ಬೆಂಗಳೂರು (ಜೂನ್ 03); ಕೊರೋನಾ ಸೋಂಕು ರಾಜ್ಯದಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಸೋಂಕು ನಿಯಂತ್ರಣದ ದೃಷ್ಟಿಯಿಂದ ಲಾಕ್ಡೌನ್ ಅನ್ನು ಮತ್ತೆ ಒಂದು ವಾರ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ದೃಢಪಡಿಸಿದ್ದಾರೆ. ಅಲ್ಲದೆ, ಕಾರ್ಮಿಕರು ಸೇರಿದಂತೆ ವಿವಿಧ ವಲಯದ ಜನರಿಗೆ ರೂ.500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಈಗಾಗಲೇ ಜೂನ್ 7ರವರೆಗೆ ಜಾರಿಯಲ್ಲಿದ್ದ ಲಾಕ್ಡೌನ್ನ್ನು ಜೂನ್ 14ರವರೆಗೆ ವಿಸ್ತರಿಸುವುದು ಖಚಿತವಾಗಿದೆ. ಇಂದು ಸಂಜೆ 5 ಗಂಟೆಗೆ ಆದೇಶ ಹೊರಡಿಸಿರುವ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಇದನ್ನು ಅಧೀಕೃತಪಡಿಸಿದ್ದಾರೆ. ಎರಡು ಹಂತದಲ್ಲಿ ಲಾಕ್ಡೌನ್ ಮಾಡಲಾಗುತ್ತಿದ್ದು, ಈಗ ಜೂನ್ 14ರವರೆಗೆ ಒಂದು ಲಾಕ್ ಡೌನ್ ಮುಂದುವರೆದರೆ, ಮತ್ತೆ ಜೂನ್ 21 ರವರೆಗೆ ಮತ್ತೊಂದು ಹಂತದ ಲಾಕ್ಡೌನ್ ಮುಂದುವರೆಯಲಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಸುದ್ದಿಗೋಷ್ಠಿಯಲ್ಲಿ ಲಾಕ್ಡೌನ್ ನ 500 ಕೋಟಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿರುವ ಸಿಎಂ ಯಡಿಯೂರಪ್ಪ, "ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೈಮಗ್ಗ ಕಾರ್ಮಿಕರಿಗೆ 3000ರೂ, ಚಲನಚಿತ್ರ ಕಲಾವಿದರಿಗೆ 3000ರೂ, ಮೀನುಗಾರರಿಗೆ 3000ರೂ, ಮುಜುರಾಯಿ ದೇವಸ್ಥಾನ ಅರ್ಚಕರು ಅಡುಗೆಯವರು ಸಿ ಗ್ರೂಪ್ ನೌಕರರಿಗೆ 3000ರೂ.
ಆಶಾ ಕಾರ್ಯಕರ್ತರಿಗೆ 3000ರೂ, ಅಂಗನವಾಡಿ ಕಾರ್ಯಕರ್ತರು ಸಹಾಯಕರಿಗೆ 2000ರೂ, ಅನುದಾನರಹಿತ ಶಾಲಾ ಶಿಕ್ಷಕರಿಗೆ 5000, ಪವರ್ ಲೂಂ ನೌಕರರಿಗೆ ತಲಾ 2000ರೂ ನೀಡಲಾಗುವುದು. ಇದಲ್ಲದೆ, ಎಂಎಸ್ ಎಂಇ ಕೈಗಾರಿಕೆಗಳ ವಿದ್ಯುತ್ ಶುಲ್ಕ ವಿನಾಯಿತಿ, ಇತರ ಕೈಗಾರಿಕೆಗಳು ಮೇ,ಜೂನ್ ಶುಲ್ಕ ವಿನಾಯಿತಿ, ರಫ್ತು ಓರಿಯಂಟ್ ಕೈಗಾರಿಕೆಗೆ ಅನುಮತಿ. ಹೋಟೆಲ್ಗಳು ಇಡೀ ದಿನ ತೆರೆದಿರಲಿದ್ದು, ಪಾರ್ಸಲ್ಗೆ ಮಾತ್ರ ಅನುಮತಿ ನೀಡಲಾಗಿದೆ" ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಇಂದು 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಘೋಷಣೆಯಲ್ಲಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ 5,000ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ, ಇದರ ವಿರುದ್ಧ ಕಿಡಿಕಾರಿರುವ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, "ಕೇವಲ ಐದು ಸಾವಿರ ಘೋಷಣೆ ತುಂಬ ನಿರಾಸೆ ತಂದಿದೆ. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಅನುದಾನವಿದೆ. ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಬೇಕು. ಕನಿಷ್ಟ ಹತ್ತು ಸಾವಿರ ಆದರೂ ಪರಿಹಾರ ಘೋಷಣೆ ಮಾಡಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ಎರಡು ಹಂತಗಳಲ್ಲಿ ಲಾಕ್ಡೌನ್ ಪಕ್ಕಾ:
ಜೂನ್ 7ರವರೆಗೆ ಇದ್ದ ಕರ್ನಾಟಕದ ಲಾಕ್ಡೌನ್ ಅನ್ನು ಸಿಎಂ ಯಡಿಯೂರಪ್ಪ ಇಂದು ಜೂನ್ 14ರ ವರೆಗೆ ವಿಸ್ತರಣೆ ಮಾಡಿ ಘೋಷಿಸಿದ್ದಾರೆ. ಆದರೆ, ಈ ನಡುವೆ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ 2 ಹಂತದಲ್ಲಿ ಲಾಕ್ಡೌನ್ ಘೋಷಣೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಜೂನ್ 14ರ ವರೆಗೆ ಒಂದು ಹಂತದ ಲಾಕ್ ಡೌನ್, ಮತ್ತೆ ಜೂನ್ 14ರಿಂದ 21ರ ವರೆಗೆ ಮತ್ತೊಂದು ಹಂತದ ಲಾಕ್ ಡೌನ್. ಒಟ್ಟು ಎರಡು ಹಂತಗಳಲ್ಲಿ ಲಾಕ್ ಡೌನ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ನ್ಯೂಸ್18ಗೆ ಲಭ್ಯವಾಗಿದೆ.
ಇದನ್ನೂ ಓದಿ: Kannada Google: ಕನ್ನಡಿಗರ ಸ್ವಾಭಿಮಾನಕ್ಕೆ ಮಣಿದ ಗೂಗಲ್; ಕೊಳಕು ಭಾಷೆ ಪ್ರಮಾದಕ್ಕೆ ಅಂತ್ಯ
ಒಂದೇ ಬಾರಿ ಎರಡು ವಾರ ಅಂದರೆ ತೊಂದರೆಯಾಗುತ್ತೆ ಹಾಗೂ ಪದೇ ಪದೇ ಲಾಕ್ ಡೌನ್ ನಿಂದ ಜನರು ಭಯಬೀಳುತ್ತಾರೆ ಎಂದು ಎರಡು ಹಂತದಲ್ಲಿ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ