ಚಾಮರಾಜನಗರ (ನ. 27) : ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಮದ್ಯಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಸರ್ಕಾರ ಮಾಡಿದ ನಿರ್ಧಾರವಲ್ಲ, ಗ್ರಾಮಸ್ಥರೇ ಸಭೆ ಸೇರಿ ಈ ನಿರ್ಣಯ ಮಾಡಿದ್ದಾರೆ. ಇದನ್ನು ಮೀರಿ ಯಾರಾದರು ಮಾರಾಟ ಮಾಡಿದರೆ ಅಂತಹವರಿಗೆ 10 ಸಾವಿರ ರೂಪಾಯಿ ದಂಡ, ಮದ್ಯಮಾರಾಟ ಮಾಡುವವರನ್ನು ಹಿಡಿದುಕೊಟ್ಟವರಿಗೆ 5 ಸಾವಿರ ರೂಪಾಯಿ ಬಹುಮಾನ ನೀಡಲು ನಿರ್ಧರಿಸಿದ್ದಾರೆ. ಇಷ್ಟೇ ಅಲ್ಲ ಮದ್ಯ ಮಾರಾಟ ಮಾಡುವವರಿಗೆ ಪ್ರೋತ್ಸಾಹ ನೀಡಿದರೆ ಅಂತಹವರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಹಿಂದುಳಿದವರು ಹಾಗು ದಲಿತರೆ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಸಿದ್ದಯ್ಯನಪುರದ ಗ್ರಾಮದಲ್ಲಿ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು. ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಮದ್ಯ ಬೇಕಾದರೆ ಕೊಳ್ಳೇಗಾಲ ಪಟ್ಟಣಕ್ಕೆ ಹೋಗಬೇಕಿದ್ದರಿಂದ ಮದ್ಯವ್ಯಸನಿಗಳು ಗ್ರಾಮದಲ್ಲೇ ಕಾಳಸಂತೆಯಲ್ಲಿ ಸಿಗುವ ಮದ್ಯ ಖರೀದಿಸುತ್ತಿದ್ದರು. ಕುಡುಕರ ಹಾವಳಿ ಹೆಚ್ಚಾಗಿ ಗ್ರಾಮದಲ್ಲಿ ಆಗಾಗ್ಗೆ ಗಲಾಟೆಗಳು ನಡೆದು ಆಶಾಂತಿಯ ವಾತಾವರಣ ನಿರ್ಮಾಣವಾಗುತ್ತಿತ್ತು. ಜೊತೆಗೆ ಎಷ್ಟೋ ಕುಟುಂಬಗಳು ಬೀದಿಪಾಲಾಗಿದ್ದವು.
ಈ ಬಗ್ಗೆ ಕಿರಾಣಿ ಅಂಗಡಿ ಮಾಲೀಕರಿಗೆ ಮದ್ಯ ಮಾರಾಟ ಮಾಡದಂತೆ ಗ್ರಾಮಸ್ಥರು ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ವ್ಯಯ ಮಾಡುತ್ತಿದ್ದರಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಹೀಗೆ ಬಿಟ್ಟರೆ ಮತ್ತಷ್ಟು ಅನಾಹುತವಾಗುತ್ತದೆ ಎಂದು ಅರಿತ ಮಹಿಳಾ ಸಂಘಗಳು ಗ್ರಾಮದ ಯಜಮಾನರಿಗೆ ದೂರು ನೀಡಿ ಮದ್ಯಮಾರಾಟ ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿದ್ದವು
ಈ ಹಿನ್ನಲೆಯಲ್ಲಿ ಗ್ರಾಮಸ್ಥರೆಲ್ಲಾ ಸೇರಿ ನ್ಯಾಯಪಂಚಾಯ್ತಿ ನಡೆಸಿ ಗ್ರಾಮದಲ್ಲಿ ಸಂಪೂರ್ಣವಾಗಿ ಮದ್ಯ ಮಾರಾಟ ನಿಷೇಧಿಸಲು ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಮದ್ಯ ಮಾರಾಟ ಮಾಡಿದ್ರೆ ಅಂತಹವರಿಗೆ 10 ಸಾವಿರ ರೂಪಾಯಿ ದಂಡ,ಮಾರುವವರನ್ನು ಪತ್ತೆ ಹಚ್ಚಿ ಹಿಡಿದುಕೊಟ್ಟವರಿಗೆ 5 ಸಾವಿರ ರೂಪಾಯಿ ಬಹುಮಾನ ಹಾಗು ಮದ್ಯಮಾರಾಟ ಮಾಡುವವರಿಗೆ ಪ್ರೋತ್ಸಾಹ ನೀಡುವವರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಲು ಒಕ್ಕೊರಲ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನು ಓದಿ: ಸಿಎಂ ವಿರುದ್ಧ ಹೆಚ್ಚಿದ ಮುನಿಸು; ವರಿಷ್ಠರೂ ಕೆಂಗಣ್ಣು; ಇಕ್ಕಟ್ಟಿನಲ್ಲಿ ಯಡಿಯೂರಪ್ಪ
ಈ ಹಿಂದೆ ಗ್ರಾಮದ ಯಜಮಾನರಿಗೆ ಹಲವಾರು ಬಾರಿ ದೂರು ನೀಡಲಾಗಿತ್ತು. ಯಾವುದೇ ಕ್ರಮಕೈಗೊಂಡಿರಲಿಲ್ಲ. ಇದೀಗ ಹೊಸ ಯಜಮಾನರನ್ನು ಆಯ್ಕೆ ಮಾಡಿದ ಮೇಲೆ ಮಹಿಳಾ ಸಂಘಟನೆಗಳ ಒತ್ತಡ ಹೆಚ್ಚಾಯ್ತು. ಹಾಗಾಗಿ ಇದಕ್ಕೆ ಕೊನೆ ಹಾಡಬೇಕೆಂದು ನಿರ್ಧರಿಸಿ ಇಂತಹ ನಿರ್ಧಾರ ಕೈಗೊಂಡಿದ್ದೇವೆ ಎನ್ನತ್ತಾರೆ ಗ್ರಾಮದ ಯಜಮಾನರು.
ಮದ್ಯ ಮಾರಾಟ ನಿಷೇಧಿಸಿ ಸುಮ್ಮನಾಗದ ಯಜಮಾನರು ಗ್ರಾಮದ ಪ್ರಮುಖ ಸ್ಥಳಗಳು, ಕಿರಾಣಿ ಅಂಗಡಿಗಳು, ಹಾಗು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಮಾರಾಟ ನಿಷೇಧಿಸರುವ ಬಗ್ಗೆ ಭಿತ್ತಿ ಪತ್ರಗಳನ್ನು ಅಂಟಿಸಿದ್ದು ಆ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹೊರಗಿನಿಂದ ಕುಡಿದು ಬಂದು ಗಲಾಟೆ ಮಾಡುವ ಯುವಕರು ಮೇಲೂ ಕಣ್ಣಿಟ್ಟಿದ್ದಾರೆ.
(ವರದಿ: ಎಸ್.ಎಂ.ನಂದೀಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ