ಕೊರಟಗೆರೆಯಲ್ಲಿ ಮನು ಹತ್ಯೆ ಪ್ರಕರಣ: ಘಟನೆಯ ಸುತ್ತ ಒಂದು ವಿಶೇಷ ವರದಿ

ಯುವತಿಯೂ ಕೂಡ 'ನಾನೇ ಇಷ್ಟಪಟ್ಟು ಮನು ಜೊತೆ ಬಂದಿದ್ದೇನೆ. ಮದುವೆ ಆಗಿದ್ದೇನೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ' ಎಂದು ಹೇಳಿದ್ದಳು.

Latha CG | news18india
Updated:January 10, 2019, 5:37 PM IST
ಕೊರಟಗೆರೆಯಲ್ಲಿ ಮನು ಹತ್ಯೆ ಪ್ರಕರಣ: ಘಟನೆಯ ಸುತ್ತ ಒಂದು ವಿಶೇಷ ವರದಿ
ಮನು ಮತ್ತು ಪಲ್ಲವಿ
Latha CG | news18india
Updated: January 10, 2019, 5:37 PM IST
ಬೆಂಗಳೂರು,(ಜ.10) :ಜೆಡಿಎಸ್​ ಶಾಸಕ ಗೋಪಾಲಯ್ಯ ಅವರ ಸಹೋದರನ ಮಗಳನ್ನು ಮದುವೆಯಾಗಿದ್ದ ರೌಡಿ ಶೀಟರ್​ ಮನುವನ್ನು ಜ. 7 ರ ತಡರಾತ್ರಿ ತುಮಕೂರಿನ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಹಲವು ಅನುಮಾನಗಳನ್ನು ಸೃಷ್ಟಿಸಿರುವ ಈ ಘಟನೆಯ ಹಿಂದೆ ಪ್ರಭಾವಿ ಶಾಸಕರ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಮರ್ಯಾದಾ ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಇದೀಗ 8 ಶಂಕಿತ ಆರೋಪಿಗಳನ್ನು ಬಂಧಿಸಿದ್ಧಾರೆ. ಈ ಪ್ರಕರಣದಲ್ಲಿ ರಾಜಕೀಯ ನಾಯಕರ ಹೆಸರು ತಳುಕುಹಾಕಿಕೊಂಡಿರುವುದರಿಂದ ಸಿಬಿಐ ತನಿಖೆಯಾಗಲಿ ಎಂದು ಬಿಜೆಪಿ ಆಗ್ರಹಿಸುತ್ತಿದೆ.

ಪ್ರಕರಣದ ಹಿನ್ನೆಲೆ:

ಕೊಲೆಯಾದ ಮನು ಶಾಸಕ ಗೋಪಾಲಯ್ಯ ಅವರ ಸಹೋದರ ಬಸವರಾಜ್​ ಮನೆಯಲ್ಲಿ ಕಾರು ಚಾಲಕನಾಗಿದ್ದ. ಹಲವು ವರ್ಷಗಳಿಂದ ಜೊತೆಗಿದ್ದ ಕಾರಣ ಮಾಲೀಕನ ಮಗಳ ಜೊತೆ ಸಲುಗೆ ಬೆಳೆದಿತ್ತು. ಮನುಗೆ ಈ ಹಿಂದೆ ವಿವಾಹವಾಗಿದ್ದರೂ ಪಲ್ಲವಿಯನ್ನು ಪ್ರೀತಿಸುತ್ತಿದ್ದ.

2018ರ ಅಕ್ಟೋಬರ್‌ 22 ರಂದು ಬೆಳಗ್ಗೆ ಕಾಲೇಜಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಪಲ್ಲವಿ ಮನೆಗೆ ವಾಪಸ್‌ ಬಂದಿರಲಿಲ್ಲ. ಆಕೆಗಾಗಿ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಅ.25ರಂದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ತಂದೆ ಬಸವರಾಜು ಅವರು ನಾಪತ್ತೆ ದೂರು ದಾಖಲಿಸಿದ್ದರು.

ಕಾರು ಚಾಲಕ ಮನು ಕೂಡ ಅದೇ ದಿನ ರಾತ್ರಿ (ಅ.22) ನಾಪತ್ತೆಯಾಗಿರುವುದು ಪಲ್ಲವಿಯ ತಂದೆ ಬಸವರಾಜ್​ ಗಮನಕ್ಕೆ ಬಂದಿತು. ಇಬ್ಬರೂ ಜೊತೆಯಾಗಿ ಹೋಗಿರಬಹುದು ಎಂಬ ಶಂಕೆ ಮೂಡಿತ್ತು. ಅವರ ಅನುಮಾನ ನಿಜವಾಗಿತ್ತು. ತಮ್ಮ ಮಗಳು ಪಲ್ಲವಿ ಕಾರು ಚಾಲಕ ಮನು ಜೊತೆ ಪರಾರಿಯಾಗಿದ್ದಳು.

ಫೇಸ್​ಬುಕ್​ ವಿಡಿಯೋ

ನಾಪತ್ತೆಯಾದ ಕೆಲವು ದಿನಗಳ ಬಳಿಕ ಮನು ಮತ್ತು ಪಲ್ಲವಿ ಇಬ್ಬರು ಜೊತೆಯಾಗಿರುವ ವಿಡಿಯೋವೊಂದನ್ನು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು. ಪಲ್ಲವಿಯನ್ನು ವಿವಾಹವಾಗಿರುವ ವಿಚಾರವನ್ನು ಮನು ಕೆಲ ದಿನಗಳ ಬಳಿಕ ತನ್ನ ಫೇಸ್​ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದ.
Loading...

‘ಯುವತಿ ತಂದೆ ಕಡೆಯವರಿಂದ ನನಗೆ ಪ್ರಾಣ ಬೆದರಿಕೆ ಇದೆ. ಹತ್ಯೆ ಮಾಡಲು ನನ್ನನ್ನು ಹುಡುಕಾಡುತ್ತಿದ್ದಾರೆ. ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದೇವೆ. ನಮಗೆ ರಕ್ಷಣೆ ಕೊಡಿ. ನನಗೆ ಏನಾದರೂ ತೊಂದರೆಯಾದರೆ ಯುವತಿ ಮನೆಯವರೇ ಕಾರಣ. ಕಿರಣ್ ಎಂಬಾತ ನನ್ನನ್ನು ಹುಡುಕುತ್ತಿದ್ದಾನೆ. ಇದೊಂದು ಸಲ ನಮ್ಮನ್ನು ಬಿಟ್ಟುಬಿಡಿ’ ಎಂದು ಮೊಬೈಲ್​ನಲ್ಲಿ ವಿಡಿಯೋ ಮಾಡಿ ಫೇಸ್​ಬುಕ್​ಗೆ ಅಪ್​ಲೋಡ್ ಮಾಡಿದ್ದ. ರಕ್ಷಣೆ ಒದಗಿಸುವಂತೆ ನ್ಯಾಯಾಧೀಶರು ಹಾಗೂ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದ.

ಇದನ್ನೂ ಓದಿ: ಜೆಡಿಎಸ್ ಶಾಸಕರ ಸೋದರನ ಮಗಳನ್ನು ಲವ್ ಮಾಡಿ ವರಿಸಿದ್ದ ಡ್ರೈವರ್ ಮನು ಬರ್ಬರ ಹತ್ಯೆ

ಯುವತಿಯೂ ಕೂಡ 'ನಾನೇ ಇಷ್ ಪಟ್ಟು ಮನು ಜೊತೆ ಬಂದಿದ್ದೇನೆ. ಮದುವೆ ಆಗಿದ್ದೇನೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ' ಎಂದು ಹೇಳಿದ್ದಳು.

ಮನುವಿನ ಹತ್ಯೆ:

ಬಳಿಕ ಪಲ್ಲವಿ ಮನು ಜೊತೆ ಪರಾರಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ, ಮದುವೆ ವಿಚಾರವಾಗಿ ಮಾತನಾಡುವಂತೆ ನಾಟಕವಾಡಿ, ಸೋಮವಾರ ರಾತ್ರಿ ಮನುವನ್ನು ಕರೆಯಿಸಿ ಮದ್ಯ ಕುಡಿಸಿ ನಂತರ ಕೈಕಾಲು ಕಟ್ಟಿ ಹತ್ಯೆ ಮಾಡಿ ಎಂಟು ಮಂದಿ ಪರಾರಿಯಾಗಿದ್ದರು.

ಮನೆಬಿಟ್ಟು ಹೋಗಿ ಮನುವನ್ನು ಮದುವೆಯಾದ ಯುವತಿ ಪಲ್ಲವಿ ಈಗ ಎಲ್ಲಿದ್ದಾಳೆ ಎಂಬ ಮಾಹಿತಿ ದೊರೆತಿಲ್ಲ. ಮನು ಶವ ಕೊರಟಗೆರೆ ಬಳಿ ಪತ್ತೆಯಾಗಿದೆ. ಆತನ ಜತೆಗಿದ್ದ ಯುವತಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಮರ್ಯಾದಾ ಹತ್ಯೆ ಶಂಕೆ:

ಇನ್ನೂ ಮನು ಹತ್ಯೆಯ ಹಿಂದೆ ಪಲ್ಲವಿಯ ಮನೆಯವರ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದು ಮರ್ಯಾದಾ ಹತ್ಯೆ ಪ್ರಕರಣವಾಗಿದೆ. ತಮ್ಮ ಮಗಳನ್ನು ಪ್ರೀತಿಸಿ ಕರೆದೊಯ್ದು ಮದುವೆಯಾದ ಮನುವಿನ ಮೇಲಿನ ದ್ವೇಷದಿಂದ ಕೊಲೆ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಎಂಟು ಆರೋಪಿಗಳ ಬಂಧನ:

ಮನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು ಎಂಟು ಶಂಕಿತ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುತ್ತಿದ್ದು, ಕೊಲೆ ಪ್ರಕರಣದ ಸತ್ಯಾಂಶಗಳು ಹೊರಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಬಿಐಗೆ ವಹಿಸುವಂತೆ ಬಿಜೆಪಿ ಒತ್ತಾಯ: 

ರಾಜ್ಯದಲ್ಲಿ ಮರ್ಯಾದಾ ಹತ್ಯೆ ನಡೆದಿರುವುದು ಜನರಲ್ಲಿ ಆತಂಕ ತಂದಿದೆ. ಮನು ಹತ್ಯೆ ಪ್ರಕರಣ ಮರ್ಯಾದಾ ಹತ್ಯೆ ಎನ್ನುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿ ಬಿಜೆಪಿ ನಿಯೋಗ ಡಿಜಿಪಿ ನೀಲಮಣಿ ರಾಜು ಅವರಿಗೆ ಮನವಿ ಮಾಡಿದೆ.

ಜೀವ ಬೆದರಿಕೆ ಇದೆ ಎಂದು ಗೊತ್ತಿದ್ದರೂ ಪೊಲೀಸ್​ ರಕ್ಷಣೆ ನೀಡದಿರುವುದು ರಾಜಕೀಯ ವಾಸನೆ ತರಿಸಿದೆ. ಕೊಲೆಯಾದ ಮನು ಮಾವ ಬಸವರಾಜ್​ ಆಡಳಿತ ಪಕ್ಷದ ಪ್ರಭಾವಿ ಶಾಸಕ ಗೋಪಾಲಯ್ಯ ಅವರ ಸಹೋದರ. ಈ ಮರ್ಯಾದಾ ಹತ್ಯೆ ಹಿಂದೆ ಇರುವ ರಾಜಕೀಯ ಕೈಗಳು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ