ಪತ್ರ ಬರೆದು ಯಡವಟ್ಟು ಮಾಡಿಕೊಂಡರಾ ಬಿಎಸ್​ವೈ? ಕೇಂದ್ರದೊಂದಿಗೆ ತಮಿಳುನಾಡು ಸರ್ಕಾರ ಇಂದು ಮಾತುಕತೆ

ಮೇಕೆದಾಟು ಯೋಜನೆಯನ್ನು ಶತಾಯಗತಾಯ ತಡೆಯಬೇಕೆಂದು ತಮಿಳುನಾಡು ಯತ್ನಿಸುತ್ತಿದೆ. ಇವರು ಬರೆದ ಪತ್ರದಿಂದ ಕರ್ನಾಟಕ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರದಲ್ಲಿ ಹಿನ್ನಡೆಯಾಗುವ ಸಂಗತಿ ಇದರಿಂದ ದಟ್ಟವಾಗುತ್ತಿದೆ.

ಕಾವೇರಿ ನದಿ ನಕ್ಷೆ

ಕಾವೇರಿ ನದಿ ನಕ್ಷೆ

  • Share this:
ನವದೆಹಲಿ: ಅಂತರ ರಾಜ್ಯ ಜಲ ವಿವಾದಗಳು ನ್ಯಾಯಾಲಯ ಮತ್ತು ನ್ಯಾಯಾಧೀಕರಗಳು ಹೇಳಿದಾಗಲೂ ಮಾತುಕತೆ ಮೂಲಕ ಬಗೆಹರಿದ ಉದಾಹರಣೆಗಳಿಲ್ಲ. ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಶತಕಗಳಿಂದಲೂ ನಡೆದುಕೊಂಡು ಬರುತ್ತಿರುವ ಕಾವೇರಿ ಜಲ ವಿವಾದ ಅತ್ಯಂತ ಸೂಕ್ಷ್ಮವಾದುದಾಗಿದೆ. ರಾಜಕೀಯ ಕಾರಣಗಳಿಗೆ ಮಾತ್ರವಲ್ಲದೆ ಜನ ಸಮಾನ್ಯರು ಕೂಡ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಸಂಗತಿಯಾಗಿದೆ.

ಇಂಥ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದು ಯಡವಟ್ಟು ಮಾಡಿಕೊಂಡಿದ್ದಾರೆ. ಪರಿಣಾಮ ಮೇಕೆದಾಟು ಯೋಜನೆಯನ್ನು ಶತಾಯಗತಾಯ ತಡೆಯಬೇಕೆಂದು ತಮಿಳುನಾಡು ಯತ್ನಿಸುತ್ತಿದೆ. ಇವರು ಬರೆದ ಪತ್ರದಿಂದ ಕರ್ನಾಟಕ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರದಲ್ಲಿ ಹಿನ್ನಡೆಯಾಗುವ ಸಂಗತಿ ಇದರಿಂದ ದಟ್ಟವಾಗುತ್ತಿದೆ.

ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಯೋಜನೆಗಾಗಿ ರೂಪಿಸಿದ್ದ ಮೇಕೆದಾಟು ಅಣೆಕಟ್ಟು ಯೋಜನೆ ವಿಷಯದಲ್ಲಿ ಕರ್ನಾಟಕ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಮತ್ತು ಪರಿಸರ ಇಲಾಖೆಗೆ ಪತ್ರ ಬರೆದು ತಾತ್ವಿಕ ಒಪ್ಪಿಗೆ ಪಡೆದಿದೆ. ರಾಷ್ಟ್ರೀಯ ಜಲ‌ ನೀತಿಯಲ್ಲೂ ಕುಡಿಯುವ ನೀರಿಗಾಗಿ ಯೋಜನೆ ರೂಪಿಸಲು ಕೆಲವು ರಿಯಾಯಿತಿಗಳಿವೆ. ಮೇಕೆದಾಟು ಅಣೆಕಟ್ಟು ಯೋಜನೆ ಮೂಲಕ ತಮಿಳುನಾಡಿಗೆ ಹೋಗುತ್ತಿದ್ದ ಕರ್ನಾಟಕದಲ್ಲಿ ತಡೆಯುತ್ತಿರಲಿಲ್ಲ. ತಮಿಳುನಾಡು ಪಾಲಿನ ನೀರನ್ನು ಕೊಡುವುದಾಗಿ ಕರ್ನಾಟಕ ಹೇಳುತ್ತಾ ಬಂದಿತ್ತು. ಹೆಚ್ಚುವರಿ ನೀರನ್ನು ಮಾತ್ರ ಬಳಸಿಕೊಳ್ಳುವುದಾಗಿ ಹೇಳಿತ್ತು. ಈ ಎಲ್ಲಾ ಹಿನ್ನಲೆಯಲ್ಲೇ ಕರ್ನಾಟಕ ಯೋಜನೆಯ ಡಿಪಿಆರ್ ಅನ್ನು ರೂಪಿಸಿತ್ತು.

ಆದರೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ 'ಸೌಜನ್ಯದ ಪತ್ರ' ಬರೆದು ಕರ್ನಾಟಕದ ಹಿತಾಸಕ್ತಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.‌ ಈಗಾಗಲೇ ಮೇಕೆದಾಟು ಯೋಜನೆಗೆ ತಡೆ ನೀಡುವಂತೆ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.‌ ಜೊತೆಗೀಗ ಸಿಎಂ ಯಡಿಯೂರಪ್ಪ ಪತ್ರಕ್ಕೆ ಪ್ರತಿಕ್ರಿಯೆ ರೂಪದ ಪತ್ರ ಬತೆದಿರುವ ತಮಿಳುನಾಡು ಸಿಎಂ ಸ್ಟಾಲಿನ್ ಮೇಕೆದಾಟು ಯೋಜನೆಗೆ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.‌ ಯೋಜನೆ ಆರಂಭಿಸದಂತೆ ತಾಖೀತು ಮಾಡಿರುವ ಸ್ಟಾಲಿನ್, ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ನೀರಿನ‌ ಸಮಸ್ಯೆ ಉಲ್ಬಣವಾಗಲಿದೆ ಎಂದು ತಕರಾರು ತೆಗೆದಿದ್ದಾರೆ.

ಇಷ್ಟಕ್ಕೆ ಸುಮ್ಮನಾಗಿಲ್ಲ ತಮಿಳುನಾಡು ಸರ್ಕಾರ. ‌ಇಂದು‌ (ಜುಲೈ‌ 6) ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಆಗಲಿರುವ ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಭೇಟಿ ಮೇಕೆದಾಟು ಯೋಜನೆ ತಡೆ ನೀಡುವಂತೆ ಮನವಿ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಜುಲೈ 7ಕ್ಕೆ ಕೇಂದ್ರ ಸಚಿವ ಸಂಪುಟ ಪುನರ್​ರಚನೆ ಸಾಧ್ಯತೆ; ರಾಜ್ಯದಿಂದ ಯಾರಿಗೆ ಅವಕಾಶ

ಒಂದೆಡೆ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ವಿಚಾರಣೆ ಇದ್ದು ಈಗ ಕೇಂದ್ರ ಸರ್ಕಾರದ ವತಿಯಿಂದಲೂ ಅಡಚಣೆ ಉಂಟಾದರೆ ನಿಜಕ್ಕೂ ಕೂಡ‌ ಕರ್ನಾಟಕದ ಪರಿಸ್ಥಿತಿ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ ಆಗಲಿದೆ. ಸದ್ಯ ಜಲಸಂಪನ್ಮೂಲ ಖಾತೆಯನ್ನು ನಿರ್ವಹಿಸುತ್ತಿರುವ ಯಡಿಯೂರಪ್ಪ ಅವರನ್ನು ಈಗ ತಮಿಳುನಾಡಿನ‌ ವರಸೆಗಳು ಇನ್ನಷ್ಟು ಸಂಕಷ್ಟಕ್ಕೆ ದೂಡಿದಂತಾಗಿವೆ. ಅವರಿಗಿಂತ ಹೆಚ್ಚಾಗಿ‌ ಕರ್ನಾಟಕಕ್ಕೆ ಇದು ಭಾರೀ ಹೊಡೆತವಾಗಲಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನವಶ್ಯವಾಗಿ ಮನೆಯಿಂದ ಹೊರಗೆ ಹೋಗಬೇಡಿ.
Published by:HR Ramesh
First published: