ಸರ್ಕಾರ ಉರುಳುತ್ತದೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ

news18
Updated:August 29, 2018, 10:41 AM IST
ಸರ್ಕಾರ ಉರುಳುತ್ತದೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ, ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ
news18
Updated: August 29, 2018, 10:41 AM IST
ನ್ಯೂಸ್ 18 ಕನ್ನಡ

ಹುಬ್ಬಳ್ಳಿ (ಆ.29): 'ಜನರು ಆಶೀರ್ವಸಿದರೆ ನಾನು ಮತ್ತೆ ಸಿಎಂ ಆಗುತ್ತೇನೆ' ಎಂದು ಹೇಳಿಕೆ ನೀಡುವ ಮೂಲಕ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದರು. ಇವರ ಹೇಳಿಕೆಯನ್ನು ಸಮ್ಮಿಶ್ರ ಸರ್ಕಾರ ಪತನದ ಮುನ್ಸೂಚನೆ ಎಂದೇ ಹಲವರು ವ್ಯಾಖ್ಯಾನಿಸಿದ್ದರು.

ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಸದಾ ಪ್ರಯತ್ನಿಸುತ್ತಿರುವ ವಿರೋಧ ಪಕ್ಷವಾದ ಬಿಜೆಪಿಗೆ ಸಿದ್ದರಾಮಯ್ಯ ಅವರ ಹೇಳಿಕೆ ಅಸ್ತ್ರವಾಗಿ ಸಿಕ್ಕಿತ್ತು. ಇದನ್ನೇ ಪ್ರಯೋಗಿಸಿ, ಸರ್ಕಾರ ಬೀಳಿಸಲು ಹಲವು ರೀತಿಯಾಗಿ ಪ್ರಯತ್ನಗಳನ್ನು ನಡೆಸಿತು. ಇದೀಗ ಸ್ವತಃ ಸಿದ್ದರಾಮಯ್ಯ ಅವರೇ ಸಮ್ಮಿಶ್ರ ಸರ್ಕಾರ ಬದಲಾಗುತ್ತದೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, "ಸರ್ಕಾರ ಬದಲಾಗುತ್ತದೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಅವರು ಬಯಸಿದಂತೆ ಏನೂ ಆಗುವುದಿಲ್ಲ. ಸಮ್ಮಿಶ್ರ ಸರ್ಕಾರ ಬಹಳ ಭದ್ರವಾಗಿದೆ," ಎಂದು ಹೇಳಿದ್ದಾರೆ.

"ನಾನು ಮತ್ತೆ ಸಿಎಂ ಆಗುತ್ತೇನೆ ಎಂದು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ. ಆಗ ನಾನು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದೆ. ಈಗ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಅದು ಭದ್ರವಾಗಿದೆ. ಎರಡು ಪಕ್ಷದವರೇ ಸೇರಿ ಸರ್ಕಾರ ರಚಿಸಿರುವಂತಹದ್ದು, ಸರ್ಕಾರದಲ್ಲಿ ನಮ್ಮವರೂ ಮಂತ್ರಿಗಳಾಗಿದ್ದಾರೆ. ಹೀಗಾಗಿ ನಮ್ಮನ್ನು ಕಡೆಗಣಿಸುತ್ತಾರೆ ಎನ್ನುವುದು ಸರಿಯಲ್ಲ," ಎಂದು ಹೇಳಿದರು.

"ಜೆಡಿಎಸ್‌ನವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ‌.ಸಿ. ವೇಣುಗೊಪಾಲ್‌ ಅವರಿಗೆ ಪತ್ರ ಬರೆದಿಲ್ಲ, ದೂರು ನೀಡಿಲ್ಲ. ಮುಂದಿನ ಚುನಾವಣೆಗೆ ನಿಲ್ಲುತ್ತೇನೆ ಎಂದು ನಾನು ಹೇಳಿಲ್ಲ.
ಜನರು ಆಶೀರ್ವಾದ ಮಾಡಿದರೆ ಮುಂದೆ ಸಿಎಂ ಆಗುತ್ತೇನೆ ಎಂದಷ್ಟೇ ಹೇಳಿದ್ದೇನೆ.
Loading...

ನಾವು ಜಾರಿಗೆ ತಂದಿರುವ ಎಲ್ಲ ಯೋಜನೆಗಳಿಗೂ ಹಣ ಬಿಡುಗಡೆಯಾಗುತ್ತದೆ.
ಸಮನ್ವಯ ಸಮಿತಿಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ," ಎಂದ ಅವರು, "ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎನ್ನುವುದು ಶುದ್ಧ ಸುಳ್ಳು," ಎಂದು ತಿಳಿಸಿದರು.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ