ರಮೇಶ್ ಜಾರಕಿಹೊಳಿ ಬೆನ್ನತ್ತುತ್ತಿದ್ದಾರೆ ಸಿಎಂ ಗುಪ್ತಚರರು..! ಬೆಂಗಳೂರು, ಮುಂಬೈನಲ್ಲಿ ಭರ್ಜರಿ ತಲಾಶ್

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗುಪ್ತಚರರು ಎಚ್ಚರಿಕೆಯ ಕಣ್ಣಿಟ್ಟಿದ್ದರೆ, ಮುಂಬೈನಲ್ಲಿ 40 ಪೊಲೀಸರ ತಂಡವೊಂದು ನಾಲ್ವರ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದೆ.

Vijayasarthy SN | news18
Updated:February 11, 2019, 7:21 PM IST
ರಮೇಶ್ ಜಾರಕಿಹೊಳಿ ಬೆನ್ನತ್ತುತ್ತಿದ್ದಾರೆ ಸಿಎಂ ಗುಪ್ತಚರರು..! ಬೆಂಗಳೂರು, ಮುಂಬೈನಲ್ಲಿ ಭರ್ಜರಿ ತಲಾಶ್
ಕುಮಾರಸ್ವಾಮಿ
  • News18
  • Last Updated: February 11, 2019, 7:21 PM IST
  • Share this:
- ಕಿರಣ್ ಕೆ.ಎನ್. / ಶ್ರೀನಿವಾಸ ಹಳಕಟ್ಟಿ,

ಬೆಂಗಳೂರು(ಫೆ. 11): ಬಿಜೆಪಿಯ ಆಪರೇಷನ್ ಕಮಲಕ್ಕೆ ಸೇತುವೆ ಆಗಿ ಕೆಲಸ ಮಾಡುತ್ತಿದ್ದಾರೆನ್ನಲಾಗಿರುವ ರಮೇಶ್ ಜಾರಕಿಹೊಳಿ ಅವರು ಸಮ್ಮಿಶ್ರ ಸರಕಾರದ ಪಾಲಿಗೆ ದೊಡ್ಡ ತಲೆನೋವಾಗಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ವರು ಶಾಸಕರನ್ನು ಅನರ್ಹತೆಗೊಳಿಸುವಂತೆ ಸ್ಪೀಕರ್ ಅವರಿಗೆ ಕಾಂಗ್ರೆಸ್ ದೂರು ಕೊಟ್ಟಿರುವುದು ಒಂದೆಡೆಯಾದರೆ, ಹಲವು ದಿನಗಳಿಂದ ಕಣ್ಮರೆಯಲ್ಲಿರುವ ರಮೇಶ್ ಜಾರಕಿಹೊಳಿ ಅವರನ್ನು ಹುಡುಕಲು ಸರಕಾರ ಈಗ ಗುಪ್ತಚರರನ್ನ ನಿಯೋಜಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಮುತುವರ್ಜಿ ವಹಿಸಿ ಜಾರಕಿಹೊಳಿ ಅವರನ್ನು ಟ್ರ್ಯಾಕ್ ಮಾಡಿಸುತ್ತಿದ್ದಾರೆ. ಮುಂಬೈ ಹಾಗೂ ಬೆಂಗಳೂರಿನಲ್ಲಿ ಅತೃಪ್ತರ ಸುಳಿವಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಹಲವು ದಿನಗಳಿಂದ ಮುಂಬೈನ ಹೋಟೆಲ್​ವೊಂದರಲ್ಲಿ ತಂಗಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಬಜೆಟ್ ಅಧಿವೇಶನದ ಹಿಂದಿನ ದಿನವಷ್ಟೇ ಬೆಂಗಳೂರಿಗೆ ಬಂದರೆಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ, ಅತೃಪ್ತ ಶಾಸಕರು ಈಗ ಮುಂಬೈನಲ್ಲಿದ್ದಾರೋ ಅಥವಾ ಬೆಂಗಳೂರಿನಲ್ಲಿದ್ದಾರೋ ಸ್ಪಷ್ಟ ಸುಳಿವು ಲಭ್ಯವಿಲ್ಲ. ಹೀಗಾಗಿ, ಎರಡೂ ಕಡೆ ಅವರನ್ನು ಹುಡುಕಲಾಗುತ್ತಿದೆ.

ಇದನ್ನೂ ಓದಿ: ಬೆಳಗಾವಿ 'ಲೋಕ' ಸಮರದಲ್ಲಿ ನಾಲ್ಕನೇ ಬಾರಿ ಗೆಲುವು ಸಾಧಿಸಲಿದ್ದಾರಾ ಬಿಜೆಪಿಯ ಸುರೇಶ್ ಅಂಗಡಿ?

ರಮೇಶ್ ಜಾರಕಿಹೊಳಿ ಅವರ ಬಳಿ ಇರುವ ಐದಾರು ಕಾರುಗಳ ನಂಬರ್​ಗಳ ವಿವರ ಪಡೆದಿರುವ ಮುಖ್ಯಮಂತ್ರಿಗಳು, ತಮ್ಮ ಗುಪ್ತಚರರಿಗೆ ಈ ಕಾರುಗಳನ್ನ ಪತ್ತೆ ಹಚ್ಚಲು ತಿಳಿಸಿದ್ದಾರೆನ್ನಲಾಗಿದೆ. ನಗರದ ಎಲ್ಲಾ ಚೆಕ್​ಪೋಸ್ಟ್ ಮತ್ತು ಜಂಕ್ಷನ್​ಗಳಲ್ಲಿ ಜಾರಕಿಹೊಳಿ ಅವರ ಕಾರುಗಳ ನಂಬರ್ ಹಿಡಿದುಕೊಂಡು ಗುಪ್ತಚರ ಅಧಿಕಾರಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಆ ನಂಬರ್​ನ ಕಾರು ಕಂಡು ಬಂದರೆ ಕೂಡಲೇ ಮಾಹಿತಿ ನೀಡುವಂತೆ ಗುಪ್ತಚರರಿಗೆ ಸಿಎಂ ಸೂಚಿಸಿದ್ದಾರೆನ್ನಲಾಗಿದೆ. ರಮೇಶ್ ಜಾರಕಿಹೊಳಿ ಅವರು ಸಿಕ್ಕರೆ ಅವರೊಂದಿಗೆ ಖುದ್ದಾಗಿ ಮಾತುಕತೆ ನಡೆಸಿ ಅವರ ಮನವೊಲಿಸುವ ಉದ್ದೇಶ ಮುಖ್ಯಮಂತ್ರಿಗಳದ್ದಾಗಿದೆಯಂತೆ.

ಇದೇ ವೇಳೆ, ಅತೃಪ್ತರು ಮುಂಬೈನಲ್ಲೇ ಇರಬಹುದಾದ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬರೋಬ್ಬರಿ 40 ಪೊಲೀಸರ ಒಂದು ತಂಡವು ಮುಂಬೈಗೆ ಹೋಗಿದೆ. ತಮ್ಮ ಕ್ಷೇತ್ರದ ಶಾಸಕರು ಕಾಣೆಯಾಗಿದ್ದು, ಹುಡುಕಿಕೊಡಿ ಎಂದು ಸ್ಪೀಕರ್​ಗೆ ಜನರು ಪತ್ರ ಬರೆದಿದ್ದರು. ಇದರ ಆಧಾರವಾಗಿ ಸ್ಪೀಕರ್ ಅವರು ಗೃಹ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಹೀಗಾಗಿ, ಗೃಹ ಇಲಾಖೆಯು ನಾಲ್ವರು ಅತೃಪ್ತರನ್ನು ಹುಡುಕಲು ಮುಂಬೈಗೆ ಕಳುಹಿಸಿದೆ ಎಂಬ ಮಾಹಿತಿ ನ್ಯೂಸ್18 ಕನ್ನಡಕ್ಕೆ ಲಭ್ಯವಾಗಿದೆ. 
First published:February 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading