ಮೈ ಕೊರೆವ ಚಳಿಗೆ ಬೀದರ್ ಜನ ತತ್ತರ - ವಾರದಿಂದ ಕನಿಷ್ಠ ತಾಪಮಾನ ದಾಖಲು

ಚಳಿಗೆ ಜನರು ರಸ್ತೆ ಬದಿ ಬೆಂಕಿ ಕಾಯಿಸುತ್ತ ಕುಳಿತ ದೃಶ್ಯ ಎಲ್ಲೆಡೆ ಸಾಮಾನ್ಯ ಎಂಬಂತಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಚಳಿಯ ಪ್ರಮಾಣ ಏರಿಕೆಯಾಗಿದ್ದು, ಜನರ  ಚಳಿಗೆ ಭಯ ಬೀಳುವಂತಾಗಿದೆ. ಇನ್ನೂ ಆಗಾಗ ಬೀಳುವ ದಟ್ಟವಾದ ಇಬ್ಬನಿಯಿಂದಲೂ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ

G Hareeshkumar | news18-kannada
Updated:January 11, 2020, 7:55 AM IST
ಮೈ ಕೊರೆವ ಚಳಿಗೆ ಬೀದರ್ ಜನ ತತ್ತರ - ವಾರದಿಂದ ಕನಿಷ್ಠ ತಾಪಮಾನ ದಾಖಲು
ಸಾಂದರ್ಭಿಕ ಚಿತ್ರ
  • Share this:
ಬೀದರ್(ಜ.11) : ಮೈಕೊರೆಯುವ ಚಳಿಗೆ ಬೀದರ್ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದು, ಮನೆಯಿಂದ ಹೊರಬರಲು ಅಂಜುವ ವಾತಾವರಣ ಇದೆ. ಕಳೆದೊಂದು ವಾರದಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿ ಹೆಚ್ಚಿದೆ. ಬೆಳಿಗ್ಗೆ ಮಕ್ಕಳು ಶಾಲಾ, ಕಾಲೇಜಿಗೆ ಸ್ವೆಟ್ಟರ್‌ ಇಲ್ಲದೆ ಹೋಗಲಾಗುತ್ತಿಲ್ಲ. ಜನರೂ ಟೋಪಿ, ಸ್ವೆಟ್ಟರ್‌, ಜರ್ಕಿನ್‌ ಹಾಕಿಕೊಂಡೇ ಮನೆಯಿಂದ ಹೊರ ಬರುತ್ತಿದ್ದಾರೆ.

ಕಳೆದೊಂದು ವಾರದಿಂದ ಗಡೀ ಜಿಲ್ಲೆ ಬೀದರ್ ನಲ್ಲಿ‌ ದಾಖಲಾಗುತ್ತಿದೆ 12 ಡಿಗ್ರಿ ಸೆಲ್ಸಿಯಸ್. ಶೀತಗಾಳಿ ಮಿಶ್ರಿತ ವಾತಾವರಣದಿಂದ ಜನ ಹೈರಾಣು, ಇನ್ನೂ ಕೆಲವೂ ದಿನ ಹೀಗೆ ಇರಲಿದೆಯಂತೆ ಮೈಕೊರೆಯುವ ಚಳಿ. ಗಡೀ ಜಿಲ್ಲೆ ಬೀದರ್ ನಲ್ಲೀಗ ಮೈಕೊರೆಯುವ ಚಳಿ ಶುರುವಾಗಿದೆ. ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಜಿಲ್ಲೆಯ ಜನರ ಜೀವನ ಶೈಲಿಯನ್ನೇ ಈಗ ಬದಲಾಯಿಸಿದ್ದು ದಿನವಿಡೀ ಚಳಿಯ ಅನುಭವ ಹೊಂದುವಂತಾಗಿದೆ.

ಬೆಳಗ್ಗೆ 7 ಗಂಟೆಯಾದರೂ ಬೆಳಕು ಮೂಡುತ್ತಿಲ್ಲ. ಸಂಜೆ 5:30ಗಂಟೆಗೆ ಕತ್ತಲು ಆವರಿಸುತ್ತಿದೆ. ಕನಿಷ್ಟ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿದಿರುತ್ತದೆ. ಅತಿಯಾದ ಮೈ ಕೊರೆಯುವ ವಾತಾವರಣ ಪ್ರವಾಸಿಗರಿಗೆ ಮೋಜು ಮಸ್ತಿಯ ಸುಖಾನುಭವ ನೀಡಿದ್ದರೆ, ಕೆಲಸಕ್ಕೆ ತೆರಳುವ ಸ್ಥಳಿಯರಿಗೆ, ವ್ಯಾಪಾರಿಗಳಿಗೆ ಅನಾನುಕೂಲವಾಗಿದೆ. ಚುಮು ಚುಮು ಚಳಿಗೆ ಮನೆ ಬಿಟ್ಟು ಹೊರ ಬಾರದ ನಗರ ಪ್ರದೇಶದ ಜನ ಚಳಿಗೆ 9 ಗಂಟೆಯ ಒಳಗಡೆ ಗೂಡು ಸೇರುತ್ತಿದ್ದಾರೆ. ದಟ್ಟ ಇಬ್ಬನಿಯಿಂದಾಗಿ ಬೈಕ್ ಸವಾರರು, ವಿದ್ಯಾರ್ಥಿಗಳು ಸೇರಿದಂತೆ ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿ ಜಾಸ್ತಿಯಿರುವುದು ಸಮಸ್ಯೆ ಸೃಷ್ಟಿಸಿದೆ ಎಂದು ಬೀದರ್ ಜನರು ಹೇಳುತ್ತಿದ್ದಾರೆ.

ಚಳಿಗೆ ಜನರು ರಸ್ತೆ ಬದಿ ಬೆಂಕಿ ಕಾಯಿಸುತ್ತ ಕುಳಿತ ದೃಶ್ಯ ಎಲ್ಲೆಡೆ ಸಾಮಾನ್ಯ ಎಂಬಂತಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಚಳಿಯ ಪ್ರಮಾಣ ಏರಿಕೆಯಾಗಿದ್ದು, ಜನರ  ಚಳಿಗೆ ಭಯ ಬೀಳುವಂತಾಗಿದೆ. ಇನ್ನೂ ಆಗಾಗ ಬೀಳುವ ದಟ್ಟವಾದ ಇಬ್ಬನಿಯಿಂದಲೂ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಚಳಿಗಾಲ ಆರಂಭದಲ್ಲಿ ಅಷ್ಟೇನು ಚಳಿ ಕಂಡು ಬರಲಿಲ್ಲವಾದರೂ, ಇದೀಗ ಜಿಲ್ಲೆಯ ವಿವಿಧೆಡೆ ಕನಿಷ್ಠ ತಾಪಮಾನಕ್ಕೆ ಇಳಿಯುತ್ತಿದೆ.

ನದಿ, ಜಲಾಶಯ, ಹಳ್ಳ- ಕೊಳ್ಳಗಳಲ್ಲಿ ನೀರೇ ಇಲ್ಲ. ಆದರೂ, ಮೈ ನಡುಗಿಸುವ ಚಳಿ ದಾಖಲಾಗುತ್ತಿರುವುದು ವಿಶೇಷ. ಚಳಿಗಾಲ ಆರಂಭವಾದರೂ ಈವರೆಗೆ ಸ್ವೆಟ್ಟರ್‌, ಜರ್ಕಿನ್‌, ಮಫ್ಲರ್‌, ಟೋಪಿಗಳಿಗೆ ಬೇಡಿಕೆ ಇರಲಿಲ್ಲ. ಡಿಸೆಂಬರ್‌ ಆರಂಭದಿಂದ ಜನ ಸ್ವೆಟ್ಟರ್‌, ಜರ್ಕಿನ್‌, ಟೋಪಿಗಳ ಖರೀದಿಯತ್ತ ಮುಖ ಮಾಡಿದ್ದಾರೆ. ಜನವರಿ ತಿಂಗಳಲ್ಲಿ ಕನಿಷ್ಠ 7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ತಜ್ಜರು ಹೇಳಿರುವುದರಿಂದ ಜನರು ಆತಂಕದಲ್ಲಿದ್ದಾರೆ.

ಇದನ್ನೂ ಓದಿ : ಬಡವನಿಗೆ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಪುನರ್ಜನ್ಮ ನೀಡಿದ ವಿಜಯಪುರದ ವೈದ್ಯರು

ಚಳಿಗಾಲಕ್ಕೆ ಬೀದರ್ ನಗರ ಸಂಪೂರ್ಣ ಬದಲಾಗಿ ಹೋಗಿದ್ದು, ನಸುಕಿನ ಜಾವ ಜನರು ಓಡಾಡದಂತಾಗಿದೆ. ಗಡೀ ಜಿಲ್ಲೆ ಜನರಿಗೆ ಕೆಲವೂ ಸಲ ಊಟಿಯಲ್ಲಿನ ಮಂಜಿನ ಅನುಭವ ಆಗುತ್ತಿದ್ದು, ನಗರದ ಪ್ರಕೃತಿ ಸೌಂದರ್ಯಕ್ಕೆ ಇಲ್ಲಿನ ಜನರೇ ಫಿದಾ ಆಗಿ ಹೋಗಿದ್ದಾರೆ. ಇನ್ನೂ ಈ ಮೈಕೊರೆಯುವ ಚಳಿಯಲ್ಲಿ ಬೆಳಗಿನ ವಾತಾವರಣದಲ್ಲಿ ವಾಕಿಂಗ್ ಹೋಗುವವರು ತುಂಬಾನೆ ಖುಷಿ ಪಡುತ್ತಿದ್ರೆ, ವೃದ್ಧರು ಮಾತ್ರ ಚಳಿಗೆ ಬೆಚ್ಚಿ ಬೀಳುತ್ತಿದ್ದಾರೆ. (ವರದಿ : ಸಿದ್ದು ಸತ್ಯಣ್ಣನವರ)
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ