ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡರ ಸೋಲಿನ ರಹಸ್ಯ ಬಿಚ್ಚಿಟ್ಟ ಮಾಜಿ ಶಾಸಕ ಕೆ.ಎನ್ ರಾಜಣ್ಣ

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು ಕಾಂಗ್ರೆಸ್‍ನಿಂದಲೇ, ಅವರು ಕಾಂಗ್ರೆಸನ್ನೇ ಮುಗಿಸ್ತೀನಿ ಅಂತಾ ಹೋಗ್ತಾರೆ. ಇದು ಒಬ್ಬೊಬ್ಬರ ಜಾಯಮಾನ, ನಡವಳಿಕೆ ಅಂತ ನಾವೆಲ್ಲಾ ಗುರುತಿಸಿಕೊಳ್ಳಬೇಕು ಎಂದರು ಮಾಜಿ ಶಾಸಕ ಕೆ.ಎನ್ ರಾಜಣ್ಣ.

ಮಾಜಿ ಶಾಸಕ ಕೆ.ಎನ್.ರಾಜಣ್ಣ

ಮಾಜಿ ಶಾಸಕ ಕೆ.ಎನ್.ರಾಜಣ್ಣ

  • Share this:
ತುಮಕೂರು(ಸೆ.04): ಇಡೀ ಜಿಲ್ಲೆಯಲ್ಲಿ ನನ್ನನ್ನು ಉದಾಸೀನ ಮಾಡಿ ಯಾರಾದ್ರೂ ಗೆಲ್ತೀನಿ ಅಂತ ಹೇಳಿ ನೋಡ್ತೀನಿ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಸವಾಲ್ ಎಸೆದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್​​​ ರಾಜಣ್ಣ, ಇಡೀ ಜಿಲ್ಲೆಯಲ್ಲಿ ನನಗೆ ಶಿರಾದಲ್ಲೇ ಹೆಚ್ಚು ಜನಪ್ರಿಯತೆ ಇರೋದು. ಜಯಚಂದ್ರ ನನ್ನ ಮಗನ ಚುನಾವಣೆಯಲ್ಲಿ ವಿರುದ್ದ ಕೆಲಸ ಮಾಡಿ ಅವನ ಸೋಲಿಗೆ ಕಾರಣ ಆದ. ಶಿರಾದಲ್ಲಿ ಇವನು ಗೆದ್ದರೇ ಅರ್ಧ ಮೀಸೆ ತೆಗೀತೀನಿ ಅಂತಾ ಅವತ್ತೇ ಹೇಳಿದ್ದೆ ಎಂದು ಏಕವಚನದಲ್ಲೇ ಜಯಚಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಅಷ್ಟು ಧೈರ್ಯವಾಗಿ ಹೇಳಬೇಕು ಅಂದ್ರೆ ಅಲ್ಲಿನ ಜನರ ಪ್ರೀತಿ, ವಿಶ್ವಾಸ ನನ್ನ ಮೇಲಿತ್ತು. ಅದಕ್ಕೆ ಅವತ್ತು ಚಾಲೆಂಜ್ ಮಾಡಿದ್ದು ಬಿಟ್ರೆ ಸುಮ್ ಸುಮ್ನೆ ಹಾಗೇ ಹೇಳೋಕೆ ನನಗೆ ಶಕ್ತಿ ಇಲ್ಲ. ಶಿರಾಗೆ ಸಂಬಂಧಿಸಿದಂತೆ ಗೆಲ್ಲಿಸೋ, ಸೋಲಿಸೋ ಶಕ್ತಿ ನನ್ನಲ್ಲಿದೆ ಎಂದರು.

ಅಂದು ಜಯಚಂದ್ರ ಮಂತ್ರಿ, ನಾನು ಶಾಸಕ. ಆದ್ರೂ ನಾನು ಚಾಲೆಂಜ್ ಮಾಡಿದ್ದೆ. ಇನ್ನೂ ಉಪಚುನಾವಣೆ ನವೆಂಬರ್, ಡಿಸೆಂಬರ್‌ನಲ್ಲಿ ನಡೆಯಬಹುದು. ಅಷ್ಟರಲ್ಲಿ ರಾಜಕೀಯವಾಗಿ ಬಹಳಷ್ಟು ಬೆಳವಣಿಗೆ ಆಗುತ್ತವೆ ಅಂದುಕೊಂಡದ್ದೇವೆ. ಅವರು ಮಾಜಿ ಮಂತ್ರಿ, ಮುಂದೆ ಮುಖ್ಯಮಂತ್ರಿ ಆಗೋ ಕ್ಯಾಂಡಿಡೇಟ್. ಅವರು ಗೆಲ್ಲೋಕೆ ಆಗಲ್ಲ ಅಂದ್ರೇ ಏನ್ ಅರ್ಥ. ನನ್ನಂತ ನೂರು ಜನ ವಿರೋಧ ಮಾಡಿದ್ರು ಗೆಲ್ತಾರೆ ಎಂದು ಕೆ.ಎನ್​​ ರಾಜಣ್ಣ ಮಾರ್ಮಿಕವಾಗಿ ನುಡಿದರು.

ರಾಜಕಾರಣದಲ್ಲಿ ಇವತ್ತು ಇದ್ದಿದ್ದು ನಾಳೆ ಇರಲ್ಲ. ಗೆಲ್ಲೋವಾಗ ಎಲ್ಲಾ ನನ್ನ ಬಳಸಿಕೊಳ್ತಾರೆ, ನಮಗ್ಯಾರು ಸಹಾಯ ಮಾಡಲ್ಲ. ಅದು ಈ ಜಿಲ್ಲೆಯ ದುರಂತ ಎಂದರು.

ತುಮಕೂರಲ್ಲಿ ದೇವೇಗೌಡರ ಮಯ ಮಾಡೋಕೆ ಹೋದ್ವಿ. ಆದ್ರೆ ಅವರೇ ಮಾಯಾ ಆಗೋದ್ರು. ನಾವೇನು ಮಾಡೋಣ, ನಮ್ಮಪ್ಪ ಹೆಬ್ಬೆಟ್ಟು, ನಮ್ಮಮ್ಮ ಹೆಬ್ಬೆಟ್ಟು, ಅಂತದ್ರಲ್ಲಿ ನಮಗೆ ವಿದ್ಯೆ ಕೊಟ್ರು. ಇವತ್ತು ನಾನು ಕೋ ಆಪರೇಟೀವ್ ಮೂಲಕ ಬಡವರಿಗೆ, ರೈತರಿಗೆ ಸಹಾಯ ಮಾಡಿ ಅವರ ಆಶೀರ್ವಾದದಿಂದ ಬೆಳೆದಿದ್ದೇನೆ ಎಂದರು.

ಇಡೀ ಜಿಲ್ಲೆಯಲ್ಲಿ ರಾಜಣ್ಣನನ್ನ ಉದಾಸೀನ ಮಾಡಿ ಯಾವಾನಾದ್ರು ಗೆಲ್ತೀನಿ ಅನ್ನಲಿ ನೋಡ್ತೀನಿ. ಆ ರೀತಿಯ ಶಕ್ತಿ ಇದೆ ಅಂದ್ರೆ ಅದು ಬಡವರ ಶಕ್ತಿ ಎಂದು ರಾಜಣ್ಣ ತಿಳಿಸಿದರು.

ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಾರ್ಟಿ. ಒಂದು ಕಾಲದಲ್ಲಿ ಬಂದು ಬೂತ್‍ಗೆ ಪೂಜೆ ಮಾಡಿ ಕಾಂಗ್ರೆಸ್‍ಗೆ ಓಟ್ ಹಾಕುತ್ತಿದ್ದವರನ್ನು ನೋಡಿದ್ದೀವಿ. ಇವತ್ತು ಕಾಂಗ್ರೆಸ್ ಅಂದ್ರೆ ಬಯ್ಯೋರು, ಟೀಕೆ ಮಾಡೋರು ಇದ್ದರೆ. ಇನ್ನೂ ಕೆಲವರು ಪಕ್ಷದಲ್ಲಿ ಬಹಳ ನಿಷ್ಠಾವಂತರು, ದೇಶಕ್ಕೆ ತ್ಯಾಗ ಮಾಡಿದವರಿದ್ದಾರೆ. ನೆಹರು ಫ್ಯಾಮಿಲಿಯವರು ಅಲಹಬಾದ್‍ನ ಆನಂದ್ ಭವನವನ್ನ ಪಕ್ಷಕ್ಕಾಗಿ ಬರೆದುಕೊಟ್ಟು ಹೋದರು. ಇವತ್ತು ದೇಶ ಒಗ್ಗಟ್ಟಾಗಿರಬೇಕಂದ್ರೆ ಕಾಂಗ್ರೆಸ್ ಪಾರ್ಟಿ ಬೇಕೇ ಬೇಕು. ಕಾಂಗ್ರೆಸ್ ಪಾರ್ಟಿ ಒಗ್ಗಟ್ಟಾಗಿ ಇರಬೇಕು ಅಂದ್ರೆ ನೆಹರು ಕುಟುಂಬ ಇರಬೇಕು, ದೇವೇಗೌಡರು ಪ್ರಧಾನಿ ಆಗಿದ್ದು ಕಾಂಗ್ರೆಸ್ ಪಾರ್ಟಿಯಿಂದಲೇ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು ಕಾಂಗ್ರೆಸ್‍ನಿಂದಲೇ, ಅವರು ಕಾಂಗ್ರೆಸನ್ನೇ ಮುಗಿಸ್ತೀನಿ ಅಂತಾ ಹೋಗ್ತಾರೆ. ಇದು ಒಬ್ಬೊಬ್ಬರ ಜಾಯಮಾನ, ನಡವಳಿಕೆ ಅಂತ ನಾವೆಲ್ಲಾ ಗುರುತಿಸಿಕೊಳ್ಳಬೇಕು ಎಂದರು.

ಮೈತ್ರಿ ಸರ್ಕಾರ ಬೀಳಿಸೋಕೆ ಡ್ರಗ್ಸ್ ಹಣ ಬಳಕೆ ಆಗಿದೆ ಅನ್ನೋ ಹೆಚ್‍ಡಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ಬೀಳಿಸೋಕೆ ಅವರು ಮಾಡವ್ರೇ. ಉಳಿಸೋಕೆ ಇವರು ಎಷ್ಟು ಮಾಡವ್ರೇ. ಇವರೇನು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳಾ? ಇವತ್ತಿನ ದೃಷ್ಟಿಯಲ್ಲಿ ಲಂಚ ಅನ್ನೋದನ್ನ ಯಾರೂ ಚರ್ಚೇನೆ ಮಾಡಬಾರದು. ಚರ್ಚೆ ಮಾಡಿದರೆ ಅವನು ಅಯೋಗ್ಯ, ಲಂಚ ಇಲ್ದೇ ಇರೋರು ಯಾರಿದ್ದಾರೆ ತೋರಿಸಿ ನೋಡೋಣ. ಸ್ವಾಮೀಜಿಗಳಿಗೆ ಕಾಣಿಕೆ, ದಕ್ಷಿಣೆ ಅಂತೀವಿ, ಲಾಯರ್​​ಗಳಿಗೆ ಫೀಸು ಅಂತೀವಿ, ಅಧಿಕಾರಿಗಳಿಗೆ ಕೊಟ್ರೆ ಲಂಚ ಅಂತೀವಿ, ರಾಜಕಾರಣಿಗಳಿಗೆ ಕೊಟ್ರೆ ಲಂಚ ಅಂತೀವಿ, ಡ್ರಗ್ಸ್ ದುಡ್ಡಲ್ಲಿ ಸರ್ಕಾರ ಕೆಡವಿದರು ಅಂದ್ರೆ ಅದೇ ತರಹದ ದುಡ್ಡಲ್ಲಿ ಇವರು ಸರ್ಕಾರ ಉಳಿಸಿಕೊಳ್ಳೋಕೆ ಯಾರಿಗೂ ದುಡ್ಡು ಕೊಟ್ಟೆ ಇಲ್ವಾ? ಯಾರಿಗೇನು ಆಸೆ ಆಮಿಷ ತೋರಿಸೇ ಇಲ್ವಾ ಎಂದು ರಾಜಣ್ಣ ಪ್ರಶ್ನಿಸಿದರು.

ಇನ್ನೂ ಶಿರಾ ಬೈ ಎಲೆಕ್ಷನ್ ಬಗ್ಗೆ ಮಾತನಾಡಿದ ರಾಜಣ್ಣ ಪಕ್ಷ ಟಿಕೆಟ್ ಕೊಟ್ರೆ ಸ್ಪರ್ಧಿಸುವೆ. ಶಿರಾ ಉಪಚುನಾವಣೆಯಲ್ಲಿ ನಾನು ನಿಲ್ಲಬೇಕು ಅನ್ನೋ ಅಪೇಕ್ಷೆ ಇದೆ. ಬಿಜೆಪಿಯಿಂದ ನಿಲ್ಲಲ್ಲ, ಕಾಂಗ್ರೆಸ್‍ನಿಂದಲೇ ಟಿಕೆಟ್ ಕೇಳ್ತೇನೆ. ಕಾಂಗ್ರೆಸ್‍ನಲ್ಲಿದ್ದು ಬಿಜೆಪಿಯಿಂದ ನಿಲ್ತೀನಿ ಅಂತಾ ಹೇಳೋಕಾಗಲ್ಲ. ಅಂತಿಮವಾಗಿ ಸಿದ್ದರಾಮಯ್ಯ ಅವರು ಏನ್ ಹೇಳುತ್ತಾರೋ ಹಾಗೆ ಮಾಡ್ತೀನಿ. ಸಿದ್ದರಾಮಯ್ಯನವರಿಗೆ ವಾಸ್ತವಾಂಶ ಏನಿದೆ ಅನ್ನೋದು ಮನದಟ್ಟು ಮಾಡಿದ್ದೇನೆ. ಶಿರಾದಲ್ಲಿ ಸ್ವಾಭಿಮಾನಿ ವೇದಿಕೆ ಅಂತ ಪ್ರಾರಂಭಿಸಿ ಸಭೆ ಮಾಡ್ತಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಸೇರಿ ಬಹಳಷ್ಟು ಮಂದಿಯನ್ನ ಕರೆಯುತ್ತಾರೆ. ಆ ಸಭೆಗೆ ನಾನೂ ಕೂಡ ಅತಿಥಿಯಾಗಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.

ಸಭೆಯಲ್ಲಿ ಅಲ್ಲಿನ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸಭೆ ಬಳಿಕ ಮುಂದಿನ ನಡವಳಿಕೆಗಳು ನಡೆಯುತ್ತವೆ. ಪಕ್ಷದಿಂದ ನಿಲ್ಲು ಎಂದರೆ ನಾನು ಚುನಾವಣೆಯಲ್ಲಿ ನಿಲ್ತೀನಿ. ಜಯಚಂದ್ರ ಎರಡು ಬಾರಿ ಎಂಎಲ್‍ಎ ಆಗಿದ್ರು. ಮಂತ್ರಿ ಆಗಿದ್ರು. ಕೆಲ್ಸ ಮಾಡಿದ್ದಾರೆ. ಹಾಗಾಗಿ ಪಕ್ಷ ನನಗೆ ಟಿಕೆಟ್ ಕೊಡುತ್ತೇ ಅಂತಾ ಓಡಾಡ್ತಿದ್ದಾರೆ. ಅದರಲ್ಲಿ ತಪ್ಪೇನಿದೆ. ಶಿರಾದಲ್ಲಿ 1978 ರಿಂದ ಅಹಿಂದ ಸಂಘಟನೆ ಸ್ಟ್ರಾಂಗ್ ಆಗಿದೆ. ಹಾಗಾಗಿ ಸಭೆಗೆ ಬಂದ ಮುಖಂಡರು ತಮ್ಮ ಕ್ಷೇತ್ರಕ್ಕೆ ಏನ್ ಬೇಕು ಏನ್ ಬೇಡ ಎಂಬ ಅಭಿಪ್ರಾಯ ತಿಳಿಸುತ್ತಾರೆ. ಅವರ ಅಭಿಪ್ರಾಯದಂತೆ ಮುಂದಿನ ಹೆಜ್ಜೆ ಇಡ್ತೀವಿ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ವೈಫಲ್ಯವನ್ನು ಮುಚ್ಚಿಹಾಕಲು ಯಡಿಯೂರಪ್ಪ ರಾಜ್ಯದ ಹಿತ ಬಲಿಕೊಡುತ್ತಿದ್ದಾರೆ; ಸಿದ್ದರಾಮಯ್ಯ ಕಿಡಿ

ದೇವೇಗೌಡರು ನಮ್ಮ ಮನೆ ಪಕ್ಕದಲ್ಲೇ ಹೋಗ್ತಾರೆ, ನಾನು ಮನೆಯಲ್ಲೇ  ಇರ್ತಿದ್ದೆ. ಬಾರಯ್ಯ ಅಂತಾ ಕೂಗಿದ್ರೆ ನಾನು ಪ್ರಚಾರ ಮಾಡುತ್ತಿರಲಿಲ್ವ. ನನಗು ಒಂದು ಬಾರಿ ದೇವೇಗೌಡರು ಎಂಎಲ್‍ಎ ಮಾಡಿದ್ದಾರೆ. ಅವರ ಋಣ ನನ್ನ ಮೇಲಿದೆ. ನನ್ನ ಪರಿಗಣನೆ ಮಾಡದಹಾಗೆ ಓಡಾಡಿದರು ಯಾರದೋ ಮಾತು ಕೇಳಿಕೊಂಡು ಬರಲೇ ಇಲ್ಲ. ಅಂತಹವರಿಗೆ ಓಟ್ ಹಾಕ್ಸೋದು ಏನ್ ಇತ್ತು ನನಗೆ. ನನ್ನಿಂದ ಅವರಿಗೆ ಏನು ಸಹಾಯ ಆಗಿಲ್ಲ. ಅವರ ನಡವಳಿಕೆಯಿಂದ ನಾನು ಸಹಾಯ ಮಾಡಿಲ್ಲ. ಜಿ.ಎಸ್ ಬಸವರಾಜು ದಿನ ನಮ್ಮ ಮನೆಗೆ ಬಂದು ಕುಳಿತುಕೊಳ್ಳೋರು. ಇನ್ನು ಈಗಲೇ ಏನು ಮಾತು ಕೊಡಲ್ಲ ಅಂತಾ ಹೇಳಿ ವಾಪಸ್ ಕಳಿಸಿದ್ದೆ. ಯಾವಾಗ ದೇವೇಗೌಡ್ರು ಇಲ್ಲೇ ಓಡಾಡಿ ನಮ್ಮ ಮನೆಗೆ ಬರದೇ ಹೋದರೋ ಆಗ ಇವರಿಗೆ ಏನಾದ್ರು ಮಾಡಿ ಬುದ್ಧಿ ಕಲಿಸಬೇಕು ಅಂತ ನಮ್ಮದೇ ತೀರ್ಮಾನ ಮಾಡಬೇಕಾಯಿತು ಎಂದು ದೇವೇಗೌಡರ ಸೋಲಿನ ಹಿಂದಿನ ರಹಸ್ಯ ಬಿಚ್ಚಿಟ್ಟರು.
Published by:Ganesh Nachikethu
First published: