ಮೈಸೂರು ಮೇಯರ್ ಆಯ್ಕೆ ವಿಚಾರವಾಗಿ ಮುಂದುವರೆದ ಜೆಡಿಎಸ್ ಮಾಜಿ ಸಚಿವರ ಮುಸುಕಿನ ಗುದ್ದಾಟ

ಒಟ್ಟಿನಲ್ಲಿ ಹುಣಸೂರು ಉಪಚುನಾವಣೆಯಲ್ಲಿ ತಟಸ್ಥವಾಗಿದ್ದ ಜಿಟಿಡಿ ಜೆಡಿಎಸ್​ಗೆ ಭಾರಿ ಪೆಟ್ಟನ್ನೇ ಕೊಟ್ಟಿದ್ದರು. ಇದೀಗ ಮೇಯರ್ ಚುನಾವಣೆಯಲ್ಲು ತಟಸ್ಥವಾಗಿರುವ ಜಿಟಿಡಿ ಇನ್ಯಾವ ಮೌನದ ರಾಜಕಾರಣ ಮಾಡುತ್ತಾರೆ ಅನ್ನೋದೆ ಇದೀಗ ಮೂಡಿರುವ  ಕುತೂಲಹವಾಗಿದೆ.

news18-kannada
Updated:January 14, 2020, 6:56 PM IST
ಮೈಸೂರು ಮೇಯರ್ ಆಯ್ಕೆ ವಿಚಾರವಾಗಿ ಮುಂದುವರೆದ ಜೆಡಿಎಸ್ ಮಾಜಿ ಸಚಿವರ ಮುಸುಕಿನ ಗುದ್ದಾಟ
ಸಾ.ರಾ.ಮಹೇಶ್ ಮತ್ತು ಜಿ.ಟಿ.ದೇವೇಗೌಡ.
  • Share this:
ಮೈಸೂರು: ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್‌-ಜೆಡಿಎಸ್‌ ಅಸಮಾಧಾನಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ಮೈಸೂರಿನ ಜೆಡಿಎಸ್‌ ನಾಯಕರದ್ದು. ಮಾಜಿ ಸಚಿವರಾದ ಸಾ.ರಾ.ಮಹೇಶ್‌ ಹಾಗೂ ಜಿ.ಟಿ.ದೇವೇಗೌಡ ಇಬ್ಬರು ಪರಸ್ಪರ ಅಸಮಾಧಾನ ಹೊರಹಾಕಿದ್ದು ಹಳೆ ಸುದ್ದಿ. ಆದರೆ ಈಗಲೂ ಒಬ್ಬರ ಮೇಲೋಬ್ಬರು ಕೆಂಡ ಕಾರುತ್ತಿದ್ದು ಮೈಸೂರು ಪಾಲಿಕೆ ಮೇಯರ್ ಹಾಗೂ ಉಪಮೇಯರ್‌ ಚುನಾವಣೆಯಲ್ಲಿ ಮುಸುಕಿನ ಗುದ್ದಾಟಕ್ಕಿಳಿದಿದ್ದಾರೆ. ಎಲ್ಲ ಸಾ.ರಾ ಮಹೇಶ್ ಅಂತ ಜಿ.ಟಿ.ದೇವೇಗೌಡರು ಹೇಳಿದರೆ, ಇದು ಸಾ.ರಾ.ಅಸೋಷಿಯೇಷನ್‌ ಪ್ರವೈಟ್‌ ಲಿಮಿಟೆಡ್‌ ಅಲ್ಲ ಅಂತ ಸಾ.ರಾ.ಮಹೇಶ್‌ ಹೇಳುತ್ತಿದ್ದಾರೆ.

ಅಬ್ಬರಿಸಿ ಬೊಬ್ಬಿರಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತಾನಾಡದೆಯೇ ರಾಜಕಾರಣ ಮಾಡುತ್ತೇನೆ. ಹೀಗಂತ ಮೊನ್ನೆ ಮೊನ್ನೆಯಷ್ಟೆ ತನ್ನ ಮೌನದ ರಹಸ್ಯ ಬಿಚ್ಚಿಟ್ಟಿದ್ದ ಮಾಜಿ ಸಚಿವ ಜಿ.ಟಿ. ದೇವೇಗೌಡ ಮೈಸೂರು ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆ ವಿಚಾರವಾಗಿ ಎಲ್ಲವನ್ನು ಸಾ.ರಾ.ಮಹೇಶ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. "ಪಕ್ಷದ ಸಭೆ ಕರೆದಾಗಲೂ ನನ್ನನ್ನು ಆಹ್ವಾನ ಮಾಡಿರಲಿಲ್ಲ. ಕುಮಾರಸ್ವಾಮಿ ಸಾರಾ ಮಹೇಶ್‌ಗೆ ಎಲ್ಲವನ್ನು ಬಿಟ್ಟುಕೊಟ್ಟಿದ್ದಾರೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯಲಿಲ್ಲ. ಈಗ ನಡೆಯಲು ಸಾಧ್ಯವೇ ಇಲ್ಲ? ಸಾರಾ ಮಹೇಶ್ ಯಾರು ಹೇಳುತ್ತಾರೋ ಅವರು ಮೇಯರ್ ಆಗುತ್ತಾರೆ. ಅವರು ಯಾರ ಜೊತೆ ಮೈತ್ರಿ ಅನ್ನುತ್ತಾರೋ ಅವರ ಜೊತೆ ಮೈತ್ರಿ ನಡೆಯುತ್ತದೆ. ನನ್ನದೇನಿದ್ದರೂ, ಜೆಡಿಎಸ್ ಮೇಯರ್ ಅಭ್ಯರ್ಥಿಗೆ ಮತ ಚಲಾಯಿಸುವುದು ಮಾತ್ರ," ಅಂತ ಹೇಳುವ ಮೂಲಕ ನಾನು ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ಅಭ್ಯರ್ಥಿ ಆಯ್ಕೆಯಲ್ಲಿ ಭಾಗಿಯಾಗಲ್ಲ ಎಂದು ಹೇಳಿದ್ದರು.

ಹೀಗೆ ಹೇಳಿಕೆ ಕೊಟ್ಟಿದ್ದ ಜಿಟಿಡಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದರು. "ಎಲ್ಲವನ್ನು ಸಾ.ರಾ.ಮಹೇಶ್ ನೋಡಿಕೊಳ್ಳೋದಕ್ಕೆ ಇದು ಸಾ.ರಾ.ಅಸೋಷಿಯೇಷನ್ ಪ್ರವೈಟ್ ಲಿಮಿಟೆಡ್ ಅಲ್ಲ. ರಾಜ್ಯದ ವರಿಷ್ಠರು ನನಗೆ ಏನು ಜವಾಬ್ದಾರಿ ಕೊಟ್ಟಿದ್ದಾರೆ ಅದನ್ನು ನಿಭಾಯಿಸುತ್ತಿದ್ದೇನೆ. ಹಿಂದೆ ಮೇಯರ್ ಆದವರೆಲ್ಲರನ್ನು ರಾಜ್ಯ ನಾಯಕರು ಕಳುಹಿಸಿದ ಲಕೋಟೆಯಿಂದ ಬಂದ ಹೆಸರಿನವರೇ. ಈಗಲೂ ನಮ್ಮ ಅಭಿಪ್ರಾಯವನ್ನು ನಾವು ತಿಳಿಸಿದ್ದೇವೆ. ಅಂತಿಮ ತೀರ್ಮಾನ ರಾಜ್ಯದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ," ಎಂದು  ಹೇಳಿದ್ದರು. ಇನ್ನು ಮಾತು ಮುಂದುವರೆಸಿದ ಮಾಜಿ ಸಚಿವ ಸಾ.ರಾ. ಮಹೇಶ್, ಜಿಟಿಡಿ ಅವರನ್ನು ಆಕ್ಟಿವ್ ಮಾಡಲು ನಮ್ಮ ನಾಯಕರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಹುಣಸೂರು ಚುನಾವಣೆ ನಂತರ ಅವರನ್ನು ಆಕ್ಟಿವ್ ಮಾಡುವ ಪ್ರಯತ್ನದಲ್ಲಿ ನಾವು ಸ್ವಲ್ಪ ನಿರಾಸಕ್ತಿ ತೋರಿದ್ದೇವೆ. ಯಾವುದೇ ರಾಜಕೀಯ ನಾಯಕನಿಗೆ ಚುನಾವಣೆ ಮುಖ್ಯ ಅದರಲ್ಲೇ ಅವರು ತಟಸ್ಥರಾದರೆ ಏನ್ ಮಾಡೋದು ಅಂತ ಪ್ರಶ್ನೆ ಮಾಡಿದ್ದಾರೆ.

ನಮ್ಮ ಪಕ್ಷದ ಸಭೆಗೆಗಳಿಗೆ ಜಿಟಿಡಿ ಅವರನ್ನು ಕರೆಯುತ್ತಿದ್ದೇವೆ. ಕರೆದ ಸಭೆಗೆ ಬರೋಲ್ಲ ಕರೆಯದ ಸಭೆಗೆ ಕರೆದಿಲ್ಲ ಅಂತಾರೆ. ಈಗಲೂ ಅವರೇ ಮೇಯರ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಿ. ಸಮಯ ಕೊಡಲಿ, ನಾವೆಲ್ಲ ಜಿಟಿಡಿ ಅವರನ್ನು ಭೇಟಿ ಮಾಡ್ತಿವಿ. ಅವರು ನಮ್ಮ ನಾಯಕರು. ಅವರ ಶಕ್ತಿ ನಮ್ಮ ಪಕ್ಷಕ್ಕೆ ಬೇಕು ಅಂತ ತಟಸ್ಥವಾಗಿರುವ ಜಿಟಿಡಿಯ ಕಾಲೆಳೆದರು.

ಇದನ್ನು ಓದಿ: ಸಿದ್ದರಾಮಯ್ಯ-ಸೋನಿಯಾ ಗಾಂಧಿ ಭೇಟಿ ಅಂತ್ಯ; ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲರಿಗೆ ಅಧ್ಯಕ್ಷ ನೀಡುವಂತೆ ಮನವಿ

ಇನ್ನು ಜ. 18ಕ್ಕೆ ಮೈಸೂರು ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ನಿಗದಿ ಆಗಿರುವ ಹಿನ್ನೆಲೆಯಲ್ಲಿ ಜೆಡಿಎಸ್​ನಲ್ಲಿ ನಾಲ್ವರು ಮೇಯರ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಗೆಸ್ಟ್​ಹೌಸ್​ನಲ್ಲಿ ಸಭೆ ನಡೆಸಿದ ಜೆಡಿಎಸ್ ಮೇಯರ್ ಆಕಾಂಕ್ಷಿಗಳು ಹಾಗೂ ಜೆಡಿಎಸ್ ಶಾಸಕ ಮತ್ತು ಕಾರ್ಪೋರೇಟರ್​ಗಳ ಅಭಿಪ್ರಾಯ ಸಂಗ್ರಹಿಸಿದರು. ಸಾರಾ ಮಹೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರೊ.ರಂಗಪ್ಪ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಮಾಜಿ ಮೇಯರ್ ರವಿಕುಮಾರ್, ಅಜೀಜ್ ಅಬ್ದುಲ್ಲಾ ಸೇರಿ 18 ಜನ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು. ಮೇಯರ್ ಆಕಾಂಕ್ಷಿಗಳಾದ ನಮ್ರತಾ ರಮೇಶ್, ನಿರ್ಮಲಾ ಹರೀಶ್ , ತಸ್ಲೀಮ್ ಹಾಗೂ ರೇಷ್ಮಾ ಭಾನು ಅವರ ಹೆಸರು ಅಂತಿಮಗೊಳಿಸಿ ವರಿಷ್ಠರ ಅನುಮತಿಗೆ ಕಳುಹಿಸಿಲಾಗಿದೆ.  ಎಲ್ಲವು ಅಂದುಕೊಂಡಂತೆ ಆದರೆ ಈ ಬಾರಿ ಮೇಯರ್‌ ಪಟ್ಟ ಜೆಡಿಎಸ್‌ಗೆ ಸಿಗೋದು ಪಕ್ಕಾ ಆಗಿದೆ.

ಒಟ್ಟಿನಲ್ಲಿ ಹುಣಸೂರು ಉಪಚುನಾವಣೆಯಲ್ಲಿ ತಟಸ್ಥವಾಗಿದ್ದ ಜಿಟಿಡಿ ಜೆಡಿಎಸ್​ಗೆ ಭಾರಿ ಪೆಟ್ಟನ್ನೇ ಕೊಟ್ಟಿದ್ದರು. ಇದೀಗ ಮೇಯರ್ ಚುನಾವಣೆಯಲ್ಲು ತಟಸ್ಥವಾಗಿರುವ ಜಿಟಿಡಿ ಇನ್ಯಾವ ಮೌನದ ರಾಜಕಾರಣ ಮಾಡುತ್ತಾರೆ ಅನ್ನೋದೆ ಇದೀಗ ಮೂಡಿರುವ  ಕುತೂಲಹವಾಗಿದೆ.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ