ಬೆಂಗಳೂರು (ಮೇ 30): ರಾಜ್ಯಸಭಾ ಚುನಾವಣೆ ಹಿನ್ನೆಲೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್ನಿಂದ (Congress) ರಾಜ್ಯಸಭಾ (Rajya Sabha) ಮೊದಲನೇ ಅಭ್ಯರ್ಥಿಯಾಗಿ ಜೈ ರಾಮ್ ರಮೇಶ್ (Jai Ram Ramesh) ಹಾಗೂ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿಖಾನ್ (Mansoor Ali Khan) ನಾಮಪತ್ರ ಸಲ್ಲಿಕೆ ಮಾಡಿದರು. ವಿಧಾನಸೌಧದಲ್ಲಿ ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಯಾಗಿರುವ ಎಂ.ಕೆ ವಿಶಾಲಾಕ್ಷಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ,ಯು.ಟಿ.ಖಾದರ್, ಜಮೀರ್ ಅಹಮದ್ ಖಾನ್ ಉಪಸ್ಥಿತರಿದ್ದರು.
ನಾಳೆ ನಾಮಪತ್ರ ಸಲ್ಲಿಕೆಗೆ ಕೊನೇ ದಿನ
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದ್ದು, ನಾಳೆ ನಾಮಪತ್ರ ಸಲ್ಲಿಕೆಗೆ ಕಡೆ ದಿನ. ಈಗಾಗಲೇ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ನಿಂದ ಜಯರಾಮ್ ರಮೇಶ್ ಅಭ್ಯರ್ಥಿ ಆಗಿದ್ದಾರೆ. ಈ ಮೂವರ ಗೆಲುವು ನಿಶ್ಚಿತವಾಗಿದ್ದು, ನಾಲ್ಕನೇ ಅಭ್ಯರ್ಥಿಯಾಗಿ ಕಾಂಗ್ರೆಸ್ನಿಂದ ಮನ್ಸೂರ್ ಅಲಿಖಾನ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸಹ ಕಣಕ್ಕಿಳಿಯುವ ಸಿದ್ಧತೆ ನಡೆಸಿದ್ದಾರೆ. ನಾಲ್ಕನೇ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಗಿದೆ.
ಇದನ್ನೂ ಓದಿ: Siddaramaiah: ಶಾಲು, ದೋತಿ, ಪೇಟ ಹಾಕೋದು ನನ್ನ ಸಂಪ್ರದಾಯ, ಇದನ್ನ ಕೇಳಲು ನೀನ್ ಯಾರು? ಸಿದ್ದರಾಮಯ್ಯ
JDSನಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿಯೋ ಸಾಧ್ಯತೆ
ಈಗಾಗಲೇ ತಮ್ಮ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿದ್ದು, ಇದೀಗ ಬಿಜೆಪಿ ಬೆಂಬಲ ಪಡೆಯುವುದು ಅನಿವಾರ್ಯ. ಬಿಜೆಪಿ ಬೆಂಬಲ ನೀಡಲು ಸಮ್ಮತಿಸಿದರೆ ಜೆಡಿಎಸ್ ಗೆಲುವು ಸುಲಭವಾಗಲಿದೆ. ಮೂರನೇ ಅಭ್ಯರ್ಥಿಯನ್ನು ತಾವು ಕಣಕ್ಕಿಳಿಸುವುದಿಲ್ಲ ಎಂದು ಬಿಜೆಪಿ ಈಗಾಗಲೇ ತಿಳಿಸಿದೆ. ಈ ಹಿನ್ನೆಲೆ ಕುಪೇಂದ್ರ ರೆಡ್ಡಿ ತಮ್ಮ ಗೆಲುವಿಗೆ ಬಿಜೆಪಿಯನ್ನು ಆಶ್ರಯಿಸುವುದು ಬಹುತೇಕ ಅನಿವಾರ್ಯವಾಗಿದೆ.
ಮನ್ಸೂರ್ರನ್ನು ಕಣಕ್ಕಿಳಿಸೋ ಹಿಂದಿರೋ ಉದ್ದೇಶವೇನು?
ಉದ್ದೇಶ ಪೂರ್ವಕವಾಗಿಯೇ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಅಭ್ಯರ್ಥಿಯನ್ನು ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಮುಂದೆ ಜೆಡಿಎಸ್ ಬೆಂಬಲ ನೀಡದಿದ್ದರೆ ಅಲ್ಪಸಂಖ್ಯಾತ ವಿರೋಧಿ ಹಾಗೂ ಕೋಮುವಾದಿ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಲು ಅನುಕೂಲವಾಗಲಿದೆ ಎಂಬ ಆಶಯವನ್ನು ಹೊಂದಿದೆ ಎಂಬ ಮಾತು ಕೇಳಿಬರುತ್ತಿದೆ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಳ್ಳುವುದಕ್ಕಿಂತ ಜೆಡಿಎಸ್ ಅಲ್ಪಸಂಖ್ಯಾತ ವಿರೋಧಿ ಎಂಬ ಭಾವನೆಯನ್ನು ತೋರಿಸುವುದು ಕಾಂಗ್ರೆಸ್ ಉದ್ದೇಶ ಎನ್ನಲಾಗುತ್ತಿದೆ.
ಸಜ್ಜನ ವ್ಯಕ್ತಿಗೆ ಟಿಕೆಟ್ ನೀಡಿದ್ದೇವೆ
ಮನ್ಸೂರ್ ನಾಮಪತ್ರ ಸಲ್ಲಿಕೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿ ನೀಡಿದ್ದಾರೆ. ಒಬ್ಬ ಸಜ್ಜನ ವ್ಯಕ್ತಿ ಹಾಗೂ ಯುವಕನಿಗೆ ಎರಡನೇ ಅಭ್ಯರ್ಥಿಯನ್ನಾಗಿ ಅವಕಾಶ ಕೊಟ್ಟಿದ್ದೇವೆ. ಅವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಎಲ್ಲ ಶಾಸಕರು ತಮ್ಮ ಆತ್ಮ ಸಾಕ್ಷಿಯಿಂದ ಇವರಿಗೆ ಮತ ನೀಡಬೇಕು ಎಂದು ಕೋರುತ್ತೇವೆ. ಗೆಲ್ಲುತ್ತಾರೆ ಎಂಬ ವಿಶ್ವಾಸ ಇದ್ದು, ಪ್ರಜಾಪ್ರಭುತ್ವದ ಮೇಲೆ ನಾವು ನಂಬಿಕೆ ಇಟ್ಟುಕೊಂಡಿದ್ದೇವೆ.
ಜೆಡಿಎಸ್ಗೆ ಬೆಂಬಲ ಕೊಡುವ ಬಗ್ಗೆ ಚಿಂತನೆ
ಪಕ್ಷ, ನಮ್ಮ ನಾಯಕರು ಹಾಗೂ ದೆಹಲಿ ವರಿಷ್ಠರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದನ್ನು ಪಾಲಿಸುವುದು ನನ್ನ ಕರ್ತವ್ಯ ಎಂದ್ರು ಇನ್ನೂ ಜೆಡಿಎಸ್ ಬೆಂಬಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಡಿ.ಕೆ ಶಿವಕುಮಾರ್, ಅವರು ನಮ್ಮನ್ನು ಬಂದು ಬೆಂಬಲ ಕೊಡಿ ಎಂದು ಕೇಳಿದ್ದಾರೆ. ನಾವು ಕೂಡ ಕೊಡಿ ಎಂದು ಕೇಳಿದ್ದೇವೆ ನೋಡೊಣ, ಜೈ ರಾಮ್ ರಮೇಶ್ ಕೊಡುಗೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವ್ರು, ಜೈರಾಮ್ ರಮೇಶ್, ಕರ್ನಾಟಕ ಮೂಲದವರು, ಇಡೀ ರಾಷ್ಟ್ರಕ್ಕೆ ಪಕ್ಷದ ಮೂಲಕ ಉತ್ತಮ ಕೊಡುಗೆ ನೀಡಿದ್ದಾರೆ. ನಿಮ್ಮ ಕಣ್ಣಿಗೆ ಕಾಣದೇ ಇರಬಹುದು. ಆದರೆ ಹಿನ್ನಲೆಯಲ್ಲಿ ಇದ್ದುಕೊಂಡೇ ಸಾಕಷ್ಟು ಕೆಲಸ ಮಾಡಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ