕ್ಕೆ ಭಿನ್ನಮತ ಶಮನಗೊಂಡಿದೆ ಎಂಬಂತೆ ತೋರಿಸಿಕೊಳ್ಳುವ ಜಾರಕಿಹೊಳಿ ಬ್ರದರ್ಸ್ ನಡುವೆ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತೆ ಇದೆ.

ಕೈ ಅಸಮಾಧಾನಿಕ ಶಾಸಕರನ್ನು ಬಿಜೆಪಿಗೆ ಸೆಳೆದುಕೊಳ್ಳಲು ಪಕ್ಷದ ವರಿಷ್ಠರು ಆಪರೇಷನ್ ಕಮಲ ನಡೆಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಆ ಹಿನ್ನೆಲೆಯಲ್ಲಿಯೇ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಆಪ್ತರೊಂದಿಗೆ ಮುಂದಿನ ನಡೆ ಕುರಿತು ಚರ್ಚೆ ನಡೆಸಿದ್ದಾರೆ. ಇನ್ನು ರಮೇಶ್​ ಜಾರಕಿಹೊಳಿ ಜೊತೆಗೆ ಡಿಸಿಎಂ ಪರಮೇಶ್ವರ್​ ಸಂಧಾನ ಸಭೆ ನಡೆಸಿ, ಪರಿಸ್ಥಿತಿಯನ್ನು ತಹಬದಿಗೆ ತರಲು ಸ್ವಲ್ಪಮಟ್ಟಿನ ಯಶಸ್ವಿ ಕಂಡರು, ಅದು ಸಂಪೂರ್ಣವಾಗಿ ಅಲ್ಲ ಎಂಬುದು ಗುಟ್ಟೇನಲ್ಲ.

ಸದ್ಯದ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯಲು ಮುಂದಾಗಿರುವ ಜಾರಕಿಹೊಳಿ ಸಹೋದರರು ಯಾವ ಕ್ಷಣದಲ್ಲಿ ಬೇಕಾದರೂ ಪಕ್ಷ ಬಿಟ್ಟರೂ ಬಿಡಬಹುದು ಎಂಬುದನ್ನು ಅರಿತಿರುವ ಕಾಂಗ್ರೆಸ್ ಹೈಕಮಾಂಡ್, ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳಲು ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಬಿಜೆಪಿಯಲ್ಲಿರುವ ಅಸಮಾಧಾನಿಕ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ಆಸೆ ಹುಟ್ಟಿಸಿ, ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳುವಂತೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: ಬಿಜೆಪಿಯ10 ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ - ಸರ್ಕಾರ ಉಳಿಸಿಕೊಳ್ಳೋದು ಗೊತ್ತು ; ಪ್ರಿಯಾಂಕ್ ಖರ್ಗೆ
Loading...

ಪಕ್ಷ ನಿಷ್ಠೆ, ಹೈಕಮಾಂಡ್​ ಮಾತು ಕೇಳುವವ ಸಚಿವರನ್ನು ಸಂಪುಟದಿಂದ ತೆಗೆದು, ಬಿಜೆಪಿಯಿಂದ ಬರುವ ಶಾಸಕರಿಗೆ ಮಂತ್ರಿ ಸ್ಥಾನ ನೀಡುವಂತೆ ಹೈಕಮಾಂಡ್​ ಸೂಚಿಸಿದೆ ಎನ್ನಲಾಗಿದೆ.

ಇದೇ ವಿಚಾರವಾಗಿ ಮಂಗಳವಾರ ಮಾತನಾಡಿರುವ ಸಚಿವ ಡಿಕೆಶಿ, ರಾಜಕೀಯ ಚದುರಂಗದಲ್ಲಿ ಎಲ್ಲವೂ ಸಾಧ್ಯವಿದೆ. ಅವರು ಪಾನ್​ ಮೂವ್ ಮಾಡಿದರೆ, ನಮಗೆ ನಮ್ಮ ಪಾನ್​ ಹೇಗೆ ಮೂವ್ ಮಾಡಬೇಕು ಎಂಬುದು ಗೊತ್ತು ಎಂದು ಹೇಳುವ ಮೂಲಕ ಬಿಜೆಪಿಗೆ ಟಾಂಗ್​ ನೀಡಿದ್ದಾರೆ. ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಯವರು ನಮ್ಮ ಶಾಸಕರಿಗೆ ಗಾಳ ಹಾಕಿದರೆ, ನಾವು ಬಿಜೆಪಿಯಿಂದ ಐವರು ಶಾಸಕರನ್ನು ಕರೆತರುತ್ತೇವೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ರಾಜ್ಯ ರಾಜಕೀಯ ಇನ್ನು ಕೆಲವೇ ದಿನಗಳಲ್ಲಿ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿದ್ದು, ಯಾರು ಯಾವ ಪಕ್ಷ ಸೇರುತ್ತಾರೆ, ಮೈತ್ರಿ ಸರ್ಕಾರದ ಭವಿಷ್ಯ ಏನು ಎಂಬ ಕುತೂಹಲಕ್ಕೆ ತೆರೆಬೀಳಲಿದೆ.

 
First published:September 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ