news18-kannada Updated:July 2, 2020, 2:57 PM IST
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಬೆಂಗಳೂರು (ಜುಲೈ 02); ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನುಭವಿಸಲು ಜೆಡಿಎಸ್ ಜೊತೆಗಿನ ಮೈತ್ರಿಯೇ ಕಾರಣ. ಮೈತ್ರಿ ಬೇಡ ಅಂತ ಸಿದ್ದರಾಮಯ್ಯ ಸಹ ಹೇಳಿದ್ದರು. ಆದರೂ ನಾವು ಮೈತ್ರಿಯಿಂದ ಚುನಾವಣೆ ಎದುರಿಸಿದ್ದೆವು. ಆದರೆ, ಜನರಿಗೆ ಇದು ಇಷ್ಟವಾಗಲಿಲ್ಲ, ನಮ್ಮನ್ನು ಸೋಲಿಸಿದರು. ಈ ಕಾರಣಕ್ಕಾಗಿಯೇ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಡಿ.ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, "ನಾನು ಸಂಕಷ್ಟದ ಪರಿಸ್ಥಿತಿಯಲ್ಲಿ ಪಕ್ಷದ ಅಧ್ಯಕ್ಷನಾಗಿದ್ದೆ. ಅಧ್ಯಕ್ಷನಾಗಿದ್ದಾಗ ಎಲ್ಲರ ಜೊತೆ ಸೇರಿ ಪಕ್ಷದ ಸಂಘಟನೆ ಮಾಡಿದ್ದೆ. ನನ್ನ ಅವಧಿಯಲ್ಲಿ ಸಾಕಷ್ಟು ಏಳುಬಿಳುಗಳಾಗಿವೆ. ಕೆಲವು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರೆ, ಕೆಲವು ಚುನಾವಣೆಗಳಲ್ಲಿ ಸೋಲನುಭವಿಸಿದ್ದೇವೆ.
ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದಾಗಲೇ ಅದರ ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡಲು ಮುಂದಾಗಿದ್ದೆ. ಈ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಕೆಲಸ ಮಾಡಿರಲಿಲ್ಲ. ಜನರಿಗೆ ಈ ಮೈತ್ರಿ ಇಷ್ಟವಾಗಿರಲಿಲ್ಲ. ಸಿದ್ದರಾಮಯ್ಯ ಸಹ ರಾಜ್ಯದಲ್ಲಿ ಮೈತ್ರಿ ಬೇಡ ಎಂದಿದ್ದರು.
ಆದರೆ, ನಾವು ಮೈತ್ರಿಯ ಮೂಲಕವೇ ಚುನಾವಣೆ ಎದುರಿಸಿದ್ದು ಸೋಲಿಗೆ ಕಾರಣವಾಗಿತ್ತು. ಡಿ.ಕೆ. ಸುರೇಶ್ ಬಿಟ್ಟು ಎಲ್ಲರಿಗೂ ಸೋಲಾಗಿತ್ತು. ಹೀಗಾಗಿ ಭವಿಷ್ಯದಲ್ಲಿ ಕಾಂಗ್ರೆಸ್ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಬಾರದು" ಎಂದು ತಮ್ಮ ಅಧಿಕಾರವಧಿಯಲ್ಲಾದ ಪ್ರಮಾದವನ್ನು ನೆನೆದರು.
ಇದೇ ಸಂದರ್ಭದಲ್ಲಿ ಆಪರೇಷನ್ ಕಮಲದ ಕುರಿತು ಕಿಡಿಕಾರಿದ ಗುಂಡೂರಾವ್, "ಬಿಜೆಪಿ ನಾಯಕರ ಆಪರೇಷನ್ ಕಮಲಕ್ಕೆ ಮೈತ್ರಿ ಸರ್ಕಾರ ಬಲಿಯಾಯ್ತು. ನಮ್ಮ ಶಾಸಕರೇ ಪಕ್ಷಕ್ಕೆ ದ್ರೊಹ ಮಾಡಿ ಹೋದರು. ತದನಂತರ ನಡೆದ ಉಪ ಚುನಾವಣೆಯಲ್ಲೂ ನಾವು ಎರಡು ಕಡೆ ಮಾತ್ರ ಗೆಲುವು ಸಾಧಿಸಿದ್ದೆವು.
ಇದನ್ನೂ ಓದಿ : DK Shivakumar: ಬಿಜೆಪಿಯವರು ಎಷ್ಟು ಕೇಸಾದರೂ ಹಾಕಲಿ, ನಾನು ಬಗ್ಗೋ ಮಗನೇ ಅಲ್ಲ; ಡಿ.ಕೆ. ಶಿವಕುಮಾರ್ ಸವಾಲು
ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ನಾನು ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಪಕ್ಷ ಅಧಿಕಾರದಲ್ಲಿ ಇದ್ದರೆ ಮಾತ್ರ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಸಾಧ್ಯ. ಹೀಗಾಗಿ ಎಲ್ಲರೂ ಒಂದಾಗಿ ಮತ್ತೆ ಪಕ್ಷ ಕಟ್ಟಬೇಕು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲರೂ ಬಲ ತುಂಬಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.
First published:
July 2, 2020, 2:57 PM IST