ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿರುವ ಸಿಎಂ ನಿಯೋಗ; ಅತಿವೃಷ್ಟಿಯ ಪರಿಹಾರ ಕೋರಿ ಮನವಿ

news18
Updated:September 9, 2018, 3:04 PM IST
ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿರುವ ಸಿಎಂ ನಿಯೋಗ; ಅತಿವೃಷ್ಟಿಯ ಪರಿಹಾರ ಕೋರಿ ಮನವಿ
news18
Updated: September 9, 2018, 3:04 PM IST
ಚಿದಾನಂದ ಪಟೇಲ್, ನ್ಯೂಸ್​18 ಕನ್ನಡ

ಬೆಂಗಳೂರು, (ಸೆ. 9): ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಂಸದರು, ಸಚಿವರು ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ನಿಯೋಗ ನಾಳೆ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅತಿವೃಷ್ಟಿಗೆ ಸಂಬಂಧಿಸಿದಂತೆ ಪರಿಹಾರಕ್ಕೆ ಮನವಿ ಸಲ್ಲಿಸಲಿದೆ.

ನಿನ್ನೆ ಸಂಜೆಯೇ ರಾಜ್ಯದ ಹಲವು ಸಂಸದರು, ಸಚಿವರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.  ನಿಯೋಗದಲ್ಲಿ ಮಾಜಿ ಪ್ರಧಾನಿ ಹಾಗೂ ಹಾಸನ ಸಂಸದ ಹೆಚ್.ಡಿ. ದೇವೇಗೌಡ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ,  ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್,  ಕಂದಾಯ ಸಚಿವ ಆರ್. ವಿ. ದೇಶಪಾಂಡೆ, ಲೋಕೋಪಯೋಗಿ ಸಚಿವ  ಹೆಚ್.ಡಿ. ರೇವಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳೊಂದಿಗೆ ತೆರಳಿ ಪ್ರಧಾನಿಯವರಿಗೆ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯ ಕುರಿತು ಮನವರಿಕೆ ಮಾಡಿಕೊಡಲಿದ್ದಾರೆ.

ಈ ನಡುವೆ ಸಚಿವ ಡಿ.ಕೆ. ಶಿವಕುಮಾರ್​ ಮೇಲೆ ಜಾರಿ ನಿರ್ದೇಶನಾಲಯ ಎಫ್​ಐಆರ್​ ದಾಖಲಿಸಿದ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಪ್ರಧಾನಿಯವರನ್ನು ಭೇಟಿಯಾಗುವ ನಿಯೋಗದಲ್ಲಿ ಡಿ.ಕೆ. ಶಿವಕುಮಾರ್​ ಅವರ ಹೆಸರನ್ನು ಸೇರಿಸಿಲ್ಲ. ಕೊನೆಕ್ಷಣದಲ್ಲಿ ಡಿಕೆಶಿ ಹೆಸರನ್ನು ಸಿಎಂ ಕಾರ್ಯಾಲಯ ಕೈಬಿಟ್ಟಿದೆ. ಹಾಗೇ, ನಿನ್ನೆ ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ಸಂಭವಿಸಿವೆ.

ಸಚಿವ ಡಿಕೆಶಿ ಅವರ ಮೇಲೆ ಐಟಿ ದಾಳಿಯಾಗಲು ಯಡಿಯೂರಪ್ಪ ಬರೆದ ಪತ್ರ ಕಾರಣ ಎಂದು ಸಿಎಂ ಆರೋಪ ಮಾಡಿದ್ದರು. ಡಿಕೆಶಿ ಸಹೋದರರು ಕೂಡ ಅದನ್ನೇ ಹೇಳಿದ್ದರು. ಅದಕ್ಕೆ ಪುರಾವೆಯೆಂಬಂತೆ ಯಡಿಯೂರಪ್ಪ ಬರೆದಿರುವ ಪತ್ರವನ್ನೂ ಬಿಡುಗಡೆ ಮಾಡಲಾಗಿತ್ತು. ನಂತರ, ಆ ಪತ್ರ ನಕಲಿ ಎಂದು ಬಿಜೆಪಿ ಪ್ರಕಟಣೆ ಹೊರಡಿಸಿತ್ತು. ಒಟ್ಟಾರೆ ರಾಜ್ಯದಲ್ಲಿ ಸರ್ಕಾರ ಮತ್ತು ಬಿಜೆಪಿ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ನಿನ್ನೆ ಮುನ್ನೆಲೆಗೆ ಬಂದಿತ್ತು. ಈ ಎಲ್ಲ ಬೆಳವಣಿಗೆಗಳಿಂದಾಗಿ ಸಿಎಂ  ನೇತೃತ್ವದ ನಿಯೋಗದಲ್ಲಿ ಯಡಿಯೂರಪ್ಪ ತೆರಳುವುದು ಅನುಮಾನ ಎನ್ನಲಾಗುತ್ತಿದೆ. ಒಂದುವೇಳೆ ಅವರು ದೆಹಲಿಗೆ ತೆರಳುವ ಮನಸು ಮಾಡದಿದ್ದರೆ ಅವರ ಪ್ರತಿನಿಧಿಯನ್ನು ಕಳುಹಿಸಿಕೊಡುವ ಸಾಧ್ಯತೆಯಿದೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ