ತಾರಕ್ಕಕ್ಕೇರಿದ ಮಾಜಿ ಹಾಗೂ ಹಾಲಿ ಶಾಸಕರ ಮುಸುಕಿನ ಗುದ್ಧಾಟ; ಬಂಟ್ವಾಳದಲ್ಲಿ ಕಾಂಗ್ರೆಸ್​-ಬಿಜೆಪಿ ಬೆಂಬಲಿಗರ ಜಟಾಪಟಿ

ನೀರಿನ ಘಟಕವೊಂದರ ವೀಕ್ಷಣೆಯ ವಿಚಾರವನ್ನಿಟ್ಟುಕೊಂಡು ಎರಡೂ ಶಾಸಕರ ಬೆಂಬಲಿಗರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದು ತಲುಪಿದ್ದಾರೆ.

ಕಾಂಗ್ರೆಸ್​-ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ

ಕಾಂಗ್ರೆಸ್​-ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ

  • Share this:
ಪುತ್ತೂರು (ಜ. 30):  ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಹಾಗೂ ಹಾಲಿ ಶಾಸಕರ ನಡುವಿನ ಮುಸುಕಿನ ಗುದ್ದಾಟ ಇದೀಗ ಬೀದಿ ರಂಪಾಟದ ಹಂತಕ್ಕೆ ಬಂದು ತಲುಪಿದೆ. ನೀರಿನ ಘಟಕವೊಂದರ ವೀಕ್ಷಣೆಯ ವಿಚಾರವನ್ನಿಟ್ಟುಕೊಂಡು ಎರಡೂ ಶಾಸಕರ ಬೆಂಬಲಿಗರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದು ತಲುಪಿದ್ದಾರೆ. ಬಂಟ್ವಾಳದ ಸರಪಾಡಿ ಹಾಗೂ ನರಿಕೊಂಬು ಪ್ರದೇಶದಲ್ಲಿ ಬಹುಗ್ರಾಮ ಯೋಜನೆಯಡಿ ಸುಮಾರು 62 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸಿದ್ಧಗೊಂಡಿದೆ. ಈ ಯೋಜನೆಯಿಂದ ಬಂಟ್ವಾಳ ತಾಲೂಕಿನ 12 ಗ್ರಾಮಪಂಚಾಯತ್ ಗಳ 19 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ. ಸುಮಾರು 135 ಜನವಸತಿ ಪ್ರದೇಶದ ಒಟ್ಟು 71 ಸಾವಿರ ಜನರಿಗೆ ಈ ಘಟಕದಿಂದ ಶುದ್ಧ ನೀರು ಪೂರೈಕೆಯಾಗಲಿದ್ದು, ಈ ಘಟಕವನ್ನು ಜನವರಿ 31 ರಂದು ( ನಾಳೆ ) ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಎರಡು ವರ್ಷಗಳ ಹಿಂದೆ ಈ ಘಟಕಕ್ಕೆ ಶಿಲಾನ್ಯಾಸವನ್ನು ಹಾಲಿ ಶಾಸಕ ರಾಜೇಶ್ ನಾಯ್ಕ್ ಮಾಡಿದ್ದು, ಈ ಘಟಕವನ್ನು ಮಾಜಿ ಶಾಸಕ ರಮಾನಾಥ ರೈ ಬಂಟ್ವಾಳ ತಾಲೂಕಿಗೆ ಮಂಜೂರು ಮಾಡಿಕೊಂಡಿದ್ದರು.  ಉದ್ಘಾಟನೆಗೆ ಮೊದಲು ಸರಪಾಡಿ ಘಟಕವನ್ನು ವೀಕ್ಷಣೆ ಮಾಡಲು ಮಾಜಿ ಶಾಸಕ ರಮಾನಾಥ ರೈ ತಮ್ಮ ಬೆಂಬಲಿಗರೊಂದಿಗೆ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಈ ರೀತಿಯ ವೀಕ್ಷಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಹೊಯಿ ಕೈ ನಡೆದಿದೆ. ತನ್ನ ವೀಕ್ಷಣೆಯನ್ನು ತಡೆದ ಬಿಜೆಪಿ ಕಾರ್ಯಕರ್ತರ ವರ್ತನೆಗೆ ಮಾಜಿ ಶಾಸಕ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲೇ ತಮ್ಮ ಬೆಂಬಲಿಗರ ಜೊತೆಗೆ ಧರಣಿ ಕುಳಿತುಕೊಂಡಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಸ್ಥಳದಲ್ಲಿ ಜಮಾವಣೆಗೊಂಡ ಹಿನ್ನಲೆಯಲ್ಲಿ ಬಂಟ್ವಾಳ ಪೋಲೀಸರು ಎರಡೂ ಪಕ್ಷಗಳ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಸಮಾಧಾನಿಸುವ ಕಾರ್ಯ ನಡೆಸಿದ್ದರೂ, ಜನಪ್ರತಿನಿಧಿಗಳು ಪೋಲೀಸರ ಮೇಲೆಯೇ ದರ್ಪ ತೋರಿದ್ದಾರೆ.

ಕೋವಿಡ್ 19 ಕಾರಣಕ್ಕಾಗಿ ಸಚಿವರು ಈ ಎರಡೂ ಘಟಕದ ಉದ್ಘಾಟನೆಯನ್ನು ಬಿ.ಸಿ. ರೋಡ್ ನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲೇ ನಡೆಸಲಿದ್ದಾರೆ. ಮಾಜಿ ಶಾಸಕ ರಮಾನಾಥ ರೈ ಈ ಹಿಂದೆಯೂ ಸರಕಾರದ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ ಹಾಗೂ ಸೇತುವೆಗಳನ್ನು ಅನಧಿಕೃತವಾಗಿ ಉದ್ಘಾಟನೆ ನೆರವೇರಿಸುತ್ತಿದ್ದು, ಈ ಬಾರಿ ಕುಡಿಯುವ ನೀರಿನ ಘಟಕವನ್ನೂ ಉದ್ಘಾಟಿಸುವ ಹುನ್ನಾರದಲ್ಲಿ ಭೇಟಿ ನೀಡಿದ್ದಾರೆ ಎಂದು ಬಂಟ್ವಾಳ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ ಆರೋಪಿಸಿದ್ದಾರೆ. ಇದರ ಮುನ್ಸೂಚನೆಯನ್ನು ಅರಿತ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕರನ್ನು ತಡೆದಿದ್ದಾರೆ ಎಂದು ದೇವದಾಸ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: ಮಾತುಕತೆ ಮೂಲಕ ಪ್ರತಿಭಟನಾ ನಿರತ ರೈತರ ಸಮಸ್ಯೆ ಬಗೆಹರಿಸಲು ಸರ್ಕಾರದಿಂದ ನಿರಂತರ ಪ್ರಯತ್ನ; ಪ್ರಧಾನಿ ಮೋದಿ

ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ನಿರಂತರವಾಗಿ ಆಯ್ಕೆಯಾಗಿ ಬರುತ್ತಿದ್ದ ಶಾಸಕ ಹಾಗೂ ಮಾಜಿ ಸಚಿವ ರಮಾನಾಥ ರೈ ಕಳೆದ ಬಾರಿಯ ಚುನಾವಣೆಯಲ್ಲಿ ಹಾಲಿ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ವಿರುದ್ಧ ಪರಾಜಯ ಹೊಂದಿದ್ದರು. ಆ ಬಳಿಕ ಹಾಲಿ ಹಾಗೂ ಮಾಜಿಗಳ ನಡುವೆ ನಿರಂತರ ಮುಸುಕಿನ ಗುದ್ಧಾಟ ನಡೆಯುತ್ತಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿತ್ತು.

ಇದೀಗ ಈ ಮುಸುಕಿನ ಗುದ್ಧಾಟ ಘರ್ಷಣೆಯ ರೂಪ ತಾಳಿದೆ. ಜನರ ತೆರಿಗೆ ಹಣವನ್ನು ಬಳಸಿ ಜನರಿಗೆ ಬೇಕಾದ ಸೌಕರ್ಯಗಳನ್ನು ಜಾರಿಗೊಳಿಸಲಾಗುತ್ತಿದ್ದರೂ, ಜನಪ್ರತಿನಿಧಿಗಳ ಮಾತ್ರ ತಮ್ಮ ಸ್ವಂತ ಖರ್ಚಿನಲ್ಲಿ ಯೋಜನೆಯನ್ನು ನೀಡುತ್ತಿದ್ದಾರೆ ಎನ್ನುವ ಗುಂಗಿನಲ್ಲಿದ್ದಾರೆ ಅನ್ನೋದಕ್ಕೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ನಡೆದ ಘಟನೆಯೂ ಸಾಕ್ಷಿಯಾದಂತಿದೆ.
Published by:Seema R
First published: