news18-kannada Updated:October 14, 2020, 10:23 PM IST
ವಿದ್ಯಾರ್ಥಿನಿ ತನುಜಾ
ಬೆಂಗಳೂರು(ಅಕ್ಟೋಬರ್. 14): ಕೋವಿಡ್ ಕಾರಣದಿಂದಾಗಿ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದೆ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದ ವಿದ್ಯಾರ್ಥಿನಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸಹಾಯ ಹಸ್ತ ಚಾಚಿದ್ದಾರೆ. ಇದರಿಂದಾಗಿ ವಿದ್ಯಾರ್ಥಿನಿ ನಿರಾತಂಕದಿಂದ ಬುಧವಾರ ಪರೀಕ್ಷೆ ಬರೆದಿದ್ದಾಳೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಲ್ಲೇನಹಳ್ಳಿಯ ವಿದ್ಯಾರ್ಥಿನಿ ತನುಜಾ ಕರೇಗೌಡ ಬೆಂಗಳೂರಿನ ಬಸವನಗುಡಿಯ ಕೇಂದ್ರದಲ್ಲಿ ನೀಟ್ ಪರೀಕ್ಷೆ ಬರೆದಿದ್ದಾಳೆ. ಕೋವಿಡ್ ನಿಂದಾದ ಬದಲಾವಣೆಗಳು ತನುಜಗೆ ನೀಟ್ ಪರೀಕ್ಷೆ ಬರೆಯಲು ಅಡ್ಡಿ ಮಾಡಿದ್ದವು. ಈ ಸಮಸ್ಯೆಯನ್ನರಿತು ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು ಹಾಗೂ ಸಚಿವರು ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಆಕೆಗೆ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ. ಶಿವಮೊಗ್ಗದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿನಿ ತನುಜಾ ವೈದ್ಯೆಯಾಗಿ ಸಮಾಜದ ಸೇವೆ ಮಾಡುವ ಕನಸು ಹೊತ್ತಿದ್ದಾಳೆ. ಈಕೆಯ ತಂದೆ ನಾಗರಾಜ ಕೃಷಿಕರಾಗಿದ್ದು, ಮಗಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ಕಳೆದ ವರ್ಷ ತನುಜಾ ಪಿಯುಸಿ ಪೂರ್ಣಗೊಳಿಸಿದ್ದಳು.
ಈಕೆಯ ಪ್ರತಿಭೆಯನ್ನು ಮೆಚ್ಚಿದ್ದ ನವೋದಯ ಶಾಲೆಯ ಆಡಳಿತ ಮಂಡಳಿ ಪುಣೆಯಲ್ಲಿ ನಡೆಯುವ ಕೋಚಿಂಗ್ಗೂ ಈಕೆಯನ್ನು ಆಯ್ಕೆ ಮಾಡಿತ್ತು. ಸೆಪ್ಟೆಂಬರ್ 13 ರಂದು ಎನ್ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ನೀಟ್ ಪರೀಕ್ಷೆ ಏರ್ಪಡಿಸಿತ್ತು. ಈ ವೇಳೆ ತನುಜ ಅವರ ಮನೆಯ ಬಳಿ ಕಂಟೋನ್ಮೆಂಟ್ ವಲಯವನ್ನು ಘೋಷಿಸಲಾಗಿತ್ತು. ಜತೆಗೆ, ತನುಜಗೆ ಜ್ವರ ಬಂದಿದ್ದರಿಂದ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗಿರಲಿಲ್ಲ.
ಇದರಿಂದಾಗಿ ತನುಜಾಳ ಆಸೆಯೇ ಕಮರಿಹೋಗುವ ಆತಂಕ ಉಂಟಾಗಿತ್ತು. ಆದರೆ ನಂತರ ಸುಪ್ರಿಂ ಕೋರ್ಟ್ ನಿರ್ದೇಶನದ ಮೇರೆಗೆ, ಎನ್ಟಿಎ ಮತ್ತೊಮ್ಮೆ ಪರೀಕ್ಷೆ ಏರ್ಪಡಿಸಿತು.ಆದರೆ, ಈ ಬಾರಿ ಪರೀಕ್ಷೆ ಬರೆಯಲು ಕೋವಿಡ್ ಸಂಬಂಧಿತ ವರದಿ ಹಾಗೂ ಕೆಲ ದಾಖಲೆಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕು ಎಂದು ಎನ್ಟಿಎ ಸೂಚಿಸಿತ್ತು.
ಈ ಅವಕಾಶದಿಂದ ಮತ್ತೆ ಸಂತಸಗೊಂಡ ತನುಜ, ದಾಖಲೆಗಳನ್ನು ಇ-ಮೇಲ್ ಮಾಡಲು ಉತ್ಸುಕಳಾಗಿದ್ದಳು. ಆದರೆ, ಹಳ್ಳಿಯಲ್ಲಿನ ನೆಟ್ ವರ್ಕ್ ಸಮಸ್ಯೆ ಹಾಗೂ ಕೋವಿಡ್ ವರದಿಗೆ ಸಂಬಂಧಿಸಿದ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಸರಿಯಾದ ಸಮಯದಲ್ಲಿ ಇ-ಮೇಲ್ ಕಳುಹಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಪರೀಕ್ಷೆ ಬರೆಯಲು ಇದ್ದ ಮತ್ತೊಂದು ಅವಕಾಶವೂ ನೆಲ ಕಚ್ಚಿತ್ತು.
ಈ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿ ತನುಜಾ ಹೇಳಿಕೊಂಡಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಡಾ.ಕೆ.ಸುಧಾಕರ್, ಮಧ್ಯಪ್ರವೇಶಿಸಿ ಸಹಾಯ ಮಾಡಿದ್ದಾರೆ. ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಚನೆ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎನ್ ಟಿಎ ತಾಂತ್ರಿಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಮೂಲಕ ವಿದ್ಯಾರ್ಥಿನಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ :
ಅಡಕೆ ಬೆಳೆಗಾರರ ಹಿತ ಕಾಪಾಡಿ: ಸಿಎಂಗೆ ಶಾಸಕ ಅರಗ ಜ್ಞಾನೇಂದ್ರ ಮನವಿಮಗಳು ಇನ್ನು ನೀಟ್ ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲ ಎಂಬ ಆತಂಕ ಉಂಟಾಗಿತ್ತು. ಆದರೆ ಸರಿಯಾದ ಸಮಯದಲ್ಲಿ ಮುಖ್ಯಮಂತ್ರಿಗಳು, ಸಚಿವರು ಮಧ್ಯಪ್ರವೇಶ ಮಾಡಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ದಾಖಲೆಗಳನ್ನು ಸಲ್ಲಿಸುವುದು ತಡವಾಗಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಪರೀಕ್ಷೆ ನಡೆಸುವ ಏಜೆನ್ಸಿಯವರು ಹೇಳಿದ್ದರು. ಸಿಎಂ ಹಾಗೂ ಸಚಿವರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ತನುಜಳ ತಾಯಿ ಹಿರಿಯಮ್ಮ ಕೃತಜ್ಞತೆ ತಿಳಿಸಿದ್ದಾರೆ.
ಸರ್ಜನ್ ಆಗಿ ಜನರ ಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇದೆ. ಈಗ ನೀಟ್ ಪರೀಕ್ಷೆಯನ್ನು ಯಾವುದೇ ಆತಂಕ ಇಲ್ಲದೆ ಬರೆದಿದ್ದೇನೆ. ಪರೀಕ್ಷೆ ಬಹಳ ಚೆನ್ನಾಗಿತ್ತು ಎಂದೆನಿಸಿದೆ. ಸಿಎಂ ಹಾಗೂ ಸಚಿವರಿಗೆ ಧನ್ಯವಾದ ಎಂದು ವಿದ್ಯಾರ್ಥಿನಿ ತನುಜಾ ತಿಳಿಸಿದ್ದಾಳೆ.
Published by:
G Hareeshkumar
First published:
October 14, 2020, 9:13 PM IST