ಎಚ್ ವಿಶ್ವನಾಥ್ ಹೇಳಿಕೆ: ಐಟಿ, ಇಡಿ ಸುಮೋಟೋ ಕೇಸ್ ದಾಖಲಿಸಲಿ, ನ್ಯಾಯಾಂಗ ತನಿಖೆ ಆಗಲಿ – ಕಾಂಗ್ರೆಸ್ ಆಗ್ರಹ
ಹುಣಸೂರು ಚುನಾವಣೆ ಖರ್ಚಿಗೆ ದೊಡ್ಡ ಮೊತ್ತದ ಹಣ ಬರಬೇಕಿತ್ತು ಎಂದು ಎಚ್ ವಿಶ್ವನಾಥ್ ನೀಡಿದ ಹೇಳಿಕೆಯ ಆಧಾರದ ಮೇಲೆ ಚುನಾವಣಾ ಭ್ರಷ್ಟಾಚಾರದ ನ್ಯಾಯಾಂಗ ತನಿಖೆ ಆಗಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಬೆಂಗಳೂರು(ಡಿ. 02): ಹುಣಸೂರು ಕ್ಷೇತ್ರದ ಪ್ರಚಾರ ವೆಚ್ಚಕ್ಕೆ ಕೊಡಲಾಗಿದ್ದ ದೊಡ್ಡ ಮೊತ್ತದ ಹಣ ಸಂದಾಯ ಆಗಲಿಲ್ಲ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ನಿನ್ನೆ ಮಾಡಿದ್ದ ಆರೋಪ ಈಗ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ದಾಳವಾಗಿ ಪರಿಣಮಿಸಿದೆ. ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಹಣದ ಹೊಳೆ ಹರಿಸುತ್ತದೆ ಎಂಬುದಕ್ಕೆ ವಿಶ್ವನಾಥ್ ಅವರ ಹೇಳಿಕೆಯೇ ಸಾಕ್ಷಿಯಾಗಿದೆ. ಅವರ ಹೇಳಿಕೆ ಆಧಾರದ ಮೇಲೆ ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆ ನಡೆಸಲಿ ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಇಂದು ವಿಶ್ವನಾಥ್ ಅವರ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರಾದ ಬಿ.ಎಲ್. ಶಂಕರ್, ವಿ.ಎಸ್. ಉಗ್ರಪ್ಪ ಮತ್ತು ಹೆಚ್ ಎಂ ರೇವಣ್ಣ ಅವರು ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಐಟಿ ಇಡಿ ಜೀವಂತವಾಗಿದ್ದರೆ ವಿಶ್ವನಾಥ್ ಹೇಳಿಕೆ ವಿಚಾರದಲ್ಲಿ ಸುಮೋಟೋ ಕೇಸ್ ದಾಖಲಿಸಿ ತನಿಖೆ ನಡೆಸಬೇಕು. ಮುಖ್ಯಮಂತ್ರಿಗಳು ಇದನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ಒತ್ತಾಯಿಸಿದರು.
ಎಚ್ ವಿಶ್ವನಾಥ್ ಅವರು ನಮಗೂ ಸ್ನೇಹಿತರೇ. ಅವರು ಒಂದೊಂದು ಸಾರಿ ಕಟು ಸತ್ಯ ಹೇಳುತ್ತಾರೆ. ನಿನ್ನೆ ಹೇಳಿದ ಕಟು ಸತ್ಯಕ್ಕೆ ಅವರನ್ನು ಅಭಿನಂದಿಸುತ್ತೇನೆ. ಅವರು ಆ ಸತ್ಯಕ್ಕೆ ಬದ್ಧವಾಗಿರುತ್ತಾರೆ ಎಂದು ಭಾವಿಸುತ್ತೇನೆ ಎಂದು ಉಗ್ರಪ್ಪ ಆಶಿಸಿದರು.
ವಿಧಾನಸಭೆ ಉಪಚುನಾವಣೆಯ ಸಮಯದಲ್ಲಿ ಪ್ರತಿ ಕ್ಷೇತ್ರದಲ್ಲೂ ಬಿಜೆಪಿಯವರು 50 ಕೋಟಿ ರೂ ಖರ್ಚು ಮಾಡುತ್ತಿದ್ದಾರೆ ಎಂದು ನಾವು ಹೇಳಿದ್ದೆವು. ಆರ್ ಆರ್ ನಗರ ಮತ್ತು ಶಿರಾ ಉಪಚುನಾವಣೆಗಳಲ್ಲೂ ಬಹುದೊಡ್ಡ ಮೊತ್ತವನ್ನು ಖರ್ಚು ಮಾಡಿದ್ಧಾರೆ ಎಂದು ನಾವು ಆರೋಪ ಮಾಡಿದ್ದೆವು. ಬಿಜೆಪಿ ಇದನ್ನು ತಳ್ಳಿಹಾಕಿತ್ತು. ಈಗ ನಿನ್ನೆ ವಿಶ್ವನಾಥ್ ಅವರು ಹೇಳಿಕೆ ನೀಡಿ, ಪಕ್ಷ ನೀಡಿದ ದೊಡ್ಡ ಮೊತ್ತ ತನಗೆ ತಲುಪಿಲ್ಲ ಎಂದಿದ್ದಾರೆ. ಆ ದೊಡ್ಡ ಮೊತ್ತ ಕನಿಷ್ಠ 10 ಕೋಟಿಯಾದರೂ ಇರಬೇಕು. ಎಷ್ಟು ಮೊತ್ತ ಎಂದು ಅವರು ಹೇಳಬೇಕು. ಈ ದೊಡ್ಡ ಮೊತ್ತ ಯಾವ ಮೂಲದಿಂದ ಬಂತು? ಇದು ವೈಟ್ ಮನಿಯಾ ಅಥವಾ ಬ್ಲ್ಯಾಕ್ ಮನಿಯಾ? ವೈಟ್ ಮನಿಯಾದರೆ ಯಾರು ಕೊಟ್ಟಿದ್ದು? ಬ್ಲ್ಯಾಕ್ ಮನಿಯಾದರೆ ಅದು ಕಾನೂನುಬಾಹಿರ ಆಗುತ್ತದೆ. ಚುನಾವಣಾ ಆಯೋಗದ ಪಾತ್ರ ಕೂಡ ಈ ಪ್ರಕರಣ ಭೇದಿಸುವಲ್ಲಿ ಮಹತ್ವ ಇದೆ. ಇದು ತನಿಖೆಗೆ ಅರ್ಹವಾದ ಪ್ರಕರಣವಾಗಿದೆ ಎಂದು ಉಗ್ರಪ್ಪ ಹೇಳಿದರು.
ಉಗ್ರಪ್ಪಗೂ ಮೊದಲು ಮಾತನಾಡಿದ ಬಿ.ಎಲ್. ಶಂಕರ್, ಹಿಂದೆಯೂ ವಿಶ್ವನಾಥ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಅವರು ತಮ್ಮ ಆದಾಯ ಮೂಲವನ್ನು ಹೇಳಬೇಕು. ಆ ಹಣ ಎಲ್ಲಿಂದ ಬಂದು ಎಂದು ತಿಳಿಸಿ ಅಫಿಡವಿಟ್ ಹಾಕಬೇಕು ಎಂದು ಆಗ್ರಹಿಸಿದರು.
ಸಿಎಂ ಕಚೇರಿ ಸುತ್ತ ಸಾಕಷ್ಟು ಬೆಳವಣಿಗೆ ನಡೆಯುತ್ತಿದೆ. ಸಿಎಂ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರು ರಾಜೀನಾಮೆ ನೀಡುತ್ತಾರೆ. ರಾಜಕೀಯ ಕಾರ್ಯದರ್ಶಿ ಆಸ್ಪತ್ರೆಗೆ ಸೇರುತ್ತಾರೆ. ಈಗ ವಿಶ್ವನಾಥ್ ಅವರು ಹೇಳಿಕೆ ನೀಡಿದ್ಧಾರೆ. ಅವರು ಹೇಳಿದ ಆ ದೊಡ್ಡ ಮೊತ್ತದ ಹಣ ಯಾವುದು? ಆ ಹಣದ ಮೂಲ ಯಾವುದು ಎಂಬ ವಿಚಾರದ ಬಗ್ಗೆ ಚರ್ಚೆ ಆಗಬೇಕು ಎಂದು ಬಿ.ಎಲ್. ಶಂಕರ್ ಒತ್ತಾಯಿಸಿದರು.
ವರದಿ: ಚಿದಾನಂದ ಪಟೇಲ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ