ಮಂಗಳೂರು(ಡಿ.07): ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೂ ಈ ಬಾರಿ ಕೊರೋನಾ ಬಿಸಿ ತಟ್ಟಿದೆ. ಈ ವರ್ಷದ ಅಂತ್ಯದವರೆಗೆ ಕಂಬಳ ನಡೆಯುವ ಯಾವುದೇ ಲಕ್ಷಣಗಳು ಕಾಣುತಿಲ್ಲ. ಕೇಂದ್ರದ ಮಾರ್ಗಸೂಚಿಯ ಆಧಾರದ ಮೇಲೆ ಈ ಬಾರಿಯ ಕಂಬಳ ಸೀಸನ್ ಅವಲಂಬಿತವಾಗಿದೆ. ಹೌದು, ಕಂಬಳ ಅಂದ್ರೆ ಕರಾವಳಿಯ ಜನರ ಕಿವಿ ನೆಟ್ಟಗಾಗುತ್ತೆ. ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕಾಗಿ ಇಡೀ ಊರಿಗೆ ಊರೇ ಒಂದೆಡೆ ಸೇರುತ್ತೆ. ಅದರಲ್ಲೂ ಕಂಬಳ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದ ಬಳಿಕವಂತೂ ಕಂಬಳಾಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಈ ಬಾರಿ ಪ್ರಸಿದ್ದ ಕಂಬಳ ಕ್ರೀಡೆಯ ಮೇಲೂ ಕರೊನಾ ಕರಿಛಾಯೆ ಬಿದ್ದಿದೆ. ಕೊರೊನಾದಿಂದಾಗಿ ಈ ಬಾರಿಯ ಕಂಬಳ ಸೀಸನ್ ಆರಂಭದ ಯಾವುದೇ ಲಕ್ಷಣ ಗೋಚರವಾಗುತ್ತಿಲ್ಲ.
ಧಾರ್ಮಿಕ ನಂಬಿಕೆ ಮತ್ತು ಕೃಷಿ ಸಂಸ್ಕೃತಿಯನ್ನೊಳಗೊಂಡ ಈ ಜಾನಪದ ಕ್ರೀಡೆ ಕಂಬಳವನ್ನು ನಡೆಸಬೇಕು ಎಂಬುದು ಕಂಬಳ ಸಮಿತಿಯ ಆಸೆ. ಆದ್ರೆ ಕರೊನಾ ಹಿನ್ನಲೆಯಲ್ಲಿ ಆಚರಣೆಗೆ ಅಡ್ಡಿಯಾಗಿರುವುದರಿಂದ ಕೇಂದ್ರ ಸರ್ಕಾರ ಮುಂದೆ ಹೊರಡಿಸುವ ಮಾರ್ಗಸೂಚಿ ಅವಲಂಬಿಸಿ ಕಂಬಳ ನಡೆಸುವ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೂ ಮನವಿ ಸಲ್ಲಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವ: ಇಲ್ಲಿದೆ ನಾಗರ ಬೆತ್ತದಿಂದಲೇ ದೇವರ ರಥ ಕಟ್ಟುವ ಪ್ರಾಚೀನ ಸಂಪ್ರದಾಯ
ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಪ್ರತಿ ವರ್ಷ ನವೆಂಬರ್ ಕೊನೆ ವಾರದಲ್ಲಿ ಆರಂಭವಾಗುತಿದ್ದ ಕಂಬಳ, ಮಾರ್ಚ್ ಅಂತ್ಯದವರೆಗೆ ನಡೆಯುತಿತ್ತು. ಕಂಬಳ ಸೀಸನ್ ಆರಂಭಕ್ಕೂ ಮುನ್ನ ಕಂಬಳದ ಒಟ್ಟು ಆರು ವಿಭಾಗದಲ್ಲಿಯೂ ಕನಿಷ್ಟ ಐದು ವಾರಗಳ ಅಭ್ಯಾಸ ನಡೆಸಲಾಗುತಿತ್ತು. ಆದ್ರೆ ಈ ಬಾರಿ ಕಂಬಳ ನಡೆಯುವ ಅನಿಶ್ಚಿತತೆ ಇರುವುದರಿಂದ ಒಂದು ವಿಭಾಗ ಹೊರತುಪಡಿಸಿ ಉಳಿದ ಯಾವ ಪ್ರಮುಖ ವಿಭಾಗಗಳ ಅಭ್ಯಾಸವೇ ಆರಂಭವಾಗಿಲ್ಲ. ಕುಂದಾಪುರ ಭಾಗದಲ್ಲಿ ಸಾಂಪ್ರದಾಯಿಕ ಕಂಬಳ ನಡೆದಿದೆ ಅಷ್ಟೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ