ಮುದ್ದು ಕಂದಮ್ಮನ ಮೇಲೆ ಕಾಮುಕನ ಅಟ್ಟಾಹಾಸ : ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಸಾರ್ವಜನಿಕರ ಆಗ್ರಹ

ಬೆಳಗಾವಿ ಜಿಲ್ಲೆ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 11ರಂದು ಏಳು ವರ್ಷದ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರ ಪ್ರಕರಣ ಖಂಡಿಸಿ ಇಂದು ಬೆಳಗಾವಿಯಲ್ಲಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು

news18-kannada
Updated:December 13, 2019, 7:01 PM IST
ಮುದ್ದು ಕಂದಮ್ಮನ ಮೇಲೆ ಕಾಮುಕನ ಅಟ್ಟಾಹಾಸ : ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಸಾರ್ವಜನಿಕರ ಆಗ್ರಹ
ಆರೋಪಿ ಹಾಗೂ ಪ್ರತಿಭಟನೆ ನಡೆಸುತ್ತಿರುವ ಜನರು
  • Share this:
ಬೆಳಗಾವಿ(ಡಿ.13) : ನಿರ್ಭಯಾ, ದಿಶಾ ಅತ್ಯಾಚಾರ ಕೊಲೆ ಪ್ರಕರಣದಿಂದ ಜನ ರೊಚ್ಚಿಗೆದ್ದಿದ್ದಾರೆ. ಮೊನ್ನೆಯಷ್ಟೇ ತೆಲಂಗಾಣದಲ್ಲಿ ಅತ್ಯಾಚಾರಿಗಳ ಎ‌‌ನ್‌ಕೌಂಟರ್ ಆಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದೆ. 7ವರ್ಷದ ಮುದ್ದು ಕಂದಮ್ಮನ ಮೇಲೆ ಕಾಮುಕ ಅಟ್ಟಹಾಸ ಮೆರೆದಿದ್ದಾನೆ. 

ಬೆಳಗಾವಿ ಜಿಲ್ಲೆ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 11ರಂದು ಏಳು ವರ್ಷದ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರ ಪ್ರಕರಣ ಖಂಡಿಸಿ ಇಂದು ಬೆಳಗಾವಿಯಲ್ಲಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು. ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಸುನೀಲ್‌ ತಂದೆ ಬಾಳು ಬೈರು ಬಾಯ್‌ ನಾಯಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಯಿಂದ ಅಪಹರಣಕ್ಕೆ ಯತ್ನಿಸಿದ್ದು ಆರೋಪಿಯ ತಂದೆ, ತಾಯಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಧರಣಿನಿರತರು ಆಗ್ರಹಿಸಿದ್ದರು.

ಕಾಕತಿ ಠಾಣಾ ವ್ಯಾಪ್ತಿಯ ಗ್ರಾಮದಿಂದ ಆಗಮಿಸಿದ್ದ ಗ್ರಾಮಸ್ಥರು ಮೊದಲು ಬೆಳಗಾವಿ ನಗರದ ಬೀಮ್ಸ್ ಆಸ್ಪತ್ರೆಗೆ ಮುತ್ತಿಗೆ ಹಾಕಿದ್ರು. ಸಂತ್ರಸ್ತ ಬಾಲಕಿ ಹಾಗೂ ಅತ್ಯಾಚಾರ ಮಾಡಿದ ಆರೋಪಿಯ ವೈದ್ಯಕೀಯ ಪರೀಕ್ಷೆ ಹಾಗೂ ಡಿಎನ್‌ಎ ವರದಿಯನ್ನು ಶೀಘ್ರಗತಿಯಲ್ಲಿ ಸಲ್ಲಿಸಬೇಕೆಂದು ಆಗ್ರಹಿಸಿದರು. ಬಳಿಕ ಬೀಮ್ಸ್ ಆಸ್ಪತ್ರೆಯಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ಬೃಹತ್ ಪ್ರತಿಭಟನೆ ರ‍್ಯಾಲಿ ನಡೆಸಿ ಬೆಳಗಾವಿ ಡಿಸಿ ಕಚೇರಿ ಎದುರು ಪ್ರತಿಭಟ‌ನೆ ‌‌‌‌ನಡೆಸಿದರು.

ಕಾಕತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣದ ತನಿಖೆ ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಿದರು.

ಇದನ್ನೂ ಓದಿ : ಅಪ್ರಾಪ್ತ ಪ್ರೇಮಿಗಳ ಕಿಚ್ಚಿಗೆ ಅಮಾಯಕ ಬಾಲಕಿ ಬಲಿ : ಅಫಜಲಪುರಲ್ಲೊಂದು ಹೃದಯ ವಿದ್ರಾವಕ ಘಟನೆ

ಇನ್ನು ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಲೋಕೇಶ್​​​ಕುಮಾರ್, ಆರೋಪಿ ಸುನೀಲ್ ತಂದೆ ಬಾಲಕಿಯನ್ನು ಅಪಹರಣಕ್ಕೆ ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತ ಕುಟುಂಬ ಸದಸ್ಯರು ದೂರು ನೀಡಿದ್ರೆ ಆರೋಪಿಯ ತಂದೆಯ ವಿರುದ್ಧವೂ ಪ್ರಕರಣ ದಾಖಲಿಸುತ್ತೇವೆ. ನ್ಯಾಯಾಲಯಕ್ಕೆ ಶೀಘ್ರವೇ ಚಾರ್ಜ್‌ಶೀಟ್ ಸಲ್ಲಿಸೋದಾಗಿ ಹೇಳಿಕೆ ನೀಡಿದ್ದಾರೆ.

ಇನ್ನು ಅತ್ಯಾಚಾರ ಆರೋಪಿ ಸುನೀಲ್‌ನನ್ನು ನಿನ್ನೆ ಬೆಳಗಾವಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಸಾರ್ವಜನಿಕರು ಹಲ್ಲೆಗೆ ಯತ್ನ ನಡೆಸಿದ್ರು. ಇಂದೂ ಸಹ ಸಾರ್ವಜನಿಕರ ಆಕ್ರೋಶದ ಕಿಚ್ಚು ಕಡಿಮೆಯಾಗಿರಲಿಲ್ಲ. ಅದೇನೇ ಇರಲಿ ಅತ್ಯಾಚಾರ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಕಠಿಣ ಶಿಕ್ಷೆಗೊಳಪಡಿಸಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
First published: December 13, 2019, 7:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading