ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಸುಸೂತ್ರವಾಗಿ ಮುಗಿದಿದೆ. ರಾಜ್ಯದ ಜನತೆ ಹಾಗೂ 2600ಕ್ಕೂ ಹೆಚ್ಚು ಅಭ್ಯರ್ಥಿಗಳು ಶನಿವಾರ ಹೊರಬರುವ ಫಲಿತಾಂಶದ (Election Results) ಕಡೆಗೆ ಎದುರು ನೋಡುತ್ತಿದ್ದಾರೆ. ಆದರೆ ಫಲಿತಾಂಶಕ್ಕೂ ಮುನ್ನವೇ ಆಪರೇಷನ್ ಕಮಲ (Operation Kamala) ಮಾಡುವ ಬಗೆಗಿನ ಮಾತುಗಳು ಕೇಳಿಬಂದಿವೆ. ಕಳೆದ ಬಾರಿ ಸಂಪೂರ್ಣ ಬಹುಮತ ಪಡೆಯಲಾಗದ ಬಿಜೆಪಿ ಆಪರೇಷನ್ ಕಮಲದ ಮೂಲಕ 16 ಶಾಸಕರನ್ನು ಪಕ್ಷಾಂತರ ಮಾಡಿಸಿ ಸರ್ಕಾರ ರಚಿಸಿತ್ತು. ಇದೀಗ ಫಲಿತಾಂಶಕ್ಕೂ ಮುನ್ನವೇ ಕೆಲವು ನಾಯಕರು ಆಪರೇಷನ್ ಕಮಲದ ಮುನ್ಸೂಚನೆ ನೀಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಬಿಜೆಪಿಗೆ ಪೂರ್ಣ ಬಹುಮತ ಬರದಿದ್ದರೆ ಆಪರೇಷನ್ ಕಮಲ ನಡೆಸುವ ಸಾಧ್ಯತೆ ಇದೆ. ಆದರೆ ಹಾಗೆ ಆಗುವುದಿಲ್ಲ. ಬಿಜೆಪಿಗೆ 120 ಸ್ಥಾನ ದೊರೆಯಲಿದೆ. ಕಾಂಗ್ರೆಸ್ 85 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಲಿದೆ. ಅದರಲ್ಲೂ ಇಪ್ಪತ್ತು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಅವರ ಪಕ್ಷಕ್ಕೆ ಅಧಿಕಾರ ದೊರೆಯದಿದ್ದರೆ ಅವರು ತಾನೇ ಏನೂ ಮಾಡುತ್ತಾರೆ. ಪಕ್ಷಕ್ಕೆ ರಾಜೀನಾಮೆ ಕೊಟ್ಟು ಅಧಿಕಾರ ಇರುವವರ ಕಡೆಗೆ ಬರುತ್ತಾರೆ ಎಂದು ಹೇಳಿದ್ದಾರೆಂದು ಟಿವಿ9 ಕನ್ನಡ ವರದಿ ಮಾಡಿದೆ.
ಗೋವಾದಂತೆ ರಾಜ್ಯದಲ್ಲೂ ಆಗಲಿದೆ
ಕಳೆದ ಚುನಾವಣೆಯಲ್ಲಿ ಗೋವಾದಲ್ಲಿ ಆದ ಹಾಗೆಯೇ ಕರ್ನಾಟಕದಲ್ಲೂ ಆಗಲಿದೆ ಆದರೆ ಯಾರ ನೇತೃತ್ವದಲ್ಲಿ ಇದೆಲ್ಲಾ ನಡೆಯಲಿದೆ ಎಂಬುದು ಗೊತ್ತಿಲ್ಲ. ಆದರೆ ಮತ್ತೆ ಇಪ್ಪತ್ತು ಶಾಸಕರು ಬಿಜೆಪಿಗೆ ಬರಲಿದ್ದಾರೆ. ನಾನು ಪಕ್ಷೇತರನಾಗಿಯೇ ಉಳಿಯುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Elections: ಈ ಸಲ ಕಪ್ ನಮ್ದೇ ಎಂದ ಆರ್ ಅಶೋಕ್‌ಗೆ ಕೌಂಟರ್ ಕೊಟ್ಟ ಕಾಂಗ್ರೆಸ್ ನಾಯಕ
ಲಖನ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ, 20 ಜನ ಶಾಸಕರು ಹೋದರೂ ಬಿಜೆಪಿ ಬಹುಮತ ಪಡೆಯಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅವರು ಸರ್ಕಾರ ರಚನೆ ಮಾಡುವುದಕ್ಕೆ ಶೇಕಡಾ 35ರಷ್ಟು ಶಾಸಕರು ರಾಜೀನಾಮೆ ಕೂಡಬೇಕಾಗಬೇಕಾಗುತ್ತದೆ. ಆದರೆ ಅಷ್ಟು ಶಾಸಕರನ್ನು ಸೇರಿಸಲು ಅವರಿಂದ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಬಿಜೆಪಿಯವರು ಆಪರೇಷನ್ ಕಮಲ ಸದ್ಯಕ್ಕೆ ಮಾಡುವುದಿಲ್ಲ. ಲೋಕಸಭೆ ಚುನಾವಣೆವರೆಗೆ ಶಾಂತವಾಗಿ ಇರುತ್ತಾರೆ ಈ ಅವಧಿಯಲ್ಲಿ ನಾವು ಗಟ್ಟಿಯಾಗಬೇಕು. ಈ ವಿಧಾನಸಭೆ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೆ ಒಂದು ಮಹತ್ವದ ತಿರುವು ನೀಡಲಿದೆ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಪಕ್ಷೇತರರ ಮೇಲೆ ಬಿಜೆಪಿ ಕಣ್ಣು
ಸಮೀಕ್ಷೆಗಳ ಪ್ರಕಾರ ಈ ಬಾರಿ ಸಂಪೂರ್ಣ ಬಹುಮತ ಒಂದು ಪಕ್ಷಕ್ಕೆ ಸಿಗುವುದು ಅನುಮಾನವಾಗಿದೆ. ಹಾಗಾಗಿ ಬಿಜೆಪಿ ಆಪರೇಷನ್ ಕಮಲ ಮಾಡುವ ಯೋಜನೆಯಲ್ಲಿದೆ. ಒಂದು ವೇಳೆ ಆಪರೇಷನ್ ಕಮಲ ಅನಿವಾರ್ಯವಾದರೆ ಕಮಲ ಬಿಜೆಪಿ ಪಕ್ಷ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯುವುದಕ್ಕೂ ಮೊದಲು ಪಕ್ಷೇತರ ಶಾಸಕರನ್ನು ಸೆಳೆಯಲು ಸಜ್ಜಾಗುತ್ತಿದೆ. ಅಖಂಡ ಶ್ರೀನಿವಾಸ್ ಮೂರ್ತಿ, ಮಾಡಾಳು ಮಲ್ಲಿಕಾರ್ಜುನ, ಅರುಣ್ ಪುತ್ತಿಲ ಹಾಗೂ ಜನಾರ್ದನ ರೆಡ್ಡಿ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇವರು ಗೆಲ್ಲುವ ಸಾಧ್ಯತೆಯೂ ಹೆಚ್ಚಿದೆ. ಬಿಜೆಪಿ ಮಾತ್ರವಲ್ಲದೆ ಇವರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಕೂಡ ಪ್ರಯತ್ನಿಸಿದರು ಅಚ್ಚರಿ ಪಡಬೇಕಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ