ತಾಕತ್ತಿದ್ರೆ ಒಬ್ಬೇ ಒಬ್ಬ ಕಾಂಗ್ರೆಸ್ ಶಾಸಕನನ್ನು ಮುಟ್ಟಿ; ಬಿಎಸ್​ವೈಗೆ ಗುಂಡೂರಾವ್​ ಸವಾಲು

ಒಂದೆಡೆ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರ ಮೇಲೆ ಕಣ್ಣಿಟ್ಟಿದೆ ಎಂಬ ಆರೋಪಗಳಿವೆ. ಮತ್ತೊಂದೆಡೆ ನಮ್ಮ ಶಾಸಕರನ್ನು ಕೊಂಡುಕೊಳ್ಳಲು ಬಿಜೆಪಿ ವಾಮಮಾರ್ಗ ಹಿಡಿದಿದೆ ಎಂದು ಐಟಿ ಇಲಾಖೆಗೆ ಕಾಂಗ್ರೆಸ್​ ದೂರು ನೀಡಿದೆ.

Sharath Sharma Kalagaru | news18
Updated:September 14, 2018, 7:09 PM IST
ತಾಕತ್ತಿದ್ರೆ ಒಬ್ಬೇ ಒಬ್ಬ ಕಾಂಗ್ರೆಸ್ ಶಾಸಕನನ್ನು ಮುಟ್ಟಿ; ಬಿಎಸ್​ವೈಗೆ ಗುಂಡೂರಾವ್​ ಸವಾಲು
ದಿನೇಶ್ ಗುಂಡೂರಾವ್
Sharath Sharma Kalagaru | news18
Updated: September 14, 2018, 7:09 PM IST
ಬೆಂಗಳೂರು: ಕಾಂಗ್ರೆಸ್​ ಮತ್ತು ಜೆಡಿಎಸ್​ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ವಾಮಮಾರ್ಗವನ್ನು ಹಿಡಿದಿದೆ ಎಂದು ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗಿದೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಅಸಂವಿಧಾನಿಕ ಸೂತ್ರಗಳನ್ನು ಅನುಸರಿಸುತ್ತಿದೆ, ಶಾಸಕರಿಗೆ ಕೋಟ್ಯಂತರ ರೂಪಾಯಿಗಳ ಆಮಿಶವನ್ನು ಒಡ್ಡುತ್ತಿದೆ ಎಂಬುದಾಗಿ ಕಾಂಗ್ರೆಸ್​ ನಿಯೋಗ ಇಲಾಖೆಗೆ ನೀಡಿದ ದೂರಿನಲ್ಲಿ ಹೇಳಿದೆ.

ದೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ, ಶಾಸಕ ಡಾ. ಅಶ್ವತ್​ನಾರಾಯಣ್​, ಮಾಜಿ ಶಾಸಕ ಸಿ.ಪಿ. ಯೋಗೀಶ್ವರ್​ ಸೇರದಿಂತೆ ಹಲವರನ್ನು ಹೆಸರಿಸಲಾಗಿದೆ. ಕಾಂಗ್ರೆಸ್​ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ನೇತೃತ್ವದ ನಿಯೋಗ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಿ ದೂರು ನೀಡಿದೆ.

ದೂರಿನ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್​ ರಾಜ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯವರು ಅಧಿಕಾರದ ದಾಹ ಎಷ್ಟರ ಮಟ್ಟಿಗೆ ಏರಿದೆ ಅಂದರೆ ಸರ್ಕಾರ ಬೀಳಿಸಲು ಅನೈತಿಕ ಚಟುವಟಿಕೆಗಳಿಗೆ ಇಳಿದಿದ್ದಾರೆ, ಎಂದು ಆರೋಪಿಸಿದರು.

ಯಾರು ಕಿಂಗ್​ಪಿನ್​?:

ಪ್ರಭಾಕರ್​ ಕೋರೆ ಹಾಗೂ ಬಿ.ಎಸ್​. ಯಡಿಯೂರಪ್ಪ ಅವರೇ ಸರ್ಕಾರ ಬೀಳಿಸುವ ಹುನ್ನಾರದ ಹಿಂದಿರುವ ಕಿಂಗ್​ಪಿನ್​ಗಳು ಎಂದು ದಿನೇಶ್​ ಗುಂಡೂರಾವ್​ ಆರೋಪಿಸಿದ್ದಾರೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಯವರು ಸರ್ಕಾರವನ್ನು ಬೀಳಿಸಲು ಅಂಡರ್​ ವಲ್ಡ್​ನ ಕಿಂಗ್​​ಪಿನ್​ಗಳು ಯತ್ನಿಸುತ್ತಿದ್ದಾರೆ. ಅವರ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದು ತಿಳಿಸಿದ್ದರು. ಇದೀಗ ದಿನೇಶ್​ ಗುಂಡೂರಾವ್ ಪ್ರಭಾಕರ್​ ಕೋರೆ ಹಾಗೂ ಬಿಎಸ್​ವೈ ಅವರೇ ಕಿಂಗ್​ಪಿನ್​ ಎನ್ನುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಂಡೂರಾವ್​, ಚುನಾವಣೆಯಲ್ಲಿ ಬಹುಮತ ಇಲ್ಲದೆ ಇದ್ದರೂ ಸರ್ಕಾರ ರಚನೆಗೆ ಮುಂದಾಗಿ ಕಡೆಗೆ ವಿಫಲವಾಗಿದ್ದರು. ಬಿಜೆಪಿ ಪ್ರಯತ್ನವನ್ನು ರಾಜ್ಯದ ಜನ ನೋಡಿದ್ದಾರೆ. ಈಗ ನಮ್ಮ ಸರ್ಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪ್ರಮುಖವಾಗಿ ಯಡಿಯೂರಪ್ಪ ಸೇರಿದಂತೆ ಅಶ್ವಥ್ ನಾರಯಣ್, ಸಿಪಿ ಯೋಗೇಶ್ವರ್, ಸತೀಶ್ ರಡ್ಡಿ ಸೇರಿದಂತೆ ಹಲವರಿಂದ ಪ್ರಯತ್ನ ನಡೆಯುತ್ತಿದೆ, ಎಂದು ಗುಂಡೂರಾವ್​ ವಾಗ್ದಾಳಿ ಮಾಡಿದರು.

ಮುಂದುವರೆದ ಅವರು, ಸರ್ಕಾರ ಬೀಳಿಸಲು ಬಿಜೆಪಿ ಮುಖಂಡರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಶಿವಳ್ಳಿ, ಅನಿಲ್ ಚಿಕ್ಕ ಮಾದು, ಬಿಸಿ ಪಾಟೀಲ್, ವಿ ಮುನಿಯಪ್ಪ, ಸೇರಿದಂತೆ ಹಲವರಿಗೆ ಆಮಿಷ ಒಡ್ಡಲಾಗುತ್ತಿದೆ. ಇಷ್ಟು ದುಡ್ಡು ತೆಗೆದುಕೊಳ್ಳಿ. ಮಿಕ್ಕಿದ್ದು ಆಮೇಲೆ ಕೊಡ್ತೇವೆ. ಎಂದು ನೂರಾರು ಕೋಟಿ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಈಗಲೂ ಕೂಡ ಬಿಜೆಪಿ ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ, ಎಂದರು.
Loading...

ಕೆಲ ಫೈನಾನ್ಸರ್ ರನ್ನು ಬಳಸಿಕೊಂಡು ಬಿಜೆಪಿ ಶಾಸಕರು ಹಣದ ಹೊಳೆ ಹರಿಸುತ್ತಿದ್ದಾರೆ.
ಹೀಗಾಗಿ ಇಂತಹ ಫೈನಾನ್ಸರ್ ಹಾಗೂ ಹಣದ ಆಮಿಷ ಒಡ್ಡುವ ಬಿಜೆಪಿ ಶಾಸಕರ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಐಟಿಗೆ ದೂರು ಕೊಟ್ಟಿದ್ದೇವೆ ಎಂದು ಗುಂಡೂರಾವ್​ ತಿಳಿಸಿದರು.

ಯಡಿಯೂರಪ್ಪಗೆ ಸವಾಲು:
ಒಬ್ಬ ಶಾಸಕರನ್ನ ರಾಜೀನಾಮೆ ಕೊಡಿಸಿ ನೋಡೋಣ, ಎಷ್ಟೇ ಸಾವಿರ ಕೋಟಿ ಕೊಟ್ಟರೂ ನಮ್ಮ ಶಾಸಕರು ಬರುವುದಿಲ್ಲ ಎಂದು ಗುಂಡೂರಾವ್​ ಬಿಎಸ್​ವೈಗೆ ಸವಾಲು ಹಾಕಿದ್ದಾರೆ. ಮತ್ತೆ ಯಡಿಯೂರಪ್ಪ ಅವರಿಗೆ ಮುಖಭಂಗವಾಗಲಿದೆ. ಬಿಜೆಪಿಯಲ್ಲೇ ಆಪರೇಷನ್ ಕಮಲದ ಬಗ್ಗೆ ಬೇಸರವಿದೆ. ಯಡಿಯೂರಪ್ಪ ಅಂಡ್ ಟೀಂ ಹೇಗಾದರೂ ಮಾಡಿ ಸರ್ಕಾರ ಬೀಳಿಸಲು ಮುಂದಾಗಿದೆ. ಈ ರೀತಿಯ ಕೀಳುಮಟ್ಟದ ರಾಜಕಾರಣ ಯಶಸ್ವಿಯಾಗುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಎಸಿಬಿಗೂ ದೂರು ನೀಡುವು ಚಿಂತನೆ: 

50 ಕೋಟಿ ರೂ., 100 ಕೋಟಿ ರೂ., ಸಣ್ಣ ಹಣವಲ್ಲ. ನಮಗೆ ಬಿಜೆಪಿ ಬಗ್ಗೆ ಯಾವುದೇ ಭಯವಿಲ್ಲ. ಯಡಿಯೂರಪ್ಪ ಮತ್ತು ಸಹಚರರ ಆಪರೇಷನ್ ಇದು. ಇದರ ಬಗ್ಗೆ ಬಿಜೆಪಿಯ ಕೆಲ ನಾಯಕರಿಗೇ ಅಸಮಾಧಾನ ಇದೆ. ಕೆಲ ಬಿಜೆಪಿ ನಾಯಕರು ನಮ್ಮ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ. ಯಡಿಯೂರಪ್ಪರ ಎಲ್ಲ ಪ್ರಯತ್ನಗಳು ಸಫಲವಾಗಲ್ಲ
ಕಾಂಗ್ರೆಸ್​ನ ಆಂತರಿಕ ಗೊಂದಲವನ್ನ ನಾವು ಬಗೆಹರಿಸಿಕೊಳ್ತೀವಿ. ಜಾರಕಿಹೊಳಿ ಬ್ರದರ್ಸ್ ಪಕ್ಷ ಬಿಡ್ತೀನಿ ಅಂತ ಎಲ್ಲೂ ಹೇಳಿಲ್ಲ. ಜತೆಗೆ ಎಸಿಬಿಗೆ ಈ ಸಂಬಂಧ ದೂರು ನೀಡುವ ಚಿಂತನೆ ನಡೆಯುತ್ತಿದೆ ಎಂದು ಗುಂಡೂರಾವ್​ ಹೇಳಿದ್ದಾರೆ.

ಬಿಜೆಪಿ ನಾಯಕರು ನಮ್ಮ ಶಾಸಕರ ಕುಟುಂಬಗಳನ್ನು ಸಂಪರ್ಕಿಸುತ್ತಿದ್ದಾರೆ. ಬಿಜೆಪಿ ನಡುವಳಿಕೆ ಹೇಸಿಗೆ ಹುಟ್ಟಿಸುವಂತಿದೆ. ದೊಡ್ಡ ಪ್ರಮಾಣದ ಕಪ್ಪು ಹಣದ ದಂಧೆಯನ್ನ ಬಿಜೆಪಿಯವರು ಮಾಡ್ತಿದ್ದಾರೆ ಎಂದಿರುವ ಗುಂಡೂರಾವ್​ ಸಕಲೇಶಪುರದ ಬಿಜೆಪಿ ಅಭ್ಯರ್ಥಿ ಮಲ್ಲೇಶ್ವರಂ ಶಾಸಕ ಅಶ್ವತ್ಥ್ ನಾರಾಯಣ್, ಶಾಸಕ ವಿಶ್ವನಾಥ್, ಮಾಜಿ ಶಾಸಕ ಸಿಪಿ ಯೋಗೇಶ್ವರ್ ನಮ್ಮ ಶಾಸಕರನ್ನ ಸಂಪರ್ಕಿಸಿದ್ದಾರೆ ಎಂದಿದ್ದಾರೆ. ವಿ. ಮುನಿಯಪ್ಪ ಅವರ ಮಗನ ಬಳಿಯೂ ಬಿಜೆಪಿ ನಾಯಕರು ಮಾತನಾಡಿದ್ದಾರೆ . ಈ ಬಗ್ಗೆ ತನಿಖೆ ನಡೆದರೆ ಎಲ್ಲವೂ ಹೊರಬರುತ್ತೆ ಎಂದು ಗುಂಡೂರಾವ್​ ತಿಳಿಸಿದರು.

ಎಸ್​.ಆರ್​. ವಿಶ್ವನಾಥ್​ ತಿರುಗೇಟು:

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಎಸ್​.ಆರ್​. ವಿಶ್ವನಾಥ್​, ಗುಂಡೂರಾವ್​ ಅವರು ಪೂರ್ವಾಗ್ರಹ ಪೀಡಿತರಾಗಿ ಮಾತನಾಡಿದ್ದಾರೆ ಎಂದಿದ್ದಾರೆ. ದಿನೇಶ್ ಗುಂಡೂರಾವ್​ಗೆ ಪೂರ್ವಾಗ್ರಹ ಇದ್ದಹಾಗಿದೆ
ನಾವು ಸರ್ಕಾರ ರಚಿಸುವ ಪ್ರಯತ್ನ ಮಾಡುತ್ತಿಲ್ಲ. ಅವರ ಹುಳುಕು ಮುಚ್ಚಿಟ್ಟುಕೊಳ್ಳಲು ಆಗದೆ ನಮ್ಮ ಹೆಸರು ಬಿಚ್ಚಿಟ್ಟಿದ್ದಾರೆ. ನಮ್ಮ ಬಗ್ಗೆ ಹುಡುಗುತನದಿಂದ ಮಾತನಾಡಬೇಡಿ.
ದಿನೇಶ್ ಗುಂಡೂರಾವ್​ಗೆ ಆತಂಕ ಶುರುವಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡ ರೀತಿ ಮಾತಾಡುತ್ತಿದ್ದಾರೆ, ಎಂದು ವಿಶ್ವನಾಥ್​ ಮೂದಲಿಸಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ವಿಶ್ವನಾಥ್​, ನಾನು ಅಮೇರಿಕಾಕ್ಕೆ ಹೋಗಿದ್ದೆ
ನಾನು ಬಂದಿದ್ದೆ ಮೊನ್ನೆಯಷ್ಟೇ. ಕಾಂಗ್ರೆಸ್​ ರಾಜ್ಯಾಧ್ಯಕ್ಷರಿಗೆ ಮಾಹಿತಿ ಕೊರತೆ ಇದೆ.
ನಾವು ಸಣ್ಣ ಸಣ್ಣ ಶಾಸಕರು, ನನ್ನ ಹೆಸರನ್ನ ದೊಡ್ಡ ಮಟ್ಟದಲ್ಲಿ ಹೇಳಿರೋದಕ್ಕೆ ಸಂತೋಷ ಆಗುತ್ತಿದೆ. ಎಲ್ಲರೂ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಮಾತಾಡ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ