ಬೆಂಗಳೂರು; ಗೋಹತ್ಯೆ ವಿಧೇಯಕ ಅಂಗೀಕಾರ ವಿಚಾರವಾಗಿ ವಿಧಾನಪರಿಷತ್ನಲ್ಲಿ ಇಂದು ಗದ್ದಲ ನಡೆಯಿತು. ನಿಯಮಬಾಹಿರವಾಗಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಮಾಡಲಾಗಿದೆ ಎಂದು ಕಾಂಗ್ರೆಸ್ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಸದನ ಕಲಾಪ ಸಲಹಾ ಸಮಿತಿ ಸಭೆಯ ಬಳಿಕವೂ ಕಾಂಗ್ರೆಸ್ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದರು.
ಬಳಿಕ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಗೋ ಹತ್ಯೆ ನಿಷೇಧ ವಿಚಾರವಾಗಿ ಈಗ ಸಭೆಯಲ್ಲಿ ಚರ್ಚೆಯಾಗಿದೆ. ವಿಧೇಯಕಕ್ಕೆ ಸಂಬಂಧಿಸಿದಂತೆ ನಾನು ವಿಡಿಯೋ, ಆಡಿಯೋಗಳನ್ನು ಕೇಳಿದ್ದೇನೆ. ತಮ್ಮ ಸ್ಥಾನದಲ್ಲಿ ನಿಂತು ವಿಧೇಯಕ ಮಂಡಿಸಬೇಕು. ನಿಯಮಾವಳಿಯ ಮೂಲಕ ನಾವು ವಿಧೇಯಕ ಮಂಡಿಸಬೇಕು. ನಿಮ್ಮ ಬಳಿ ಇರುವ ದಾಖಲೆಗಳನ್ನು ನೀಡಿ. ಅದನ್ನು ಪರಿಶೀಲನೆ ಮಾಡಿ ನಾವು ಚರ್ಚೆ ಮಾಡುತ್ತೇವೆ. ತಮ್ಮ ಸ್ಥಾನದಲ್ಲಿ ನಿಂತು ಚರ್ಚೆಗೆ ಕೇಳಬೇಕು ಎಂದು ಸಭಾಪತಿ ಹೊರಟ್ಟಿ ಹೇಳಿದರು. ವಿಧೇಯಕ ಅಂಗೀಕಾರ ಸಂದರ್ಭದಲ್ಲಿ ತಮ್ಮ ಸ್ಥಾನದಲ್ಲಿ ನಿಂತು ಮತಕ್ಕೆ ಬೇಡಿಕೆ ಇಟ್ಟಿಲ್ಲ. ಬಾವಿಯೊಳಗೆ ಬಂದು ಬೇಡಿಕೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ವಿಧೇಯಕ ಅಂಗೀಕಾರ ಪ್ರಕ್ರಿಯೆ ಸರಿಯಾಗಿದೆ ಎಂದು ಸಭಾಪತಿ ರೂಲಿಂಗ್ ಕೊಟ್ಟರು. ಆದರೆ ನಾನು ಸದಸ್ಯರ ಸ್ಥಳದಲ್ಲಿ ನಿಂತು ಮತಕ್ಕೆ ಹಾಕುವಂತೆ ಬೇಡಿಕೆ ಇಟ್ಟಿದ್ದೇವೆ. ನಜೀರ್ ಅಹ್ಮದ್ ಹಾಗೂ ಸಿಎಂ ಇಬ್ರಾಹಿಂ ತಮ್ಮ ಸ್ಥಾನದಲ್ಲಿ ಮತಕ್ಕೆ ಹಾಕುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಎಂ. ನಾರಾಯಣಸ್ವಾಮಿ ಹೇಳಿದರು. ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ಕೊಡದೆ ವಿಧೇಯಕ ಮಂಡನೆ ಮಾಡಲಾಗಿದೆ ಎಂದು ಆರೋಪಿಸಿದರು.
ಇದನ್ನು ಓದಿ: ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಗಲಾಟೆ; ಆನ್ಲೈನ್ ಪೇಮೆಂಟ್ ವಿಚಾರಕ್ಕೆ ಅಧಿಕಾರಿಗಳ ವಿರುದ್ಧ ರೈತರು ಗರಂ
ಕಾಂಗ್ರೆಸ್ ಸದಸ್ಯರ ನಡೆಗೆ ಸಭಾಪತಿ ಹೊರಟ್ಟಿ ಆಕ್ಷೇಪ ಪಡಿಸಿದರು. ರೂಲಿಂಗ್ ಕೊಟ್ಟ ಬಳಿಕ ಪ್ರಶ್ನೆ ಮಾಡುವುದು ಸರಿಯಲ್ಲ. ನಿಯಮದ ಪ್ರಕಾರ ನಿಮ್ಮ ಅಭಿಪ್ರಾಯ ತಿಳಿಸಿ ಪರಿಶೀಲನೆ ನಡೆಸುತ್ತೇನೆ ಎಂದು ಸಭಾಪತಿ ಹೇಳಿದರು. ರೂಲಿಂಗ್ ಮೇಲೆ ಚರ್ಚೆ ಮಾಡುವ ಹಾಗಿಲ್ಲ ಎಂದು ಬಸವರಾಜ ಬೊಮ್ಮಾಯಿ, ಕೋಟಾ ಶ್ರೀನಿವಾಸ ಪೂಜಾರಿ ಸಹ ಧ್ವನಿಗೂಡಿಸಿದರು. ಸಭಾಪತಿ ರೂಲಿಂಗ್ ತೃಪ್ತಿಗೊಳ್ಳದ ಕಾಂಗ್ರೆಸ್ ಸದಸ್ಯರು ಬಾವಿಗೆ ಇಳಿದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಸರ್ಕಾರಕ್ಕೆ ದಿಕ್ಕಾರ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ರೈತ ವಿರೋಧಿ ಸರ್ಕಾರ ಎಂದು ದಿಕ್ಕಾರ ಕೂಗಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ