ಚಾಮರಾಜನಗರ (ಏ.17) ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಕಲ್ಲು ತೂರಾಟದಿಂದ ಸಾರಿಗೆ ಸಂಸ್ಥೆಯ ಚಾಲಕ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ದ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಘಟನೆಗೆ ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರಚೋದನೆಯೇ ಕಾರಣವಾಗಿದ್ದು ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಕೊಲೆ ಮೊಕದ್ದಮೆ ದಾಖಲಿಸುವಂತೆ ಚಾಮರಾಜನಗರ ಜಿಲ್ಲಾ ರೈತ ಸಂಘದ (ಒರಿಜಿನಲ್) ಅಧ್ಯಕ್ಷ ಕೆ.ಎಂ.ಮಾದಪ್ಪ ದೂರು ನೀಡಿದ್ದಾರೆ ಸಾರಿಗೆ ನೌಕರರ ಮುಷ್ಕರದ ನಡುವೆಯು ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಬಸ್ ಚಲಾಯಿಸುತ್ತಿದ್ದ ಚಾಲಕನ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಎದೆಗೆ ಕಲ್ಲೇಟು ಬಿದ್ದಿದ್ದರಿಂದ ಚಾಲಕ ನಬೀದ ರಸೂಲ್ ಕೆ.ಅವಟಿ ಎಂಬುವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿತ್ತು.
ಈ ಘಟನೆಗೆ ಮುಷ್ಕರದ ನೇತೃತ್ವ ವಹಿಸಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರಚೋದನೆಯೇ ಕಾರಣವಾಗಿದ್ದು ಅವರ ವಿರುದ್ದ ಕೊಲೆ ಮೊಕದ್ದಮೆ ದಾಖಲಿಸುವಂತೆ ದೂರು ನೀಡಲಾಗಿದೆ. ಕೋಡಿಹಳ್ಳಿ ಚಂದ್ರ ಶೇಖರ್ ಅವರ ಸಂಚು ಹಾಗು ಪಿತೂರಿಗಳಿಂದ ರೈತರು ಈಗಾಗಲೇ ವಂಚನೆಗೆ ಒಳಗಾಗಿದ್ದಾರೆ, ಇದೀಗ ಸಾರಿಗೆ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ಅವರ ವಿಷಜಾಲಕ್ಕೆ ಸಿಲುಕಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಎಂ.ಮಾದಪ್ಪ ಆರೋಪಿಸಿದ್ದಾರೆ
ಕೋಡಿಹಳ್ಳಿ ಚಂದ್ರಶೇಖರ್ ಅವರು ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ ನೀಡಿ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ, ಸಣ್ಣ ರೈತರು ಹೂ, ಹಣ್ಣು, ತರಕಾರಿ, ರೇಷ್ಮೆ ಮತ್ತಿತರ ಬೆಳೆಗಳ ಸಾಗಾಟಕ್ಕೆ ಸಾರಿಗೆ ಬಸ್ ಗಳನ್ನೆ ಅವಲಂಬಿಸಿದ್ದರು. ಆದರೆ ಈಗ ಸಾರಿಗೆ ನೌಕರರ ಮುಷ್ಕರದಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಭಟ್ಕಳದಲ್ಲಿ ನೇಮೋತ್ಸವ; ತುಳು ನಾಡಿನ ಹಬ್ಬ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ
ರೈತರು ಹಾಗೂ ಪ್ರಯಾಣಿಕರ ಕಷ್ಟ ನೋಡಲಾಗದೆ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಂಸ್ಥೆಗಳ ಚಾಲಕ ಹಾಗು ನಿರ್ವಾಹಕರ ಮೇಲೆ ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರಚೋದನೆಯಿಮದ ಹಲ್ಲೆಗಳಾಗುತ್ತಿವೆ. ಈ ಪ್ರಚೋದನೆಯಿಂದ ಚಾಲಕ ಸಾವನ್ನಪ್ಪುವ ಮೂಲಕ ಹೋರಾಟಗಳ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದು ದಾಖಲಾಗಿದೆ. ಈ ಸಾವಿಗೆ ಕೋಡಿಹಳ್ಳಿ ಚಂದ್ರಶೇಖರ್ ಹಾಗು ಅವರ ಆಪ್ತರು ಕಾರಣವಾಗಿದ್ದು ಕೂಡಲೇ ಅವರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬೇಕು, ಚಾಲಕನ ಸಾವಿಗೆ ಕಾರಣವಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕೂಡಲೇ ಬಂಧಿಸಬೇಕು ಈ ಮೂಲಕ ಇನ್ನು ಮುಂದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಬೇಕು ಎಂದು ಕೆ.ಎಂ.ಮಾದಪ್ಪ ಆಗ್ರಹಿಸಿದ್ದಾರೆ
ಸಾರಿಗೆ ನೌಕರರ ಮುಷ್ಕರದಿಂದ ರೈತರು ಹೆಚ್ಚಿನ ರೀತಿಯಲ್ಲಿ ತೊಂದರೆ ಅನುಭವಿಸುವಂತಾಗಿದೆ, ರೈತರು ಹಾಗು ಪ್ರಯಾಣಿಕರ ಹಿತದೃಷ್ಟಿಯಿಂದ ಸಾರಿಗೆ ಸಂಸ್ಥೆಗಳ ನೌಕರರು ತಮ್ಮ ಮುಷ್ಕರ ವಾಪಸ್ ಪಡೆದು ಮತ್ತೆ ಕೆಲಸಕ್ಕೆ ಹಾಜರಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ
(ವರದಿ: ಎಸ್.ಎಂ.ನಂದೀಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ