ಬೆಂಗಳೂರು (ನ.9): ಶಿರಾ ಉಪಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಅವರಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಇಂದು ಚುನಾವಣಾ ಫಲಿತಾಂಶ ಹೊರ ಬೀಳಲಿದ್ದು, ನಿನ್ನೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಕೆಮ್ಮು ಕಾಣಿಸಿಕೊಂಡ ಹಿನ್ನಲೆ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದು, ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. ಕೋವಿಡ್ ಹಿನ್ನಲೆ ಅವರು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟಿಬಿ ಜಯಚಂದ್ರ ಅವರ ಹೆಂಡತಿ ನಿರ್ಮಲಾ ಅವರಿಗೂ ಕೂಡ ಸೋಂಕು ಪತ್ತೆಯಾಗಿದ್ದು, ಅವರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಲಿತಾಂಶದ ಹಿನ್ನಲೆ ಆಸ್ಪತ್ರೆಯಿಂದ ವಿಡಿಯೋ ಬಿಡುಗಡೆ ಮಾಡಿರುವ ಅವರು , ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತ ಎಣಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮೆಲ್ಲರ ಶ್ರಮ ಹಾಗೂ ಆಶೀರ್ವಾದ ಗೆಲುವಿನ ಫಲಿತಾಂಶ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫೇಸ್ಬುಕ್ ವಿಡಿಯೋದಲ್ಲಿ ಮಾತನಾಡಿರುವ ಅವರು, ನಮ್ಮ ಕಾರ್ಯಕರ್ತರು, ಮುಖಂಡರ ಶ್ರಮಕ್ಕೆ ಫಲ ಸಿಗಲಿದೆ. ಆದಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು, ಆದಷ್ಟು ಬೇಗ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಯ ನಮಗೆ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದ್ದಾರೆ.
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ, 8ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, 7 ಗಂಟೆಗೆ ಸ್ಟ್ರಾಂಗ್ ರೂಂ ತೆರೆಯಲಾಗುವುದು. ಮತ ಎಣಿಕೆ ಕೇಂದ್ರಕ್ಕೆ ಬರುವವರಿಗೆ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ನಿಷೇಧಾಜ್ಞೆ ಹಾಕಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ. ಸ್ಥಳದಲ್ಲಿ 200ಕ್ಕೂ ಹೆಚ್ಚು ಪೊಲೀಸರು, ಡಿವೈಎಸ್ಪಿ, ಸಿಪಿಐ, ಪಿಎಸ್ಐ ನಿಯೋಜಿಸಲಾಗಿದೆ.
ಇದನ್ನು ಓದಿ: ನ್ಯೂಸ್ 18 ಕನ್ನಡ ಇಂಫ್ಯಾಕ್ಟ್ : ಮಕ್ಕಳಿಗೆ ಆಹಾರ ಧಾನ್ಯ ವಿತರಿಸಲು ಸಿದ್ಧರಿರುವಂತೆ ಶಿಕ್ಷಕರಿಗೆ ಅಧಿಕಾರಿಗಳಿಂದ ಸೂಚನೆ
ಮೂರು ಪಕ್ಷಗಳಿಗೆ ತೀವ್ರ ಹಣಾಹಣಿಯಾದ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸತ್ಯನಾರಾಯಣ ಅವರ ಹೆಂಡತಿ ಅಮ್ಮಾಜಮ್ಮ, ಬಿಜೆಪಿ ಅಭ್ಯರ್ಥಿಯಾಗಿ ಡಾ. ರಾಜೇಶ್ ಗೌಡ ಹಾಗೂ ಕಾಂಗ್ರೆಸ್ನಿಂದ ಟಿಬಿ ಜಯಚಂದ್ರ ಸ್ಪರ್ಧಿಸಿದ್ದರು. ಮತ ಸೆಳೆಯಲು ಬಿಜೆಪಿ, ಜೆಡಿಎಸ್ ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರ ಜಪಿಸಿದ್ದರು. ಮಧ್ಯಾಹ್ನ ದ ವೇಳೆಗೆ ಫಲಿತಾಂಶ ಹೊರಬೀಳಲಿದ್ದು, ಯಾರಿಗೆ ಜಯ ಸಿಗಲಿದೆ ಎಂಬುದು ಸ್ಪಷ್ಟವಾಗಲಿದೆ
ಸಂಭ್ರಮಾಚಾರಣೆಗೆ ಇಲ್ಲ ಅವಕಾಶ:
ಮತ ಎಣಿಕೆ ಬಳಿಕೆ ಗೆದ್ದ ಅಭ್ಯರ್ಥಿಗಳ ಪರ ಮತಗಟ್ಟೆ ಸಮೀಪ ಯಾವುದೇ ಸಂಭ್ರಮಾಚರಣೆ ಹಾಗೂ ಪಟಾಕಿ ಸಿಡಿಸಲು ಅವಕಾಶ ಇಲ್ಲ. ಮತ ಎಣಿಕೆ ಕೇಂದ್ರದ ಮುಂದಿನ ರಸ್ತೆಯಲ್ಲಿ ಸಂಚಾರ ನಿಷೇಧ ಮಾಡಲಾಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಪಟಾಕಿ ನಿಷೇಧವಿದ್ದು, ಪಟಾಕಿ ಹೊಡೆದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ