ನವದೆಹಲಿ(ಜ.23): ದೆಹಲಿಯ ಆರನೇ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಫೆಬ್ರವರಿ 8ರಂದು ಏಕ ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆ. 11ರಂದು ಮತ ಎಣಿಕೆ ಆಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ತಿಳಿಸಿದ್ದಾರೆ. ಈ ಮಧ್ಯೆ ಇಲ್ಲಿನ ವಿಧಾನಸಭೆ ಚುನಾವಣೆ ಗೆಲ್ಲಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಮತ್ತು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಈ ಮಧ್ಯೆಯೇ ನವದೆಹಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್ರನ್ನು ಸೋಲಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಹಲವರು ಯತ್ನಿಸುತ್ತಿದ್ಧಾರೆ. ಹಾಗಾಗಿಯೇ ಕೇಜ್ರಿವಾಲ್ ವಿರುದ್ಧ ಚಕ್ ದೇ ಇಂಡಿಯಾ ಖ್ಯಾತಿಯ ನಟ ಸೇರಿದಂತೆ 92 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎನ್ನಲಾಗುತ್ತಿದೆ.
ನವದೆಹಲಿ ಕ್ಷೇತ್ರದಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಎದರು 'ಚಕ್ ದೇ ಇಂಡಿಯಾ' ಸಿನಿಮಾ ಖ್ಯಾತಿಯ ಶೈಲೇಂದ್ರ ಸಿಂಗ್ ಶಲ್ಲಿ ಕಣಕ್ಕಿಳಿದಿದ್ದಾರೆ. ಈಗ ಅಂಜಾನ್ ಆದ್ಮಿ ಪಾರ್ಟಿಯ ಸದಸ್ಯ ಎಂದು ಹೇಳಿಕೊಂಡು ಕಣದಲ್ಲಿದ್ದಾರೆ. ಇವರು ಈ ಹಿಂದೆಯೇ 2009ರಲ್ಲಿ ಬಸ್ವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪ್ರಯಾಣಿಕನ್ನು ರಕ್ಷಿಸುವ ಮೂಲಕ ಸುದ್ದಿಯಾಗಿದ್ದರು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ 93 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್ಸು ಪಡೆಯಲು ನಾಳೆಯೇ ಕೊನೆಯ ದಿನಾಂಕ. ಹಾಗಾಗಿ ನಾಳೆ ಸಂಜೆ ವೇಳೆಗೆ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸಂಖ್ಯೆ ಗೊತ್ತಾಗಲಿದೆ.
ಇದನ್ನೂ ಓದಿ: ದೆಹಲಿ ಚುನಾವಣೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟ: ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ
ದೆಹಲಿ ವಿಧಾನಸಭೆ 70 ಸದಸ್ಯರ ಬಲ ಹೊಂದಿದೆ. 2015ರಲ್ಲಿ ನಡೆದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಬರೋಬ್ಬರಿ 67 ಸ್ಥಾನಗಳನ್ನು ಗೆದ್ದು ಬಹುತೇಕ ಕ್ಲೀನ್ ಸ್ವೀಪ್ ಮಾಡಿತ್ತು. ಅದಕ್ಕೂ ಹಿಂದೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಬಿಜೆಪಿ 31, ಆಪ್ ಪಕ್ಷ 28 ಹಾಗೂ ಕಾಂಗ್ರೆಸ್ 8 ಸ್ಥಾನ ಗಳಿಸಿದ್ದವು. ಬಿಜೆಪಿ ಸರ್ಕಾರ ರಚಿಸಲು ಮುಂದೆ ಬರಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಸನ್ನಿಹಿತ ಎಂದನಿಸುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಆಮ್ ಆದ್ಮಿ ಅಧಿಕಾರ ರಚಿಸಿತ್ತು. ಕೆಲವೇ ತಿಂಗಳ ಹಿಂದಷ್ಟೇ ಜನ್ಮತಾಳಿದ್ದ ಆಮ್ ಆದ್ಮಿ ಪಕ್ಷ ಒಂದೇ ವರ್ಷದ ಅಂತರದಲ್ಲಿ ರಾಜ್ಯವೊಂದರ ಅಧಿಕಾರ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಅರವಿಂದ್ ಕೇಜ್ರಿವಾಲ್ ದಿಲ್ಲಿ ‘ದೊರೆ’ಯಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ