ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ (Congress And CPI) ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಇಂದು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣ್ದೀಪ್ ಸುರ್ಜೇವಾಲಾ (Randeep Surjewala), ಸಿಪಿಐ ಪಕ್ಷಕ್ಕೆ ತುಂಬಾ ಇತಿಹಾಸ ಇದೆ. ಸಾಮಾಜಿಕ ನ್ಯಾಯ, ಕಾರ್ಮಿಕ, ಬಡವರ ಶೋಷಿತರ ಪರ ಹೋರಾಟ ಮಾಡುತ್ತಿದೆ ಎಂದರು. ಬಿಜೆಪಿಯ ದುರಾಡಳಿತ, 40% ಕಮಿಷನ್, ಕೋಮುವಾದಿ ಬಿಜೆಪಿ (BJP) ವಿರುದ್ದದ ನಮ್ಮ ಹೋರಾಟಕ್ಕೆ ಸಿಪಿಐ ಬೆಂಬಲ ನೀಡುತ್ತಿದೆ. 215 ಕ್ಷೇತ್ರಗಳಲ್ಲಿ ಯಾವುದೇ ಷರತ್ತು ಇಲ್ಲದೆ ಬೆಂಬಲ ನೀಡುತ್ತಿರುವ ವಿಷಯವನ್ನು ತಿಳಿಸಿದರು.
224 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸಿಪಿಐ ಸ್ಪರ್ಧೆ ಮಾಡುತ್ತದೆ. ಉಳಿದ 215 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಸಿಪಿಐ ಕೈ ಜೋಡಿಸಲಿದೆ ಎಂದು ರಣ್ದೀಪ್ ಸುರ್ಜೇವಾಲಾ ಹೇಳಿದರು.
ಇದೊಂದು ಐತಿಹಾಸಿಕ ದಿನವೆಂದ ಸುರ್ಜೇವಾಲಾ
ಇದೊಂದು ಐತಿಹಾಸಿಕ ದಿನವಾಗಿದ್ದು, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಕೂಡ ಹಲವು ಹೋರಾಟಗಳನ್ನ ಮಾಡಿದೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಲೇ ಬರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ, ಭ್ರಷ್ಟಾಚಾರ ಸೇರಿದಂತೆ ಅನೇಕ ವಿಚಾರಗಳಿಗೆ ಸಿಪಿಐ ಹೋರಾಟ ಮಾಡಿದೆ ಎಂದರು.
ಎರಡೂ ಪಕ್ಷಗಳ ಉದ್ದೇಶ ಒಂದೇ ಇದೆ. ಹೀಗಾಗಿ ಸಿಪಿಐ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿದ್ದೇವೆ. ಇಬ್ಬರೂ ಸೇರಿ ಒಂದು ತೀರ್ಮಾನಕ್ಕೆ ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಸುರ್ಜೇವಾಲಾ ಹೇಳಿದರು.
ಬಿಜೆಪಿ ವಿರುದ್ಧ ಸಿಪಿಐ ವಾಗ್ದಾಳಿ
ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ 40% ಕಮಿಷನ್ ಆರೋಪ ಗುತ್ತಿಗೆದಾರರು ಮಾಡಿದ್ದಾರೆ. ಕೋಮು ಗಲಭೆಯಲ್ಲಿ ಸಾವು ಆದ್ರೆ ನೀಡುವ ಅನುದಾನದಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಧರ್ಮದ ಹೆಸರಿನಲ್ಲಿ ಸಿಎಂ ತಾರತಮ್ಯ ಮಾಡಿದ್ದಾರೆ. ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಮತೀಯವಾದ ಹೆಚ್ಚಿಸಿದ್ದಾರೆ. ಜನ ವಿರೋಧಿ ಬಿಜೆಪಿಯನ್ನ ಸೋಲಿಸುವುದು ನಮ್ಮ ಗುರಿ. ಜೊತೆಗೆ ಅತಂತ್ರ ಸ್ಥಿತಿ ವಿಧಾನಸಭೆ ತಡೆಯಲು ಸಿಪಿಐ ಕಾಂಗ್ರೆಸ್ ಗೆ ಬೆಂಬಲ ನೀಡಿದೆ ಎಂದು ಹೇಳಿದರು.
ಇದನ್ನೂ ಓದಿ: Congress: ಅಧಿಕಾರಕ್ಕಾಗಿ ಶಕ್ತಿ ದೇವತೆ ಮೊರೆ ಹೋದ ಡಿಕೆ ಶಿವಕುಮಾರ್
ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ
ನಾವು 7 ಕಡೆ ಸ್ಪರ್ಧೆ ಮಾಡಿದ್ದೇವೆ. ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಸಿಪಿಐ ಬೆಂಬಲ ನೀಡಿದೆ. ಬಾಗೇಪಲ್ಲಿಯಲ್ಲಿ ಸಿಪಿಐಎಂ ಅಭ್ಯರ್ಥಿ ಅನಿಲ್ ಕುಮಾರ್ ಅವರಿಗೆ ಬೆಂಬಲ ಕೊಡಲಾಗಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ