Wild Karnataka - ‘ವೈಲ್ಡ್ ಕರ್ನಾಟಕ’ ಸಿನಿಮಾ ನಿರ್ದೇಶಕರ ವಿರುದ್ಧ ತನಿಖೆಗೆ ಒತ್ತಾಯಿಸಿ ಸಿಎಂಗೆ ದೂರು

ರಾಜ್ಯದ ಪ್ರಕೃತಿ ಸಂಪತ್ತನ್ನ ಹೊರಜಗತ್ತಿಗೆ ತೋರಿಸುವ ಉದ್ದೇಶದಿಂದ ಸರ್ಕಾರ ಕೈಗೆತ್ತಿಕೊಂಡಿದ್ದ ವೈಲ್ಡ್ ಕರ್ನಾಟಕ ಸಿನಿಮಾ ಈಗ ವಿವಾದಕ್ಕೆ ಸಿಲುಕಿದೆ. ಚಿತ್ರೀಕರಣವಾಗಿದ್ದ ಕೆಲ ದೃಶ್ಯಗಳನ್ನ ನಿರ್ಮಾಪಕರು ವಿದೇಶೀ ಚಾನಲ್ಗಳಿಗೆ ಮಾರಾಟ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ವೈಲ್ಡ್ ಕರ್ನಾಟಕ ಸಾಕ್ಷ್ಯ ಚಿತ್ರ

ವೈಲ್ಡ್ ಕರ್ನಾಟಕ ಸಾಕ್ಷ್ಯ ಚಿತ್ರ

  • Share this:
ಬೆಂಗಳೂರು: ಕರ್ನಾಟಕದ ಪ್ರಕೃತಿ ಸೌಂದರ್ಯ, ಅರಣ್ಯದ ಸೊಬಗು ಮತ್ತು ನಮ್ಮ ರಾಜ್ಯದ ಅರಣ್ಯ ಸಂಪತ್ತು, ಪ್ರಾಣಿ ಪಕ್ಷಿ ಜಲಚರಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಡಾಕ್ಯುಮೆಂಟರಿ ಮೂವೀ ಮಾಡಿ ಅದನ್ನು ಜಗತ್ತಿಗೆ ತೋರಿಸಿ ಪ್ರವಾಸಿಗರನ್ನು ಸೆಳೆಯಲು ಸರ್ಕಾರ ಪ್ಲಾನ್ ಮಾಡಿತ್ತು. ಆದರೆ ಅದನ್ನು ಮಿಸ್​ಯೂಸ್ ಮಾಡಿ ಡೈರೆಕ್ಟರ್ಸ್ ಕೋಟ್ಯಾಂತರ ರುಪಾಯಿ ಕೊಳ್ಳೆ ಹೊಡೆದಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ರಾಜ ಗಾಂಭೀರ್ಯದಲ್ಲಿ ನಡೆದು ಬರ್ತಿರೋ ನಮ್ಮ ರಾಜ್ಯದ ರಾಜಹುಲಿ. ಎರಡು ಕಿವಿಗಳನ್ನು ಬೀಸುತ್ತ ಬರ್ತಿರೋ ಗಜರಾಜ. ಗರಿಬಿಚ್ಚಿ ಕುಣಿಯುತ್ತಿರುವ ನವಿಲು. ಮರದಿಂದ ಮರಕ್ಕೆ ಹಾರುತ್ತಿರುವ ಮಂಗಗಳು. ರೆಕ್ಕೆ ಬಿಚ್ಚಿ ಹಾರುತ್ತಿರುವ ಪಕ್ಷಿಗಳು. ಅತ್ತಲಿಂದ ಇತ್ತ ಜಿಗಿಯುತ್ತಿರುವ ಜಿಂಕೆಗಳು. ಹೀಗೆ ಕರ್ನಾಟಕದ ಪ್ರಕೃತಿ ಮತ್ತು ಕಾಡಿನ ಸೌಂದರ್ಯವನ್ನು ಈ ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಮೂವೀಯಲ್ಲಿ ಅನಾವರಣಗೊಳಿಸಲಾಗಿತ್ತು. ನಮ್ಮ ರಾಜ್ಯದ ಕಾಡುಗಳಲ್ಲಿ ಪ್ರಾಣಿಗಳು ಹೀಗಿವೆ ನಮ್ಮ ರಾಜ್ಯಕ್ಕೆ ಬನ್ನಿ ಅಂತ ಕರ್ನಾಟಕ ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರ ಕೋಟ್ಯಾಂತರ ರುಪಾಯಿ ವೆಚ್ಚ ಮಾಡಿ ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಮೂವೀ ಮಾಡಿತ್ತು.  2019ರ ಮಾರ್ಚ್ 3 ರಂದು ಚಿತ್ರ ರಿಲೀಸ್ ಆಗಿತ್ತು. ಇದಕ್ಕೆ ಮ್ಯೂಸಿಕ್ ನೀಡಿದ್ದು ಗ್ರಾಮ್ಮೀ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್‌. ಕನ್ನಡ ತಮಿಳು ತೆಲುಗು ಹಿಂದಿಯ ದೊಡ್ಡ ದೊಡ್ಡ ಸ್ಟಾರ್ ಗಳು ಇದಕ್ಕೆ ಧ್ವನಿ ನೀಡಿದ್ರು.

ಕರ್ನಾಟಕ ಸರ್ಕಾರವು ಪ್ರವಾಸೋದ್ಯಮ ಇಲಾಖೆಯನ್ನು ಅಭಿವೃದ್ಧಿಗೊಳಿಸಲು 2019 ರಲ್ಲಿ ವೈಲ್ಡ್ ಕರ್ನಾಟಕ ಅನ್ನೋ ಈ ಸಿನೆಮಾ ಮಾಡಿತ್ತು. ಇದನ್ನು ತಯಾರಿಸಲು ಮೂವರು ಫಿಲ್ಮ್ ಮೇಕರ್ಸ್​ಗೆ ಜವಾಬ್ದಾರಿ ವಹಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಡಿನಲ್ಲಿ ಚಿತ್ರೀಕರಿಸಿದ ವಿಡಿಯೋಗಳನ್ನು ಸರ್ಕಾರದ ಅನುಮತಿ ಇಲ್ಲದ ಮಾರಾಟ ಮಾಡುವಂತಿಲ್ಲ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಮೂವರು ಚಿತ್ರ ನಿರ್ಮಾಪಕರು ಸರ್ಕಾರದ ಅನುಮತಿ ಪಡೆಯದೆ ಅದನ್ನು ವಿದೇಶಿ ಚಾನೆಲ್​ಗಳಿಗೆ ಮಾರಾಟ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಒಂದು ವೇಳೆ ಅನುಮತಿಯಿಂದ ಮಾರಾಟ ಮಾಡಿದ್ರೆ ಆ ಹಣದಲ್ಲಿ ಟೈಗರ್ ಫೌಂಡೇಶನ್​ಗೆ ಪಾಲು ನೀಡಬೇಕು. ಆದರೆ ಅದು ಯಾವುದನ್ನು ಪಾಲಿಸದೆ ಕೋಟ್ಯಾಂತರ ರುಪಾಯಿಗೆ ಮಾರಾಟ ಮಾಡಿದ್ದಾರಂತೆ.

ಕೊಪ್ಪಳ ಬಳ್ಳಾರಿ ಹೊಸಪೇಟೆ ನಾಗರಹೊಳೆ ಬಂಡಿಪುರ, ಕಾರವಾರ, ನೇತ್ರಾಣಿ ಐಸ್ ಲ್ಯಾಂಡ್ ಸೇರಿದಂತೆ ಅರಣ್ಯ ಸಂಪತ್ತು ಇರುವ ಸ್ಥಳಗಳಲ್ಲಿ ಇದನ್ನು ಚಿತ್ರೀಕರಣ ಮಾಡಲಾಗಿದೆ. 400 ನಿಮಿಷಗಳಷ್ಟು ಚಿತ್ರೀಕರಣ ಮಾಡಿದ್ದಾರಂತೆ. ಅದರಲ್ಲಿ ಕೇವಲ 52 ನಿಮಿಷಗಳನ್ನು ಮಾತ್ರ ಸಿನಿಮಾಗೆ ಬಳಸಿಕೊಳ್ಳಲಾಗಿದೆ. ಉಳಿದ ವಿಡಿಯೋಗಳನ್ನು ಮಾರಾಟ ಮಾಡಿದ್ದಾರೆ ಅನ್ನೋದು ಸ್ಟೇಟ್ ವೈಲ್ಡ್ ಲೈಫ್ ಬೋರ್ಡ್ ಸದಸ್ಯ ಜೋಸೆಫ್ ಹೂವರ್ ಆರೋಪ. ಈ ಹಿನ್ನೆಲೆಯಲ್ಲಿ ಸಿಎಂಗೆ ಪತ್ರ ಬರೆಯಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸೂಕ್ತವಾದ ತನಿಖೆಗೆ ಒಳಪಡಿಸಬೇಕು‌‌ ಎಂದು ಅವರು ದೂರು ನೀಡಿದ್ದಾರೆ.

ಇದನ್ನೂ ಓದಿ: Sarpatta Parambarai Review: ಈ ಚಿತ್ರದ ಮೂಲಕ ಪಾ ರಂಜಿತ್ ಹೇಳೋಕೆ ಹೊರಟಿದ್ದೇನು ? ಪ್ರತಿರೋಧದ ಪ್ರಕ್ರಿಯೆಯ ಪರಾಮರ್ಶೆ

ನಿವೃತ್ತ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಮೋಹನ್ ರಾಜ್, ಅಮೋಘ ವರ್ಷ, ಕಲ್ಯಾಣ ವರ್ಮ ಹಾಗೂ ಶರತ್ ಚಂಪತಿ ಇವರಿಷ್ಟು ಮಂದಿ‌ ಸೇರಿಕೊಂಡು ಈ ವೈಲ್ಡ್ ಕರ್ನಾಟಕ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಈ ಬಗ್ಗೆ ಕಳೆದ ಎಂಟು ತಿಂಗಳಿನಿಂದ ಟೈಗರ್ ಫೌಂಡೇಷನ್ ಗೆ ಹಣ ನೀಡಿ ಎಂದು ವೈಲ್ಡ್ ಲೈಫ್ ಬೋರ್ಡ್ ಸದಸ್ಯರು ನಿರ್ದೇಶಕರಿಗೆ ಹೇಳುತ್ತಿದ್ದರೂ ಕುಂಟು ನೆಪ ಹೇಳಿ ಈ ನಾಲ್ವರು ತಪ್ಪಿಸಿಕೊಳ್ಳುತ್ತಿದ್ದರಂತೆ. ಈ ಅಕ್ರಮದಲ್ಲಿ ನಿವೃತ್ತ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರಂತೆ. ಅಂದಾಜು 50 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಅನ್ನೋದು ದೂರುದಾರರ ಆರೋಪ. ಈ ಹಣದ ಹಂಚಿಕೆ ವಿಚಾರದಲ್ಲಿ ಅಮೋಘ ವರ್ಷ ಮತ್ತು ಕಲ್ಯಾಣ ವರ್ಮ ಜಗಳವಾಡಿಕೊಂಡಿದ್ದು ಅದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಬಗ್ಗೆ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರನ್ನು ಕೇಳಿದ್ರೆ, ನಿಶ್ಚಿತವಾಗಿ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ದೂರು ಬಂದಿದೆ. ಒಡಂಬಡಿಕೆಯ ಮೂಲಕ ಅವರು ನಡೆದುಕೊಂಡಿರದಿದ್ದರೆ, ಶೀಘ್ರವಾಗಿ ತನಿಖೆಗೆ ಆದೇಶ ಮಾಡುತ್ತೇನೆ ಎಂದು ಸ್ಪಷ್ಟಪಡಿಸುತ್ತಾರೆ.

ಒಟ್ನಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆದು ಈಗ ಕೋಟ್ಯಾಂತರ ರೂಪಾಯಿ ಉಂಡೆನಾಮೆ ಹಾಕಲಾಗಿದೆ. ರಾಜ್ಯದ ಅರಣ್ಯ ಸಂಪತ್ತನ್ನು ಬಳಸಿಕೊಂಡು, ಪ್ರವಾಸಿಗರನ್ನು ಸೆಳೆದು ರಾಜ್ಯದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಇರಾದೆಯಲ್ಲಿದ್ದ ಅರಣ್ಯ ಇಲಾಖೆಯ ಎಲ್ಲಾ ಲೆಕ್ಕಾಚಾರಗಳು ಈಗ ತಳಗೆಳಗಾಗಿವೆ. ಈ ಬಗ್ಗೆ ಸರ್ಕಾರ ಆದಷ್ಟು ಬೇಗ ತನಿಖೆಗೆ ಆದೇಶಿಸಿ ಈ ಪ್ರಕರಣದ ಸತ್ಯಾಸತ್ಯತೆ ಹೊರಗೆಡವಬೇಕು ಎಂಬುದೇ ನಮ್ಮ ಆಶಯ.

ವರದಿ - ಆಶಿಕ್ ಮುಲ್ಕಿ
Published by:Vijayasarthy SN
First published: