ಅತಂತ್ರ ಫಲಿತಾಂಶದಲ್ಲಿ ಕಾಂಗ್ರೆಸ್-ಜೆಡಿಎಸ್​ಗೆ ಗದ್ದುಗೆ ಕನಸು: ದೊಡ್ಡ ಪಕ್ಷವಾದರೂ ಬಿಜೆಪಿಗಿಲ್ಲ ಅಧಿಕಾರ ಭಾಗ್ಯ


Updated:May 16, 2018, 2:21 PM IST
ಅತಂತ್ರ ಫಲಿತಾಂಶದಲ್ಲಿ ಕಾಂಗ್ರೆಸ್-ಜೆಡಿಎಸ್​ಗೆ ಗದ್ದುಗೆ ಕನಸು: ದೊಡ್ಡ ಪಕ್ಷವಾದರೂ ಬಿಜೆಪಿಗಿಲ್ಲ ಅಧಿಕಾರ ಭಾಗ್ಯ

Updated: May 16, 2018, 2:21 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಮೇ.15): ಕಳೆದೊಂದು ತಿಂಗಳಿಂದ ನಡೆದ ರಾಜ್ಯ ವಿಧಾನಸಭಾ ಚುನಾವಣಾ ಮಿನಿ ಸಮರಕ್ಕೆ ಅತಂತ್ರ ವಿಧಾನಸಭೆ ಮೂಲಕ ತೆರೆಬಿದ್ದಿದೆ. ಬಿಜೆಪಿ 104 ಕ್ಷೇತ್ರಗಳಲ್ಲಿ ಗೆದ್ದು ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿದರೆ, ಕಾಂಗ್ರೆಸ್ 78, ಜೆಡಿಎಸ್ 38, ಇತರರು 2 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಏಕೈಕ ದೊಡ್ಡ ಪಕ್ಷ ಬಿಜೆಪಿಗೆ ಟಾಂಗ್ ಕೊಟ್ಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡನೆ ಮಾಡಿವೆ.

ಬೆಳಗ್ಗೆ 8 ಗಂಟೆಗೆ ಭಾರೀ ಕುತೂಹಲದ ನಡುವೆ ಆರಂಭವಾದ ಮತ ಎಣಿಕೆ ಅಂತ್ಯದವರೆಗೆ ಅದೇ ಕುತೂಹಲ ಕಾಯ್ದುಕೊಂಡಿತ್ತು. ಆರಂಭಿಕ ಟ್ರೆಂಡ್​ನಲ್ಲೇ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ಒಂದು ಹಂತದಲ್ಲಿ 117ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಬಿಜೆಪಿ ವಲಯದಲ್ಲಿ ಸರಳ ಬಹುಮತದ ನಿರೀಕ್ಷೆಗಳು ಗರಿಗೆದರಿದ್ದವು. ಒಂದೊಂದೇ ಹಂತದ ಮತ ಎಣಿಕೆ ಮುಗಿಯುತ್ತಿದ್ದಂತೆ ಹಾವು ಏಣಿಯಾಟ ಮುಂದುವರೆದಿತ್ತು. ಬಿಜೆಪಿಯ ಮುನ್ನಡೆಯಲ್ಲಿ ಒಂದೊಂದೇ ಸ್ಥಾನ ಕುಸಿತ ಕಂಡು ಕೊನೆಗೆ 104ಕ್ಕೆ ಮುಕ್ತಾಯವಾಯಿತು.

ಅತ್ತ, 2ನೇ ಬಾರಿಗೆ ಅಧಿಕಾರದ ಗದ್ದುಗೆ ಆಸೆ ಹೊಂದಿದ್ದ ಕಾಂಗ್ರೆಸ್ ಪಾಳಯದ ಆಸೆ ಕಮರಿಹೋಗಿತ್ತು. ಕಾಂಗ್ರೆಸ್ 78 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯ್ತು. ಟಿ.ಬಿ. ಜಯಚಂದ್ರ, ಮಹದೇವಪ್ಪ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಪ್ರಮುಖ ಸಚಿವರೇ ಸೋತುಹೋದರು. ಆದರೂ ಏನಂತೆ, ಏಕೈಕ ದೊಡ್ಡಪಕ್ಷವಾದರೂ ಬಿಜೆಪಿ ಸರಳ ಬಹುಮತ ಪಡೆದಿಲ್ಲವಾದ್ದರಿಂದ ರಂಗಕ್ಕಿಳಿದ ಕಾಂಗ್ರೆಸ್, ಕೇವಲ 38 ಸ್ಥಾನ ಗೆದ್ದಿದ್ದ ಜೆಡಿಎಸ್ ಜೊತೆ ಹೊಂದಾಣಿಕೆ ಮಾತುಕತೆಗೆ ಮುಂದಾಯಿತು. ದೆಹಲಿಯಿಂದ ಸೋನಿಯಾ ಗಾಂಧಿ ಆದೇಶದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರನ್ನ ಸಂಪರ್ಕಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಆಜಾದ್,  ಗೆಹ್ಲೋಟ್ ಮೈತ್ರಿ ಮಾತುಕತೆ ಕುದುರಿಸಿದರು. ಅತ್ತ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳದಂತೆ ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ ಸೇರಿದಂತೆ ಕೃತೀಯ ರಂಗದ ನಾಯಕರಿಂದಲೂ ದೇವೇಗೌಡರ ಮೇಲೆ ಒತ್ತಡ ಬಂದಿತ್ತು. ಅಂತಿಮವಾಗಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಜೆಡಿಎಸ್ ನಿರ್ಧಾರ ಕೈಗೊಂಡಿತು.

ಈ ನಿರ್ಣಯದ ಬೆನ್ನಲ್ಲೇ ರಾಜಭವನಕ್ಕೆ ತೆರಳಿದ ಉಭಯ ಪಕ್ಷಗಳು ನಾಯಕರು ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಅವಕಾಶ ಕೊಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಎಲ್ಲ ಕಾಂಗ್ರೆಸ್ ನಾಯಕರೂ ನಮ್ಮನ್ನ ಬೆಂಬಲಿಸಿದ್ದಾರೆ. ಬೆಂಬಲ ಪತ್ರವನ್ನ ಪಕ್ಷದ ವರಿಷ್ಠರಾದ ದೇವೇಗೌಡರಿಗೆ ನೀಡಿದ್ದರು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ, ರಾಜ್ಯಪಾಲರನ್ನ ಭೇಟಿ ಮಾಡಿದ್ದ ಬಿಜೆಪಿ ನಾಯಕರು, ಸರ್ಕಾರ ಚನೆಗೆ ನಮಗೆ ಅವಕಾಶ ಕೊಡಬೇಕು ಮತ್ತು ಬಹುಮತ ಸಾಬೀತುಪಡಿಸಲು 7 ದಿನ ಅವಕಾಶ ಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೂ ಹಠ ಬಿಡದ ಬಿಜೆಪಿ ನಾಯಕರು ಶತಾಯಗತಾಯ ಅಧಿಕಾರದ ಗದ್ದುಗೆ ಏರಲು ಪ್ರಯತ್ನ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ. ಈ ಕುರಿತಂತೆ ಬಿಜೆಪಿ ಕಚೇರಿಯಲ್ಲಿ ಒಂದು ಸುತ್ತಿನ ಸಭೆಯನ್ನೂ ನಡೆಸಿರುವ ಬಿಜೆಪಿ ನಾಯಕರು ರಣತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರಿಗೆ ಗಾಳ ಹಾಕಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಮತ್ತಷ್ಟು ಹೈಡ್ರಾಮಾ ನಡೆಯುವ ಎಲ್ಲ ಸಾಧ್ಯತೆ ಕಂಡುಬರುತ್ತಿದೆ.
First published:May 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ