ಚಿಕ್ಕಮಗಳೂರು(ಡಿ.09): ಕಳ್ಳ-ಕಾಕರಿಂದ ಕಾಫಿ ಫಸಲನ್ನ ರಕ್ಷಿಸಿಕೊಳ್ಳಲು ಚುನಾವಣೆ ಸಂದರ್ಭದಲ್ಲೂ ಬಂದೂಕನ್ನ ನಮ್ಮ ಬಳಿ ಇಟ್ಟುಕೊಳ್ಳೋಕೆ ಅನುಮತಿ ನೀಡಬೇಕೆಂದು ಕಾಫಿಬೆಳೆಗಾರರು ಆಗ್ರಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸದ್ಯ ಕಾಫಿ ಕೊಯ್ಲು ಆರಂಭವಾಗಿದೆ. ಕಾಫಿ ಮಾತ್ರವಲ್ಲ, ಮೆಣಸು, ಅಡಿಕೆ ಕಟಾವು ಕೂಡ ಇದೇ ಸಂದರ್ಭದಲ್ಲಿ ನಡೆಯುತ್ತೆ. ಹೀಗಾಗಿ ಕಳ್ಳ-ಕಾಕರು ಇದೇ ಸಮಯಕ್ಕಾಗಿ ಹೊಂಚು ಹಾಕಿ ಫಸಲನ್ನ ಕದಿಯೋಕೆ ಅಂತಾನೇ ರೆಡಿಯಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಾಫಿಬೆಳೆಗಾರರು ಬೆಳೆಗಳನ್ನ ರಕ್ಷಣೆ ಮಾಡಿಕೊಳ್ಳಲು ಬಂದೂಕನ್ನ ಮನೆಯಲ್ಲೇ ಇರಿಸಿಕೊಳ್ಳುವ ಸಂಪ್ರದಾಯವನ್ನ ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಬಂದೂಕು ಇದೆ ಅಂದ್ರೆ ಕಾಫಿಬೆಳೆಗಾರರಿಗೆ ಒಂದು ರೀತಿ ನೂರಾನೆ ಬಲ ಇದ್ದಂತೆ. ಬಂದೂಕಿನಿಂದ ನೇರವಾಗಿ ಕಳ್ಳರಿಗೆ ಫೈರ್ ಮಾಡದಿದ್ರೂ, ಕಾಫಿ ತೋಟದಲ್ಲಿ ಬೆಳೆಗಾರರು ಬಂದೂಕು ಹಿಡ್ಕೊಂಡ್ ಗಸ್ತು ತಿರುಗ್ತಿದ್ರೆ ಯಾವ ಕಳ್ಳರೂ ಆ ಕಡೆ ಮುಖ ಹಾಕೋ ಕೆಲಸವನ್ನ ಅಪ್ಪಿತಪ್ಪಿಯೂ ಮಾಡಲ್ಲ.
ಆದ್ರೆ ಇದೀಗ ಗ್ರಾಮ ಪಂಚಾಯ್ತಿ ಚುನಾವಣೆಗೆ ದಿನಾಂಕ ನಿಗದಿಯಾಗಿರೋ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಂದೂಕನ್ನ ಹೊಂದಿರೋ ಜನ್ರು, ಆಯಾ ಪೊಲೀಸ್ ಠಾಣೆಗಳಿಗೆ ಸರೆಂಡರ್ ಮಾಡುವಂತೆ ಸೂಚಿಸಿದೆ. ಆದ್ರೆ ಕಾಫಿ ಸೀಸನ್ ಸಮಯದಲ್ಲಿ ಬಂದೂಕನ್ನ ಹಿಂದಿರುಗಿಸುವಂತೆ ಪೊಲೀಸ್ ಇಲಾಖೆ ಸೂಚಿಸಿರೋದು ಕಾಫಿ ಬೆಳೆಗಾರರಿಗೆ ಇರಿಸು ಮುರಿಸು ತರಿಸಿದೆ.
ಶಿವಮೊಗ್ಗದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಎಲ್ಲರ ಸಹಕಾರ ಅಗತ್ಯ; ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್
ನಾವು ಫಸಲನ್ನ ರಕ್ಷಣೆ ಮಾಡಿಕೊಳ್ಳಲು ಬಂದೂಕು ಲೈಸೆನ್ಸ್ ಪಡೆದುಕೊಂಡಿದ್ದೆವು. ಆದ್ರೆ ಇದೀಗ ಫಸಲು ಕೊಯ್ಲಿನ ಸಮಯದಲ್ಲೇ ಬಂದೂಕನ್ನ ಸರೆಂಡರ್ ಮಾಡಲು ಸೂಚಿಸಿದ್ದಾರೆ. ತೋಟ, ಮನೆಯ ಮುಂಭಾಗದ ಕಣ, ಗೋಡಾನ್ಗಳಲ್ಲಿ ಕಾಫಿ, ಮೆಣಸಿನ ಫಸಲಿದೆ. ಒಂದು ವೇಳೆ ಏನಾದ್ರೂ ಕಳ್ಳ ಕಾಕರು ಎಗರಿಸಿದ್ರೆ ಯಾರು ಹೊಣೆ ಅನ್ನೋದು ಕಾಫಿ ಬೆಳೆಗಾರರ ಅಳಲು. ಹೀಗಾಗಿ ಕಾಫಿ ಸೀಸನ್ ಆಗಿರೋದ್ರಿಂದ ಬಂದೂಕನ್ನ ಮನೆಯಲ್ಲಿಟ್ಟುಕೊಳ್ಳಲು ಅವಕಾಶ ಮಾಡಿಕೊಂಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ಒಂದು ಕಡೆ ಗ್ರಾಮ ಪಂಚಾಯ್ತಿ ಚುನಾವಣೆಯ ಬಿಸಿ ನಿಧಾನವಾಗಿ ಜನರಿಗೆ ತಟ್ಟುತ್ತಿದ್ರೆ, ಇನ್ನೊಂದೆಡೆ ಇದೇ ಸಮಯದಲ್ಲಿ ಕಾಫಿ ಕೊಯ್ಲು ಆಗಿರೋದ್ರಿಂದ ಕಾಫಿನಾಡಿನಲ್ಲಿ ಬಿಡುವಿಲ್ಲದ ಕೆಲಸದಲ್ಲಿ ಜನರು ತೊಡಗಿದ್ದಾರೆ. ಇದೇ ಸಮಯದಲ್ಲಿ ಬಂದೂಕನ್ನೂ ಪೊಲೀಸ್ ಇಲಾಖೆ ಕಸಿದುಕೊಂಡು ಬಿಟ್ರೆ, ಕಳ್ಳಕಾಕರಿಗೆ ಅನುಕೂಲ ಮಾಡಿಕೊಟ್ಟಂಗೆ ಆಗೋದ್ರಲ್ಲಿ ಸಂಶಯವೇ ಇಲ್ಲ ಅನ್ನೋದು ಕಾಫಿ ಬೆಳೆಗಾರರ ಮಾತು. ಹೀಗಾಗಿ ಕೈಗೆ ಬಂದ ಫಸಲನ್ನ ಉಳಿಸಿಕೊಳ್ಳೋದು ಕೂಡ ಬೆಳೆಗಾರರಿಗೆ ಒಂದು ದೊಡ್ಡ ಸವಾಲಾಗಿದ್ದು, ಪ್ಲೀಸ್ ಬಂದೂಕು ಬೇಕು, ಕೇಳ್ಬೇಡಿ ಅಂತಾ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ