ಸರ್ಕಾರ ರಚನೆಗೆ ಬಿಜೆಪಿಗೆ ರಾಜ್ಯಪಾಲರ ಆಹ್ವಾನ..? ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಚಿಂತನೆ


Updated:May 16, 2018, 4:33 PM IST
ಸರ್ಕಾರ ರಚನೆಗೆ ಬಿಜೆಪಿಗೆ ರಾಜ್ಯಪಾಲರ ಆಹ್ವಾನ..? ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಚಿಂತನೆ

Updated: May 16, 2018, 4:33 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಮೇ.16): 2006ರಲ್ಲಿ ಕರ್ನಾಟಕದಲ್ಲಿ ಕಂಡ ರಾಜಕೀಯ ಹೈಡ್ರಾಮ ಮತ್ತೆ ಮರುಕಳಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಚಕ್ಕೆ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ಸರ್ಕಾರ ರಚನೆಯ ಕಸರತ್ತು ನಡೆಸುತ್ತಿವೆ. ಈ ಮಧ್ಯೆ, ರಾಜ್ಯಪಾಲ ವಜುಭಾಯಿ ವಾಲಾ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪನವರಿಗೆ ಸರ್ಕಾರ ರಚನೆಗೆ ಆಹ್ವಾನ ಕೊಟ್ಟಿದ್ದು, ನಾಳೆ ಮುಖ್ಯಮಂತ್ರಿಯಾಗಿ ಕಂಠೀರವ ಕ್ರೀಡಾಂಗಣದಲ್ಲಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.

ಈಗ ಬರುತ್ತಿರುವ ವರದಿಗಳಿಂದಾಗಿ ಸರ್ಕಾರ ರಚನೆಗೆ ಮುಂದಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಅಕ್ಷರಶಃ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಚಿಂತನೆ ಎಂದು ತಿಳಿದುಬಂದಿದೆ. ಸಂಜೆವರೆಗೂ ಕಾದು ನೋಡಿ ನಂತರ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದು, ಸಂಜೆ ಒಳಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ರಾಜ್ಯಪಾಲರು ಅವಕಾಶ ನೀಡಿದಿದ್ದರೆ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕರ ಸಂಖ್ಯೆ ಆಧರಿಸಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಲು ಹಿರಿಯ ವಕೀಲರಾದ ಕಪಿಲ್ ಸಿಬಾಲ್, ಅಭಿಷೇಕ್ ಮನು ಸಿಂಘ್ವಿ ನೇತೃತ್ವದ ವಕೀಲರ ತಂಡ ತಯಾರಿ ನಡೆಸಿದೆ.

ಆಪರೇಶನ್ ಕಮಲದ ಆತಂಕ: ಸರ್ಕಾರ ರಚನೆಗೆ ಬಿಜೆಪಿಗೆ ಗವರ್ನರ್ ಆಹ್ವಾನ ನೀಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಕಾಂಗ್ರೆಸ್ ವಲಯದಲ್ಲಿ ಆಪರೇಶನ್ ಕಮಲದ ಭಯ ಶುರುವಾಗಿದೆ. ಬಿಜೆಪಿ ಬಹುಮತಕ್ಕೆ ಇನ್ನೂ 8 ಸ್ಥಾನಗಳ ಅಗತ್ಯವಿದ್ದು, ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರಿಗೆ ಬಿಜೆಪಿ ಗಾಳ ಹಾಕುವ ಸಾಧ್ಯತೆ ಇದೆ. ಹೀಗಾಗಿ, ಕಾಂಗ್ರೆಸ್ ಶಾಸಕರನ್ನ ರಾಮನಗರ ಬಳಿಯ ಈಗಲ್ಟನ್ ರೆಸಾರ್ಟ್​ಗೆ ಕರೆದೊಯ್ಯಲು ತಯಾರಿ ನಡೆದಿದೆ. ಕಾಂಗ್ರೆಸ್ ಶಾಸಕರ ಜವಾಬ್ದಾರಿಯನ್ನ ಡಿ.ಕೆ. ಸುರೇಶ್ ಅವರಿಗೆ ನೀಡಲಾಗಿದ್ದು, 90 ಕೊಠಡಿಗಳನ್ನು ಸಹ ಬುಕ್ ಮಾಡಲಾಗಿದೆ ಎಮದು ತಿಳಿದುಬಂದಿದೆ.

ಈ ಮಧ್ಯೆ, ಇಂದು ಸಂಜೆ ಮತ್ತೆ ಕಾಂಗ್ರೆಸ್ ಶಾಸಕರ ಸಭೆ ಕರೆಯಲಾಗಿದ್ದು, ಯಾವುದೇ ಆಮಿಷಕ್ಕೆ ಒಳಗಾಗದ.ಂತೆ ಸ್ಪಷ್ಟ ಸೂಚನೆಗಳನ್ನ ನೀಡುವ ಸಾಧ್ಯತೆ ಇದೆ.

ಇತ್ತ, ಆಪರೇಶನ್ ಕಮಲದ ಚಟುವಟಿಕೆ ತೀವ್ರಗೊಳಿಸಿರುವ ಬಿಜೆಪಿ ಮೊದಲ ಬಾರಿಗೆ ಗೆದ್ದ ನಾಯಕರಿಗೆ ಗಾಳ ಹಾಕಿದೆ ಎನ್ನಲಾಗುತ್ತಿದೆ. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಮಾಲೂರು ಶಾಸಕ ನಂಜೇಗೌಡ, ಕಂಪ್ಲಿ ಶಾಸಕ ಗಣೇಶ್ ಸೇರಿದಂತೆ 6 ಶಾಸಕರಿಗೆ ಬಿಜೆಪಿ ಆಹ್ವಾನ ನಿಡಿದೆ ಎನ್ನಲಾಗುತ್ತಿದೆ. ಬೆಂಗಳೂರಲ್ಲೇ ಇದ್ದರೂ ವಿಜಯನಗರ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಸಭೆಗೆ ಆಗಮಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
Loading...

ಒಟ್ನಲ್ಲಿ, ಅತಂತ್ರ ವಿಧಾನಸಭೆ ಕಾರಣನಾದ ಮತದಾರ ರಾಜಕಾರಣಿಗಳ ಹೈಡ್ರಾಮಾವನ್ನೂ ನೋಡಲೇಬೇಕಿದೆ.

 

 
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ