ಬೆಂಗಳೂರು: ಸಿಎಂ (CM) ಆಗಿ ಅಧಿಕಾರ ಪಡೆದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ (Siddaramaiah) ತಮ್ಮ ಗೃಹ ಕಚೇರಿ ಕೃಷ್ಣಾಗೆ (Krishna) ಆಗಮಿಸಿದ್ರು. ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆ (pre-monsoon rains) ಅವಾಂತರ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಗಳ ಸಿಇಓಗಳ ಜೊತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು. ಮುಂಗಾರು ಶುರುವಾಗ್ತಾ ಇದೆ, ಬೆಳೆ ರಕ್ಷಣೆಗೆ ಮುಂಜಾಗ್ರತಾ ಕ್ರಮ ವಹಿಸಿ.. ನಾನು ಕೇವಲ ಸೂಚನೆ ಕೊಡೋದಿಲ್ಲ, ಎಚ್ಚರಿಕೆ ಕೊಡ್ತಾ ಇದ್ದೇನೆ.. ಸೂಚನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದಿದ್ದರೆ ಕಠಿಣ ಕ್ರಮಕ್ಕೆ ಸಿದ್ದರಾಗಿ ಅಂತ ಎಚ್ಚರಿಸಿದ್ರು.
ಅನಾಹುತ ತಡೆಗಟ್ಟಲು ಮುನ್ನೆಚ್ಚರಿಕೆ ಕೈಗೊಳ್ಳಿ
ಭಾರಿ ಮಳೆ, ಗಾಳಿಯಿಂದ ಮರಗಳು ಬಿದ್ದು ಹೋಗಿವೆ. ಸಿಡಿಲು, ಆಲಿಕಲ್ಲು ಮಳೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಅನಾಹುತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅಂತ ಸಿಎಂ ಸೂಚಿಸಿದರು. ನಿಮ್ಮ ಬಳಿ ಅನುದಾನ ಲಭ್ಯವಿದೆ. ಅಗತ್ಯವಿದ್ದರೆ, ಕೇಳಬೇಕು, ಪರಿಹಾರ ಕ್ರಮ ಕೈಗೊಳ್ಳಲು ತೊಂದರೆ ಇಲ್ಲ ಅಂತ ಭರವಸೆ ನೀಡಿದ್ರು.
ಹಾವೇರಿ ಗೋಲಿಬಾರ್ ಘಟನೆ ಮರುಕಳಿಸಬಾರದು
ಕೃಷಿ ಅಧಿಕಾರಿಗಳು ಬಿತ್ತನೆ ಚಟುವಟಿಕೆಗೆ ಅಗತ್ಯವಿರುವ ಬೀಜ, ಗೊಬ್ಬರ, ಕೀಟನಾಶಕಗಳನ್ನು ಒದಗಿಸಬೇಕು. ಹಾವೇರಿ ಗೋಲಿಬಾರಿನಂತಹ ಘಟನೆ ಮರುಕಳಿಸಬಾರದು ಅಂತ ಸಿಎಂ ಎಚ್ಚರಿಸಿದ್ರು. ಮಳೆ ಬಂದು ಮರಗಳು ಬಿದ್ದುಹೋದರೆ, ಕೂಡಲೇ ತೆರವು ಗೊಳಿಸಬೇಕು. ವಿದ್ಯುಚ್ಚಕ್ತಿ ಕಂಬಗಳು ಬಿದ್ದು ಹೋದರೆ, ಟ್ರಾನ್‌ಫಾರ್ಮರ್, ಸೇತುವೆಗಳು, ಶಾಲಾ ಕೊಠಡಿಗಳು ಶಿಥಿಲ ಆಗಿದ್ದರೆ ಸರಿಪಡಿಸಿ ಅಂತ ಹೇಳಿದ್ರು.
ಇದನ್ನೂ ಓದಿ: DK Shivakumar: ಪೊಲೀಸ್ ಇಲಾಖೆ ಕೇಸರಿಕರಣ ಮಾಡಲು ಹೊರಟಿದ್ದೀರಾ? ಸಭೆಯಲ್ಲಿ ಪೊಲೀಸರಿಗೆ ಡಿಕೆಶಿ ಕ್ಲಾಸ್!
ಕಚೇರಿ ಬಿಟ್ಟು ಫೀಲ್ಡ್‌ಗೆ ಹೋಗಿ!
ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಆಗದು. ಫೀಲ್ಡ್ ಗೆ ಹೋಗಬೇಕು.. ಕುಳಿತಲ್ಲೇ ಕುಳಿತು ಪರಿಣಾಮಕಾರಿಯಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದು.. ಅದಕ್ಕೇ ಮುಂಚಿತವಾಗಿ ಸಭೆ ಕರೆಯಲಾಗಿದೆ ಅಂತ ಸಿಎಂ ಹೇಳಿದ್ರು.
ಬೇಜವಾಬ್ದಾರಿಯಿಂದ ಕೆಲಸ ಮಾಡಬೇಡಿ
ಜನ ಸರ್ಕಾರದಿಂದ ಬದಲಾವಣೆ ಬಯಸಿದ್ದಾರೆ. ಸರ್ಕಾರಕ್ಕೆ ಹೊಸ ಇಮೇಜ್ ಕೊಡಲೇಬೇಕು. ಯಾವುದೇ ಕಾರಣಕ್ಕೆ ಕರ್ತವ್ಯ ಲೋಪ ಆಗಬಾರದು.. ಬೇಜವಾಬ್ದಾರಿತನದಿಂದ ಅನಾಹುತಗಳಾದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.. ನೆಪ ಹೇಳಿಕೊಂಡು ಪರಿಹಾರ ಕ್ರಮ ವಿಳಂಬ ಮಾಡುವುದು ಸರಿಯಲ್ಲ.. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರ ಬಂದಿದೆ ಎಂಬ ಸಂದೇಶ ಹೋಗಬೇಕು.
ಎಲ್ಲರ ಸ್ಥಾನವೂ ಜವಾಬ್ದಾರಿಯುತವಾದದ್ದು
ಜಿಲ್ಲಾಧಿಕಾರಿಗಳು, ಸಿಇಒಗಳದ್ದು ಜವಾಬ್ದಾರಿಯುತ ಸ್ಥಾನ. ಪೊಲೀಸ್ ವರಿಷ್ಠಾಧಿಕಾರಿಗಳ ಹೊಣೆಯೂ ಪ್ರಮುಖವಾದದ್ದು.. ಆಲಸ್ಯ ಬಿಟ್ಟು ಕೆಲಸ ಮಾಡಿ, ಬಹಳ ಜನ ಜಿಲ್ಲಾಧಿಕಾರಿಗಳು ತಾಲ್ಲೂಕುಗಳಿಗೆ ಭೇಟಿ ನೀಡಿರುವುದಿಲ್ಲ. ಇನ್ನು ಮುಂದೆ ಇಂತಹುದಕ್ಕೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ಮಾಡಬೇಕು ಅಂತ ಸಿದ್ದರಾಮಯ್ಯ ತಾಕೀತು ಮಾಡಿದ್ರು.
ಇದನ್ನೂ ಓದಿ: Siddaramaiah: ಐದು ವರ್ಷವೂ ಸಿದ್ದರಾಮಯ್ಯ ಅವ್ರೇ ಸಿಎಂ! ಕಾಂಗ್ರೆಸ್ ಪಾಳಯದಲ್ಲಿ ಹೊಸ 'ಬಾಂಬ್'!
ಅನುದಾನ ಅಗತ್ಯವಿದ್ದಲ್ಲಿ ಮಾಹಿತಿ ನೀಡಿ
ಕಳೆದ ಕೆಲವು ವರ್ಷಗಳಿಂದ ಪ್ರವಾಹ ನೋಡುತ್ತಾ ಇದ್ದೀರಿ.. ಹವಾಮಾನ ಇಲಾಖೆ ಸಂಪರ್ಕ- ಮುನ್ಸೂಚನೆ ಅರಿತು ಕೆಲಸ ಮಾಡಿ. ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಪ್ರವಾಹ ಬರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ, ಬೆಳೆಹಾನಿ ಮಾಹಿತಿ ಇರಬೇಕು. ಅನುದಾನ ಅಗತ್ಯವಿದ್ದಲ್ಲಿ ಮನವಿ ಸಲ್ಲಿಸಿ ಬಿಡುಗಡೆ ಮಾಡಿಸಿಕೊಳ್ಳಬೇಕು ಅಂತ ಸಭೆಯಲ್ಲಿ ಸೂಚನೆ ನೀಡಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ