ಮುಷ್ಕರ ನಿಲ್ಲಿಸುವಂತೆ ಬಿಎಂಟಿಸಿ ಎಂಡಿ ಶಿಖಾ ಮನವಿ; ಸಾರಿಗೆ ನೌಕರರ ಜೊತೆ ಮಾತುಕತೆಗೆ ಸವದಿಗೆ ಸಿಎಂ ಸೂಚನೆ

ಸಾರಿಗೆ ನೌಕರರ ಸಭೆ ಬಳಿಕ ಅವರೊಂದಿಗೆ ಮಾತುಕತೆ ನಡೆಸುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಸಿಎಂ ಸೂಚನೆ ನೀಡಿದ್ದಾರೆ. ಒಂದು ವೇಳೆ ಮಾತುಕತೆ ಸಫಲವಾಗದಿದ್ದರೆ ಮುಂದೆ ಸರ್ಕಾರ ಕಠಿಣ ಕ್ರಮದ ಮೊರೆ ಹೋಗುವ ಸಾಧ್ಯತೆ ಇದೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
ಬೆಂಗಳೂರು(ಡಿ. 12): ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ವಿವಿಧ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ನೌಕರರ ಮುಷ್ಕರದಿಂದಾಗಿ ರಾಜ್ಯದ ಬಹುತೇಕ ಕಡೆ ಬಸ್ಸುಗಳ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರ ಅಸಮಾಧಾನಕ್ಕೂ ಸರ್ಕಾರ ಈಡಾಗಿದೆ. ಪ್ರತಿಭಟನೆ ಶುರುವಾದ ಮೊನ್ನೆಯಿಂದಲೂ ನೌಕರರ ಜೊತೆ ಮಾತುಕತೆಗೆ ಆಸಕ್ತಿ ತೋರದ ಸರ್ಕಾರ ಇದೀಗ ಎಚ್ಚೆತ್ತುಕೊಳ್ಳುತ್ತಿದೆ. ಇಂದು ಗೃಹ ಸಚಿವರ ಜೊತೆ ಸಿಎಂ ಸಭೆ ನಡೆಸಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಮುಷ್ಕರ ನಿರತ ಸಂಘಟನೆಗಳ ಜೊತೆ ಕೂಡಲೇ ಮಾತುಕತೆ ನಡೆಸುವಂತೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆನ್ನಲಾಗಿದೆ.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ಸಾರಿಗೆ ನಿಗಮಗಳ ನೌಕರರು ಮತ್ತೊಂದು ಸಭೆ ನಡೆಸಿದ್ದು, ಕಾರ್ಮಿಕರ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳ ಆಧಾರದ ಮೇಲೆ ಆ ಸಂಘಟನೆಗಳ ಜೊತೆ ಮಾತುಕತೆ ನಡೆಸುವಂತೆ ಸವದಿ ಅವರಿಗೆ ಬಿಎಸ್​ವೈ ಸಲಹೆ ನೀಡಿದ್ದಾರೆ. ಅವರ ಬೇಡಿಕೆಗಳನ್ನ ಈಡೇರಿಸುವುದಾಗಿ ಭರವಸೆ ನೀಡಿದರೂ ಸಾರಿಗೆ ನೌಕರರು ಒಪ್ಪದೆ ಈ ಮಾತುಕತೆ ವಿಫಲವಾದರೆ ಮುಂದಿನ ತೆಗೆದುಕೊಳ್ಳಿ ಎಂದೂ ಸಿಎಂ ತಿಳಿಸಿದ್ದಾರೆ ಎಂದ ಮಾಹಿತಿ ನ್ಯೂಸ್18 ಕನ್ನಡಕ್ಕೆ ಲಭ್ಯವಾಗಿದೆ.

ಮಾತುಕತೆ ವಿಫಲವಾದರೆ ಸರ್ಕಾರದ ಮುಂದಿನ ಕ್ರಮಗಳು:
1) ಮುಷ್ಕರ ನಿರತರಿಗೆ ಪ್ರತಿಭಟನೆ ನಡೆಸಲು ಇವತ್ತು ಒಂದೇ ದಿನ ಅವಕಾಶ ನೀಡಲಾಗುತ್ತದೆ. ನಾಳೆಯೂ ಮುಷ್ಕರ ನಡೆಸಿದರೆ ಆ ಸಂಘಟನೆಗಳ ಮುಖಂಡರ ಬಂಧನ ಮಾಡಲಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಸಂಘಟನೆಗಳ ನಾಯಕರನ್ನ ಬಂಧಿಸಲಾಗುತ್ತದೆ.
2) ಬಂಧನ ಕ್ರಮಕ್ಕೂ ನೌಕರರು ಜಗ್ಗದಿದ್ದರೆ ಮುಷ್ಕರನಿರತರ ಮೇಲೆ ದಂಡ ಪ್ರಯೋಗದಂಥ ಕ್ರಮ ತೆಗೆದುಕೊಳ್ಳಲಾಗುತ್ತದೆ.
3) ಪರ್ಯಾಯವಾಗಿ ಖಾಸಗಿ ಸಾರಿಗೆ ವ್ಯವಸ್ಥೆಯನ್ನ ಜಾರಿ ಮಾಡಲಾಗುತ್ತದೆ.
4) ಸಾರಿಗೆ ನೌಕರರಿಗೆ ಮೊದಲು ತಿಳಿವಳಿಕೆ ನೋಟೀಸ್ ನೀಡಲಾಗುತ್ತದೆ. ಅದಕ್ಕೆ ಸ್ಪಂದಿಸದಿದ್ದರೆ ಎಸ್ಮಾ ಕಾಯ್ದೆ ಜಾರಿ ಮಾಡಲಾಗುತ್ತದೆ. ಎಸ್ಮಾ ಕಾಯ್ದೆ ಪ್ರಕಾರ ಆಡಳಿತದ ಸೂಚನೆ ಮೀರಿ ಪ್ರತಿಭಟನೆ, ಮುಷ್ಕರ ನಡೆಸಿದರೆ ಅವರನ್ನ ಸೇವೆಯಿಂದ ಅಮಾನತುಗೊಳಿಸಬಹುದಾಗಿದೆ.

ಪ್ರತಿಭಟನೆ ಕೈಬಿಡುವಂತೆ ಬಿಎಂಟಿಸಿ ಎಂಡಿ ಮನವಿ:

ಇದೇ ವೇಳೆ, ಬಿಎಂಟಿಸಿ ನಿರ್ವಾಹಕ ನಿರ್ದೇಶಕಿ ಸಿ ಶಿಖಾ ಅವರು ಪ್ರತಿಭಟನೆ ಕೈಬಿಡುವಂತೆ ಬಿಎಂಟಿಸಿ ನೌಕರರಿಗೆ ಮನವಿ ಮಾಡಿದ್ದಾರೆ. ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ. ಮುಷ್ಕರದಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಕೋವಿಡ್​ನಿಂದ ಬಿಎಂಟಿಸಿಯೂ ಸಂಕಷ್ಟದಲ್ಲಿದೆ. ಈಗ ಮುಷ್ಕರ ನಡೆಸುವುದು ಸರಿಯಲ್ಲ. ಸಾರಿಗೆ ನೌಕರರ ಬೇಡಿಕೆಗಳಿಗೆ ಸರ್ಕಾರ ಕೂಡ ಸ್ಪಂದಿಸುತ್ತದೆ ಎಂದು ಐಎಎಸ್ ಅಧಿಕಾರಿಯೂ ಆದ ಶಿಖಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರದಿ: ಶರಣು ಹಂಪಿ / ಚಿದಾನಂದ ಪಟೇಲ್
Published by:Vijayasarthy SN
First published: