ಚಿಕ್ಕಮಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Assembly Election) ಹತ್ತಿರವಾಗುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ. ಈಗಾಗಲೇ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಸ್ವತಃ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅದಕ್ಕಾಗಿ ಕೋಲಾರದಲ್ಲಿ (Kolar) ಒಂದು ಮನೆಯನ್ನು ಮಾಡಿದ್ದು, ಅವರ ಮಗ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಕೋಲಾರಕ್ಕೆ ಭೇಟಿ ನೀಡಿ ಮನೆಯನ್ನು ನೋಡಿ ಬಂದಿದ್ದಾರೆ. ಕೋಲಾರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಸಿದ್ಧತೆ ನಡೆಸುತ್ತಿದ್ದರೂ ಸಹಾ ಅವರ ಅಭಿಮಾನಿಗಳು ಮಾತ್ರ ತಮ್ಮ ಕ್ಷೇತ್ರಗಳಲ್ಲಿ ಬಂದು ಸ್ಪರ್ಧಿಸುವಂತೆ ಮನವಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಚುನಾವಣೆಗೆ ಕೋಟಿಗಟ್ಟಲೆ ಹಣ ನೀಡುವುದಾಗಿಯೂ ಆಫರ್ ನೀಡುತ್ತಿದ್ದಾರೆ.
ಈಗಾಗಲೇ ಯಾದಗಿರಿ, ರಾಯಚೂರಿನ ಕೆಲವು ಅಭಿಮಾನಿಗಳು ಸಿದ್ದರಾಮಯ್ಯರನ್ನು ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ಜಮೀನು ಮಾರಿ ಚುನಾವಣೆ ಖರ್ಚಿಗೆ ಹಣ ನೀಡುವುದಾಗಿ ತಿಳಿಸಿದ್ದಾರೆ. ಇದೀಗ ಚಿಕ್ಕಮಗಳೂರಿನಲ್ಲೂ ಕಾಂಗ್ರೆಸ್ ಅಭಿಮಾನಿಯೊಬ್ಬ ಸಿದ್ದರಾಮಯ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಟಿ ರವಿ ವಿರುದ್ಧ ಸ್ಪರ್ಧಿಸಿದರೆ ಒಂದು ಕೋಟಿ ರೂಪಾಯಿ ನೀಡುತ್ತೇನೆಂದು ಘೋಷಿಸಿದ್ದಾರೆ.
ಸಿದ್ದರಾಮಯ್ಯನವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದೇ ಆದರೆ 1 ಕೋಟಿಗೂ ಅಧಿಕ ಹಣ ನೀಡಲೂ ಸಿದ್ಧನಿದ್ದೇನೆ. ನಮ್ಮ ಕುಟುಂಬಸ್ಥರೂ ಸಿದ್ದರಾಮಯ್ಯನರಿಗೆ ಕೊಡುವುದಾದರೆ ನಮ್ಮಿಂದ ಯಾವುದೇ ತಕರಾರಿಲ್ಲ ಎಂದಿದ್ದಾರೆ. ಇದಕ್ಕಾಗಿ ಕೆಂಪನಹಳ್ಳಿಯಲ್ಲಿರುವ ನಮ್ಮಅಡಿಕೆ ತೋಟ ಮಾರಲು ಕೂಡ ಸಿದ್ದವಾಗಿದ್ದೇನೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತನಿಂದಲೂ ಆಫರ್
ಕಳೆದ ವಾರ ಯಾದಗಿರಿಯ ಬಿಜೆಪಿ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯರಿಗೆ ಯಾದಗಿರಿಯಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದರು. ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿದರೆ ನನ್ನ 7 ಎಕರೆ ಜಮೀನು ಮಾರಿಯಾದರೂ ಚುನಾವಣೆ ಖರ್ಚಿಗೆ 1 ಕೋಟಿ ರೂ. ಕೊಡುತ್ತೇನೆ ಎಂದು ಬಿಜೆಪಿ ಮುಖಂಡ ಚಂದ್ರಾಯ ನಾಗರಾಳ್ ಹೇಳಿದ್ದರು.
50 ಸಾವಿರ ಮತಗಳಿಂದ ಗೆಲ್ಲಿಸುವ ಭರವಸೆ
ಸಿದ್ದರಾಮಯ್ಯ ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿದರೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ. ಅಲ್ಲದೆ ಸಿದ್ದರಾಮಯ್ಯನವರನ್ನು 50-60 ಸಾವಿರ ಮತಗಳಿಂದ ಗೆಲ್ಲಿಸುತ್ತೇವೆ. ಇದಕ್ಕಾಗಿ ಬೆಂಗಳೂರಿಗೆ ತೆರಳಿ ಯಾದಗಿರಿಯಿಂದ ಸ್ಪರ್ಧಿಸಿ ಎಂದು ಸಿದ್ದರಾಮಯ್ಯನವರ ಕಾಲು ಹಿಡಿದು ಮನವಿ ಮಾಡುತ್ತೇನೆ. ನಮ್ಮ ಯಾದಗಿರಿ ಕ್ಷೇತ್ರ ಅಭಿವೃದ್ಧಿ ವಂಚಿತವಾಗಿದೆ. ಸಿದ್ದರಾಮಯ್ಯ ಸ್ಪರ್ಧಿಸಿದರೆ ಖಂಡಿತ ಗೆಲ್ಲುತ್ತಾರೆ. ಅವರಿಂದ ಈ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ, ಜೊತೆಗೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚುತ್ತದೆ ಎಂದು ಮನವಿ ಮಾಡಿಕೊಂಡಿದ್ದರು.
ರಾಯಚೂರು ಅಭಿಮಾನಿಯಿಂದಲೂ ಕರೆ
ಸಿದ್ದರಾಮಯ್ಯಗೆ ಕ್ಷೇತ್ರವೇ ಇಲ್ಲ ಎಂದು ವಿಪಕ್ಷಗಳು ವ್ಯಂಗ್ಯವಾಡುತ್ತಿದ್ದರೆ, ಇತ್ತ ಅಭಿಮಾನಿಗಳು ತಾವೇ ಚುನಾವಣೆ ಖರ್ಚನ್ನು ಭರಿಸುವುದಾಗಿ ತಮ್ಮ ಕ್ಷೇತ್ರಕ್ಕೆ ಆಹ್ವಾನ ನೀಡುತ್ತಿದ್ದಾರೆ. ರಾಯಚೂರಿನ ಅಭಿಮಾನಿಯೊಬ್ಬರು ಸಿದ್ದರಾಮಯ್ಯ ಜಿಲ್ಲೆಗೆ ಬಂದು ಸ್ಪರ್ಧಿಸಿದರೆ ತನ್ನ 2 ಎಕರೆ ಫಲವತ್ತಾದ ಭೂಮಿಯನ್ನು ಮಾರಾಟ ಮಾಡಿ ಬಂದ ಹಣವನ್ನು ಚುನಾವಣಾ ಖರ್ಚಿಗೆ ಹಣ ನೀಡುವುದಾಗಿ ಘೋಷಿಸಿದ್ದಾರೆ.
ಲಿಂಗಸುಗೂರು ತಾಲೂಕಿನ ಚಿಕ್ಕಹೊಸರೂರು ಗ್ರಾಮದ ಸಿದ್ದರಾಮಯ್ಯ ಅಭಿಮಾನಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಶರಣು ಕಡ್ಡೋಣಿ ಮಾಜಿ ಸಿಎಂಗೆ ಆಹ್ವಾನ ನೀಡಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಜಿಲ್ಲೆಯ ಸಿಂಧನೂರು ಮತ್ತು ರಾಯಚೂರು ನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.
ಹೆಲಿಕಾಪ್ಟರ್ ಆಫರ್
ಇನ್ನು ಕಳೆದ ಬಾರಿ ಸಿದ್ದರಾಮಯ್ಯ ಸ್ಪರ್ಧಿಸಿ ಗೆದ್ದಿದ್ದ ಬಾದಾಮಿ ಕ್ಷೇತ್ರದ ಜನತೆ ಕೂಡ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದರು. ಸಿದ್ದರಾಮಯ್ಯ ಕ್ಷೇತ್ರ ದೂರ, ಭೇಟಿ ನೀಡಲಾಗುವುದಿಲ್ಲ ಎಂದು ಹೇಳಿದ್ದಕ್ಕೆ, ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ನಾವೆಲ್ಲಾ ಚಂದಾ ಎತ್ತಿ ಸಿದ್ದರಾಮಯ್ಯನವರಿಗೆ ಹೆಲಿಕಾಪ್ಟರ್ ಖರೀದಿಸಿಕೊಡುತ್ತೇವೆ ಎಂದು ಘೋಷಿಸಿದ್ದರು. ಆದರೆ ಸಿದ್ದರಾಮಯ್ಯ ವಯಸ್ಸಿನ ಕಾರಣ ನೀಡಿ ಕೋಲಾರ, ಮೈಸೂರಿನ ಕಡೆಗೆ ಗಮನ ಹರಿಸಿದ್ದರು. ಇದೀಗ ಕೋಲಾರವನ್ನು ಫೈನಲ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ