ಕಾಮಗಾರಿ ಮುಗಿದು 10 ವರ್ಷವಾದರೂ ಉಪಯೋಗಕ್ಕೆ ಬಾರದ ಅಂಡರ್​ಪಾಸ್; ಸಿಎಂ ತವರಲ್ಲಿ ಜನರ ಪರದಾಟ

ನಗರದ ಪ್ರಮುಖ ಸ್ಥಳದಲ್ಲಿ ಅಂಡರ್ ಪಾಸ್  ಪಾದಚಾರಿ ಮಾರ್ಗ ನಿರ್ಮಾಣಗೊಂಡಿದ್ದರೂ ಕೂಡ, ಬಳಕೆಗೆ ಬಾರದಂತಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಹಲವಾರು ವರ್ಷಗಳಿಂದ ಈ ಅಂಡರ್ ಪಾಸ್​ನ ಗೇಟ್​ಗೆ ಬೀಗ ಹಾಕಲಾಗಿದೆ.

 ಅಂಡರ್ ಪಾಸ್

ಅಂಡರ್ ಪಾಸ್

  • Share this:
ಶಿವಮೊಗ್ಗ(ಫೆ.23): ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ನಾಗರೀಕರಿಗೆ ಅನುಕೂಲವಾಗಲಿ ಎಂದು ಅಂಡರ್ ಪಾಸ್ ರಸ್ತೆ ನಿರ್ಮಿಸಿತು. ಅದರೆ, 10 ವರ್ಷಗಳ ಹಿಂದೆ ಕಾಮಗಾರಿ ಮುಗಿದರೂ ಇನ್ನೂ ಸಾರ್ವಜನಿಕ ಉಪಯೋಗಕ್ಕೆ ಮುಕ್ತವಾಗಿಲ್ಲ ಈ ಅಂಡರ್ ಪಾಸ್. ದಿನ ನಿತ್ಯ ಸಾರ್ವಜನಿಕರು ಇಲ್ಲಿ ಓಡಾಟ ಮಾಡುವುದಕ್ಕೆ, ರಸ್ತೆ ದಾಟುವುದಕ್ಕೆ ಹರ ಸಾಹಸ ಮಾಡಬೇಕು.

2009 ರಲ್ಲಿ ಸಿದ್ಧಗೊಂಡ ಅಂಡರ್ ಪಾಸ್ 2020 ಆದರೂ ಸಾರ್ವಜನಿಕರ ಉಪಯೋಗಕ್ಕೆ ಸಿಕ್ಕಿಲ್ಲ. ಅಚ್ಚರಿ ಎಂದರೆ ಇಂಥದ್ದೊಂದು ಅಂಡರ್​ಪಾಸ್ ಇರುವುದು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲೇ. ಪಾಲಿಕೆ, ಜಿಲ್ಲಾಡಳಿತದ ಅಧಿಕಾರಿಗಳಿಂದ ಹಿಡಿದು, ಮುಖ್ಯಮಂತ್ರಿ, ಸಚಿವರ ಸೇರಿದಂತೆ ಎಲ್ಲರ ಇಚ್ಛಾಶಕ್ತಿಯ ಕೊರತೆಯಿಂದಾಗಿ, ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ಸಾರ್ವಜನಿಕರ ಉಪಯೋಗಕ್ಕೆ ಸಿಕಿಲ್ಲ. 2008 ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ, ನಗರದ ಶಿವಪ್ಪ ನಾಯಕ ವೃತ್ತ ಹಾಗೂ ಅಮೀರ್ ಅಹಮ್ಮದ್ ವೃತ್ತದಲ್ಲಿ ನಿರ್ಮಾಣಗೊಂಡಿರುವ ಅಂಡರ್ ಪಾಸ್ ಇನ್ನೂ ಕೂಡ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿಲ್ಲದಂತಾಗಿದೆ.

ನಗರದ ಪ್ರಮುಖ ಸ್ಥಳದಲ್ಲಿ ಅಂಡರ್ ಪಾಸ್  ಪಾದಚಾರಿ ಮಾರ್ಗ ನಿರ್ಮಾಣಗೊಂಡಿದ್ದರೂ ಕೂಡ, ಬಳಕೆಗೆ ಬಾರದಂತಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಹಲವಾರು ವರ್ಷಗಳಿಂದ ಈ ಅಂಡರ್ ಪಾಸ್​ನ ಗೇಟ್​ಗೆ ಬೀಗ ಹಾಕಲಾಗಿದೆ. ಜನದಟ್ಟಣೆ ಹೆಚ್ಚಾಗಿರುವ ಎರಡು ಪ್ರಮುಖ ಸ್ಥಳಗಳಲ್ಲಿ ಅಂಡರ್ ಪಾಸ್ ನಿರ್ಮಾಣಗೊಂಡಿದ್ದೇನೋ ಸರಿ. ಆದರೆ, ಉಪಯೋಗಕ್ಕೆ ಇಲ್ಲದ ಮೇಲೆ ಅದು ಇದ್ದರೂ ಏನು ಪ್ರಯೋಜನ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಶಿವಪ್ಪ ನಾಯಕ ವೃತ್ತದಲ್ಲಿರುವ ಅಂಡರ್ ಪಾಸ್ ಗಾಂಧಿ ಬಜಾರ್, ಹೂವಿನ ಮಾರುಕಟ್ಟೆ, ವೀರಶೈವ ಕಲ್ಯಾಣ ಮಂದಿರದ ರಸ್ತೆಯನ್ನು ಸಂಪರ್ಕಿಸುತ್ತದೆ. ಹಾಗೆಯೇ, ಅಮೀರ್ ಅಹಮದ್ ವೃತ್ತದಲ್ಲಿರುವ ಅಂಡರ್ ಪಾಸ್ ನೆಹರೂ ರಸ್ತೆ ಹಾಗೂ ಬಸ್​​ ನಿಲ್ದಾಣ ರಸ್ತೆಯನ್ನು ಸಂಪರ್ಕಿಸುತ್ತದೆ. ಈ ಎರಡು ವೃತ್ತದಲ್ಲಿ ಸಾಕಷ್ಟು ವಾಹನಗಳು ಸಂಚಾರ ಇರುವುದರಿಂದ ಪಾದಚಾರಿಗಳು ಜೀವಭಯದಲ್ಲೇ ರಸ್ತೆ ದಾಟಬೇಕಾದ ಪರಿಸ್ಥಿತಿ ಇದೆ.

ಇದನ್ನೂ ಓದಿ : ಕೋಟಿ ಬೆಲೆ ಬಾಳುವ ಭೂಮಿಯಲ್ಲಿ ಅರಣ್ಯ - ಶಿವಮೊಗ್ಗ ನಿವಾಸಿಯಿಂದ ಪರಿಸರ ಕಾಳಜಿ

ಅಂಡರ್ ಪಾಸ್ ಬಳಕೆಗೆ ಮುಕ್ತವಾದರೆ, ಹೆಚ್ಚು ಉಪಯೋಗವಾಗುತ್ತದೆ. ಆದರೆ, ಇತ್ತ ಯಾರೂ ಗಮನ ಹರಿಸುತ್ತಿಲ್ಲ. ಹಬ್ಬಗಳ ಸಮಯದಲ್ಲಿ  ಈ ರಸ್ತೆಯಲ್ಲಿ ಕಾಲಿಡಲು ಕೂಡ ಆಗದ ಪರಿಸ್ಥಿತಿ ಇದೆ. ಹೀಗಾಗಿ ಈಗಲಾದರೂ, ಸಾರ್ವಜನಿಕರ ಓಡಾಟಕ್ಕೆ ಈ ಅಂಡರ್ ಪಾಸ್ ತೆರೆಯಬೇಕಿದೆ.  ಇಲ್ಲವಾದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗಾದರೂ ವ್ಯಾಪಾರ ಮಾಡಲು ಮುಕ್ತ ಮಾಡಿಕೊಟ್ಟರೆ ಅನುಕೂಲವಾಗಲಿದೆ.
First published: