ಬೆಳಗಾವಿ: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಬೆಳಗಾವಿ (Belagavi) ಪ್ರವಾಸದಲ್ಲಿದ್ದಾರೆ. ಜಿಲ್ಲೆಯ ರಾಮದುರ್ಗ (Ramadurga) ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಬುಧವಾರ ರಾತ್ರಿ ಸಿದ್ದರಾಮಯ್ಯ ವಾಸ್ತವ್ಯವಿದ್ದ ಖಾಸಗಿ ಹೋಟೆಲ್ (Hotel) ಮುಂಭಾಗ ಕೈ ಕಾರ್ಯಕರ್ತರು (Congress Activist) ಪ್ರತಿಭಟನೆ ನಡೆಸಿದ್ದಾರೆ. ರಾಮದುರ್ಗ ವಿಧಾನಸಭಾ ಕ್ಷೇತ್ರದಿಂದ ಚಿಕ್ಕ ರೇವಣ್ಣ (Chikka Revanna) ಅವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸಿ ಹೋಟೆಲ್ ಮುಂದೆ ಪ್ರತಿಭಟನೆ (Protest) ನಡೆಸಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಹೋಟೆಲ್ ಮುಂಭಾಗ ಹೈಡ್ರಾಮಾ ನಡೆದಿದೆ. ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಹೋಟೆಲ್ನಿಂದ ಹೊರಬಂದ ಸಿದ್ದರಾಮಯ್ಯನವರು ನಾಳೆ ಎಲ್ಲರ ಜೊತೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು. ಸಿದ್ದರಾಮಯ್ಯ ಭರವಸೆ ಹಿನ್ನೆಲೆ ರಾಮದುರ್ಗದ ಚಿಕ್ಕರೇವಣ್ಣ ಬೆಂಬಲಿಗರು ಪ್ರತಿಭಟನೆ ಹಿಂಪಡೆದು ಹಿಂದಿರುಗಿದರು.
ಪ್ರತಿಭಟನೆ ಯಾಕೆ?
ಬೆಳಗಾವಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಕಳೆದ ಎರಡು ದಿನಗಳಿಂದ ರಾಮದುರ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಜೊತೆ ಸಭೆ ನಡೆಸಿದ್ದರು. ಸಭೆಯಲ್ಲಿ ಚಿಕ್ಕರೇವಣ್ಣ ಮನವೊಲಿಸಿ ಅಶೋಕ್ ಪಟ್ಟಣ್ ಅವರಿಗೆ ಟಿಕೆಟ್ ನೀಡಲು ಸಿದ್ದರಾಮಯ್ಯ ತೀರ್ಮಾನಿಸಿದ್ದರು. ಸಭೆಯಲ್ಲಿ ಅಶೋಕ್ ಪಟ್ಟಣ್ ಅವರಿಗೆ ಟಿಕೆಟ್ ನೀಡಲು ಚಿಕ್ಕರೇವಣ್ಣ ಸಹಮತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಉಲ್ಟಾ ಹೊಡೆದ್ರಾ ಚಿಕ್ಕರೇವಣ್ಣ?
ಇದೀಗ ಯುಟರ್ನ್ ತೆಗೆದುಕೊಂಡಿರುವ ಚಿಕ್ಕರೇವಣ್ಣ ಬೆಂಬಲಿಗರ ಮೂಲಕ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಸುಮಾರು ಅರ್ಧ ಗಂಟೆ ಪ್ರತಿಭಟನೆ ನಡೆಸಿದ್ರೂ ಸಿದ್ದರಾಮಯ್ಯ ಟಿಕೆಟ್ ಘೋಷಣೆ ಮಾಡದ ಹಿನ್ನೆಲೆ ಚಿಕ್ಕರೇವಣ್ಣ ಬೆಂಬಲಿಗರು ಹಿಂದಿರುಗಿದ್ದಾರೆ.
‘ಶಿವಾಜಿ ಪ್ರತಿಮೆ ಮಾಡಿಸಿದ್ದು ಹೆಬ್ಬಾಳ್ಕರ್’
ಬುಧವಾರ ಕುಂದಾನಗರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ (Prajadhwani) ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ರಾಜಹಂಸಗಢ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಮಾಡಿಸಿದ್ದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Congress MLA Laxmi Hebbalkar). ಈಗ ಉದ್ಘಾಟನೆಗೆ ಸೋತ MLA ಹಾಗೂ ಸಿಎಂ ಬೊಮ್ಮಾಯಿ ಬರುತ್ತಿದ್ದಾರೆ. ಸಂಜಯ್ ಪಾಟೀಲ್ (Sanjay Patil) ಮುಖವನ್ನು ನಾನು ನೋಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಜಾರಕಿಹೊಳಿ ವಿರುದ್ಧ ಹೆಬ್ಬಾಳ್ಕರ್ ಗುಡುಗು
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ನೋಡಿ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಅದರಲ್ಲೂ ಸ್ವಯಂ ಘೋಷಿತ ನಾಯಕ ಗೋಕಾಕ್ ಶಾಸಕರಿಗೆ ಆಗುತ್ತಿಲ್ಲ. ಚುನಾವಣೆ ಎರಡು ತಿಂಗಳ ಇದ್ದಾಗ ನಮ್ಮ ಕ್ಷೇತ್ರಕ್ಕೆ ಬಂದಿದ್ದೀರಿ. ಕೋವಿಡ್, ಪ್ರವಾಹ ಇದ್ದಾಗ ಎಲ್ಲಿ ಹೋಗಿದ್ರಿ ಎಂದು ಪ್ರಶ್ನೆ ಮಾಡಿದರು.
ರಮೇಶ್ ಜಾರಕಿಹೊಳಿ (Former Minister Ramesh Jarkiholi) ಅವರು 23 ವರ್ಷ ಶಾಸಕರಾಗಿ ಕೆಲಸ ಮಾಡಿದ್ದು, ಮಾಜಿ ಸಚಿವರಿಗೆ ಅವರದ್ದೇ ಪಕ್ಷದ ಸರ್ಕಾರದ ಅಧಿಕಾರದ ಅವಧಿ 16 ವರ್ಷ ಇತ್ತು. ಆದರೆ ಮೊದಲ ಬಾರಿಗೆ ಶಾಸಕಿಯಾದ ನನಗೆ ಸಂಕುಚಿತ ಭಾವನೆ ಇದೆ ಎನ್ನೋದನ್ನು ಬಿಂಬಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Laxmi Hebbalkar: ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಪಲಿಲ್ಲ, ನಾನ್ಯಾವ ಲೆಕ್ಕ: ಹೆಬ್ಬಾಳ್ಕರ್ ಭಾವುಕ ಮಾತು
ಗೋಕಾಕ್ ಕ್ಷೇತ್ರದಲ್ಲಿ ಪೊಲೀಸ್ ಠಾಣೆ, ತಾಲೂಕು ಅಧಿಕಾರಿ ಕಚೇರಿ, ಸಬ್ ರಿಜಿಸ್ಟರ್ ಕಚೇರಿ ಹೇಗೆ ಕೆಲಸ ನಡೆಯುತ್ತಿದೆ ಅಂತ ಎಲ್ಲರಿಗೂ ಗೊತ್ತಿದೆ. ಒಂದು ಎಕರೆ ಖರೀದಿಗೆ 10 ಲಕ್ಷ ರೂಪಾಯಿ ಕೊಡಬೇಕು. ಇದು ಗೋಕಾಕ್ ರಿಪಬ್ಲಿಕ್ ನಿಯಮಾವಳಿ, ಇದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ