ಬೆಂಗಳೂರು (ಏಪ್ರಿಲ್ 01); ಹಣ್ಣು ತರಕಾರಿ ಮಾರಾಟಕ್ಕೆ ಸಮಸ್ಯೆ ಆಗಬಾರದು, ಸರಕು ಸಾಗಣೆ ವಾಹನವನ್ನು ಪೊಲೀಸರು ತಡೆಯುವಂತಿಲ್ಲ, ರೈತರ ಬೆಳೆಗಳನ್ನು ಟ್ರೈನ್ ಮೂಲಕ ಹೊರ ರಾಜ್ಯಗಳಿಗೂ ಸಾಗಿಸಬಹುದು ಎಂಬ ಹತ್ತಾರು ಮಹತ್ವದ ತೀರ್ಮಾನಗಳನ್ನು ಸಿಎಂ ಯಡಿಯೂರಪ್ಪ ನೇತೃತ್ವದ ಸಭೆ ಇಂದು ತೆಗೆದುಕೊಂಡಿದೆ.
ಲಾಕ್‌ಡೌನ್‌ನಿಂದಾಗಿ ಕಳೆದ ಒಂದು ವಾರದಿಂದ ರೈತರು ಮತ್ತು ಗ್ರಾಹಕರಿಗೆ ವ್ಯಾಪಕ ತೊಂದರೆ ಉಂಟಾಗಿತ್ತು. ರೈತರ ಬೆಳೆಗಳಿಗೆ ಸೂಕ್ತ ಬೆಲೆ, ಬೇಡಿಕೆ ಮತ್ತು ಮಾರುಕಟ್ಟೆ ಲಭ್ಯವಾಗದೆ, ಸಪೋಟ, ಟೊಮೊಟೋ, ಅನಾನಸ್ ಸೇರಿದಂತೆ ಅನೇಕ ಬೆಳೆಗಳನ್ನು ರೈತ ರಸ್ತೆಗೆ ಚೆಲ್ಲಿ ಹೋಗುತ್ತಿರುವ ಕುರಿತು ಸಾಲು ಸಾಲು ವರದಿಯಾಗಿತ್ತು. ಹಾಲಿಗೂ ಸಹ ಬೇಡಿಕೆ ಇಲ್ಲದ ಕಾರಣ ರೈತರು ಹಾಲನ್ನು ಕಾಲುವೆಗೆ ಸುರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಹೀಗಾಗಿ ಇಂದು ರೈತರು ಮತ್ತು ಗ್ರಾಹಕರ ಹಿತ ಕಾಯುವ ನಿಟ್ಟಿನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರುಗಳು ಜೊತೆಗೆ ಮಹತ್ವದ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಹತ್ತಾರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಯಡಿಯೂರಪ್ಪ, “ಕಳೆದ ಒಂದು ವಾರದಿಂದ ಲಾಕ್‌ಡೌನ್‌ನಿಂದಾಗಿ ಅಗತ್ಯ ವಸ್ತುಗಳ ಸರಬರಾಜು ಸ್ಥಗಿತವಾಗಿತ್ತು. ಇದೀಗ ವಸ್ತುಗಳ ಸರಬರಾಜನ್ನು ಮುಂದುವರೆಸಲು ಸೂಚನೆ ನೀಡಲಾಗಿದೆ. ಹಣ್ಣು-ತರಕಾರಿ ಸರಬರಾಜಿಗೆ ಸಮಸ್ಯೆ ಆಗದಂತೆ ಪೊಲೀಸರಿಗೆ ತಿಳಿಸಲಾಗಿದೆ. ಇನ್ನೂ ರೈತರ ಬೆಳೆಗಳನ್ನು ಇತರೆ ರಾಜ್ಯಗಳಿಗೆ ಸಾಗಿಸಲೂ ಸಹ ಅನುಮತಿಸಲಾಗುತ್ತಿದೆ.
ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ. ಆದರೆ, ಜನ ಒಮ್ಮೆಲೆ ಹೆಚ್ಚು ಸಂಗ್ರಹಿಸುವ ಅಗತ್ಯ ಇಲ್ಲ. ವಸ್ತುಗಳ ಖರೀದಿಯ ನೆಪದಲ್ಲಿ ಜನ ಗುಂಪುಗೂಡುವಂತಿಲ್ಲ. ಸಾಮಾಜಿಕ ಅಂತರದಿಂದ ವಸ್ತುಗಳನ್ನು ಖರೀದಿ ಮಾಡಬೇಕು" ಎಂದು ಅವರು ಕಿವಿಮಾತು ಹೇಳಿದ್ದಾರೆ.
"ರೈತರ ಬೆಳೆಗಳನ್ನು ಇತರೆ ರಾಜ್ಯಗಳಿಗೆ ಸಾಗಿಸಲೂ ಸಹ ಅನುಮತಿಸಲಾಗುತ್ತಿದೆ. ಸರಕು ಸಾಗಾಣೆ ವಾಹನಗಳನ್ನು ತಡೆಯದಂತೆ ಪೊಲೀಸರಿಗೆ ತಿಳಿಸಲಾಗಿದೆ. ಕೆಎಂಎಫ್‌ನಿಂದ ಬರುವ ಹೆಚ್ಚುವರಿ ಹಾಲನ್ನು ಖರೀದಿಸಿ ಕೊಳಗೇರಿ ಪ್ರದೇಶಗಳಲ್ಲಿ ಉಚಿತವಾಗಿ ಹಾಲು ವಿತರಣೆ ಮಾಡಲೂ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದಲ್ಲದೆ, ಅಕ್ಕಿ ಮಿಲ್, ದಾಲ್ ಮಿಲ್ ತೆರೆಯಲು ಸೂಚಿಸಲಾಗಿದೆ. ರೇಷ್ಮೆ ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಬೆಳೆ ನಷ್ಟವಾದ ಕಾರಣ ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು" ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ : ಏಪ್ರಿಲ್ ಫೂಲ್; ಸುಳ್ಳು ವದಂತಿ ನಂಬಿ ಎಣ್ಣೆ ಅಂಗಡಿ ಮುಂದೆ ಜಮಾಯಿಸಿದ ಮದ್ಯಪ್ರಿಯರು!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ