ಬೆಂಗಳೂರು: ಉತ್ತರ ಭಾರತದ (North India) ಪ್ರದೇಶಗಳಲ್ಲಿ ಬೀಸುತ್ತಿರುವ ತೀವ್ರವಾದ ಶೀತ ಗಾಳಿಯ (Cold Wave) ಪ್ರಭಾವವು ಕರ್ನಾಟಕದ (Karnataka) ಜಿಲ್ಲೆಗಳ ಮೇಲೆ ಮುಂದಿನ 24 ಗಂಟೆಗಳಲ್ಲಿ ತೀವ್ರವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಕನಿಷ್ಠ ಎರಡು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 4.5 ಡಿಗ್ರಿಯಿಂದ 6.5 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ಸಾಧ್ಯತೆ ಹಿನ್ನೆಲೆ ಶೀತ ಅಲೆಯ ಎಚ್ಚರಿಕೆ (Cold Wave Alert) ನೀಡಲಾಗುತ್ತದೆ ಎಂದು IMD ಬೆಂಗಳೂರಿನ ವಿಜ್ಞಾನಿ ಪ್ರಸಾದ್ ತಿಳಿಸಿದ್ದಾರೆ.
ಕನಿಷ್ಠ ತಾಪಮಾನ ತೀವ್ರ ಚಳಿ
ಬೀದರ್ನಲ್ಲಿ 5.5 ಡಿಗ್ರಿ ಸೆಲ್ಸಿಯಸ್ ಹಾಗೂ ಬಾಗಲಕೋಟೆ ಮತ್ತು ವಿಜಯಪುರದಲ್ಲಿ 6 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 5 ಡಿಗ್ರಿಗಿಂತ ಕಡಿಮೆಯಾಗಿದೆ ಎಂದು ತಿಳಿಸಿರುವ ಪ್ರಸಾದ್, ಕರ್ನಾಟಕದ ಉತ್ತರ ವಲಯಗಳಲ್ಲಿ ಶೀತ ಅಲೆಯ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ತಾಪಮಾನ ಕುಸಿತ
ಇದೇ ರೀತಿ ಹವಾಮಾನ ಪರಿಸ್ಥಿತಿ ಮುಂದುವರಿದರೆ ತಾಪಮಾನ ಕುಸಿತವನ್ನು ಅವಲಂಬಿಸಿ ಪ್ರದೇಶದಾದ್ಯಂತ ತೀವ್ರ ಶೀತ ಅಲೆಯ ಎಚ್ಚರಿಕೆಯನ್ನು ಅಧಿಕಾರಿಗಳು ನೀಡುತ್ತಾರೆ ಎಂಬುದು ಪ್ರಸಾದ್ ಹೇಳಿಕೆಯಾಗಿದೆ.
3-4 ಉಡುಪುಗಳನ್ನು ಧರಿಸಲು ಸೂಚನೆ
ಹವಾಮಾನ ಇಲಾಖೆ ತೀವ್ರ ಶೀತದಿಂದ ರಕ್ಷಣೆ ಪಡೆದುಕೊಳ್ಳುವಂತೆ ಹಾಗೂ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ದಟ್ಟವಾದ ಮಂಜಿನ ಕಣಗಳು ಮಾಲಿನ್ಯಕಾರಕಗಳನ್ನು ಹೊಂದಿರುತ್ತದೆ ಮತ್ತು ಶ್ವಾಸಕೋಶದಲ್ಲಿ ನೆಲೆಗೊಳ್ಳುವ ಸಂಭವ ಹೆಚ್ಚಿರುತ್ತದೆ. ಇದರಿಂದ ಉಬ್ಬಸ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಹೆಚ್ಚುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮಾಸ್ಕ್ ಧರಿಸಿ ಓಡಾಡಲು ಸೂಚಿಸಲಾಗಿದೆ.
ತೀವ್ರ ಶೀತ ಗಾಳಿ ಬೀಸುತ್ತಿರುವುದರಿಂದ ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಸೂಕ್ತ ಉಡುಪುಗಳನ್ನು ಧರಿಸಬೇಕು ಎಂದು ಹವಾಮಾನ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕನಿಷ್ಠ ಪಕ್ಷ 3-4 ಉಡುಪುಗಳನ್ನು ಧರಿಸಲು ತಿಳಿಸಿದ್ದಾರೆ.
ಹೊರಗಡೆ ಓಡಾಡುವಾಗ ಹೆಚ್ಚಿನ ಮುಂಜಾಗ್ರತೆ
ಹೊರಗಡೆ ಓಡಾಡುವ ಸಮಯದಲ್ಲಿ ಆದಷ್ಟು ಹೆಚ್ಚಿನ ರಕ್ಷಣೆಯನ್ನು ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದು, ಸ್ವೆಟರ್ಗಳು ಹಾಗೂ ಕೈಗವಸುಗಳನ್ನು ಬಳಸುವಂತೆ ನಿರ್ದೇಶಿಸಿದ್ದಾರೆ. ಮನೆಯೊಳಗೆ ಇರುವಾಗ ಕೂಡ ಆದಷ್ಟು ಸ್ವೆಟರ್ ಧರಿಸುವಂತೆ ಹೇಳಿದ್ದಾರೆ.
ಚಳಿಯಿಂದ ಉಂಟಾಗುವ ಇತರ ಅಸೌಖ್ಯಗಳು
ದೀರ್ಘ ಸಮಯಗಳವರೆಗೆ ಜನರು ತೀವ್ರ ಚಳಿಗೆ ಓಡಾಡಿದಲ್ಲಿ ಮೂಗಿನಲ್ಲಿ ರಕ್ತ ಒಸರುವುದು, ಅಸ್ತಮಾದಲ್ಲಿ ಏರುಪೇರು, ಜ್ವರದ ಲಕ್ಷಣಗಳು ಹಾಗೂ ತ್ವಚೆಯಲ್ಲಿ ತುರಿಕೆ ಕಂಡುಬರುವ ಲಕ್ಷಣಗಳಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಹೊರಗೆ ಓಡಾಡುವಾಗ ಉಣ್ಣೆಯ ಟೋಪಿಗಳನ್ನು ಧರಿಸಲು ಸಲಹೆ ನೀಡಿದ್ದಾರೆ. ಆದಷ್ಟು ಮನೆಯೊಳಗೆ ಇದ್ದು ಚಪ್ಪಲಿಗಳನ್ನು ಧರಿಸಿ ಓಡಾಡಲು ಸೂಚಿಸಿದ್ದಾರೆ. ಚಹಾ, ಕಾಫಿ ಇಲ್ಲವೇ ಸೂಪ್ನಂತಹ ಬಿಸಿಯಾದ ಪಾನೀಯಗಳನ್ನು ಸೇವಿಸಲು ತಿಳಿಸಲಾಗಿದೆ.
ನಗರಗಳಲ್ಲಿ ಹವಾಮಾನ ಪರಿಸ್ಥಿತಿ
ಮಂಗಳವಾರ ಬೆಂಗಳೂರಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಮತ್ತು 13-14 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ. ಶೀತಗಾಳಿ ಎಚ್ಚರಿಕೆಯ ನಡುವೆ ಬೆಂಗಳೂರಿನಲ್ಲಿ ಮಂಜು ಮುಸುಕಿದ ಅನುಭವವಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಜಿಲ್ಲಾವಾರು ಮುನ್ಸೂಚನೆಯಲ್ಲಿ ಮುಂಜಾನೆಯ ಸಮಯದಲ್ಲಿ ತೀವ್ರ ಮಂಜು ಕವಿಯಲಿದೆ ಎಂದು ಇಲಾಖೆ ತಿಳಿಸಿದೆ.
ನಗರದಲ್ಲಿ ಕನಿಷ್ಠ ತಾಪಮಾನ 10.4 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದ್ದರಿಂದ ಬೆಳಗಾವಿ ಮತ್ತು ಅದರ ಉಪನಗರಗಳ ನಿವಾಸಿಗಳು ತೀವ್ರವಾದ ಚಳಿಯ ಅಲೆಯನ್ನು ಅನುಭವಿಸಲು ಪ್ರಾರಂಭಿಸಿದ್ದಾರೆ.
ತೀವ್ರ ಚಳಿ
ತೀವ್ರ ಚಳಿಯಿಂದಾಗಿ ಮಂಜು ಮುಸುಕಿದ ವಾತಾವರಣ ಉಂಟಾಗಿದ್ದು ರಸ್ತೆಗಳಲ್ಲಿ ಓಡಾಡುವಾಗ, ವಾಹನಗಳಲ್ಲಿ ಪ್ರಯಾಣಿಸುವಾಗ ಸಾಧ್ಯವಾದಷ್ಟು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಹವಾಮಾನ ಅಧಿಕಾರಿಗಳು ಸೂಚಿಸಿದ್ದಾರೆ.
ವಿಮಾನ ಹಾಗೂ ರೈಲುಗಳಲ್ಲಿ ಪ್ರಯಾಣಿಸುವವರು ಪ್ರಯಾಣ ವೇಳಾಪಟ್ಟಿಗಾಗಿ ಎರಡೂ ಇಲಾಖೆಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ